ಭೂಮಿ ನೀರಾವರಿ ಆಗುತ್ತೆಂದು ಕನಸು ಕಂಡ ರೈತರಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ!

By Ravi NayakFirst Published Sep 9, 2022, 12:14 PM IST
Highlights
  • ಭೂಸ್ವಾಧೀನದ ವಿರುದ್ದ ಹೆಚ್ಚಿದ ಕಾವು.
  • ಹೋರಾಟಕ್ಕಿಳಿದ ಹಲಕುರ್ಕಿ ಗ್ರಾಮದ ಮಹಿಳೆಯರು.
  • .ಬೃಹತ್ ಹೋರಾಟದ ಮೂಲಕ ಎಚ್ಚರಿಕೆ ನೀಡಿದ ಗ್ರಾಮಸ್ಥರು.
  •  2000 ಎಕರೆ ಭೂಮಿ ಭೂಸ್ವಾಧೀನಕ್ಕೆ ಮುಂದಾಗಿರೋ ಸರ್ಕಾರ...
  • ಸಚಿವ ನಿರಾಣಿ ವಿರುದ್ದ ಮಹಿಳೆಯರ ಆಕ್ರೋಶ.

ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ.
ಬಾಗಲಕೋಟೆ (ಸೆ.9) : ಅವರೆಲ್ಲಾ ತಮ್ಮ ಗ್ರಾಮದ ಭೂಸ್ವಾಧೀನದ ವಿರುದ್ದ ಹೋರಾಟಕ್ಕೆ ಇಳಿದವರು, ತಮ್ಮ ಭೂಮಿಯನ್ನ ಸರ್ಕಾರ ವಿಮಾನ ನಿಲ್ದಾಣ ಮತ್ತು ಕೈಗಾರಿಕೆ ಬಳಕೆಗೆ ಮುಂದಾಗುತ್ತೇ ಅನ್ನೋದು ಗೊತ್ತಾಗಿದ್ದೇ ತಡ ಇಡೀ ಗ್ರಾಮವೇ ಒಂದಾಗಿತ್ತು. ಮಹಿಳೆಯರು ಮುಂಚೂಣಿಯಲ್ಲಿದ್ದು, ಸಾವಿರಾರು ಜನ ಹೋರಾಟಕ್ಕಿಳಿದಿದ್ರು, ಇವುಗಳ ಮಧ್ಯೆ ದಿನದಿಂದ ದಿನಕ್ಕೆ ಒಂದಿಲ್ಲೊಂದು ಹೋರಾಟ ಮಾಡುವ ಮೂಲಕ ಹಲಕುರ್ಕಿ ಗ್ರಾಮಸ್ಥರು ಸರ್ಕಾರಕ್ಕೆ ಎಚ್ಚರಿಕೆ ಸಹ ನೀಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ...

Bagalkot: ಸವುಳು ಜವುಳು ಭೂಮಿಯಿಂದ ಕಂಗೆಟ್ಟ ಅನ್ನದಾತ: ಕಂಗಾಲಾದ ರೈತರು..!

ದಾರಿಯುದ್ದಕ್ಕೂ ಧಿಕ್ಕಾರದ ಕೂಗು ಕೂಗುತ್ತಾ ನಡೆದ ಹಲಕುರ್ಕಿ(Halakurki) ಗ್ರಾಮಸ್ಥರ ಪ್ರತಿಭಟನಾ ಮೆರವಣಿಗೆ,  ಭೂಸ್ವಾಧೀನದ ವಿರುದ್ದ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ಸಾರಿದ ಮಹಿಳೆಯರು, ಸ್ವಾಮೀಜಿ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ ನೀಡಿದ ಗ್ರಾಮಸ್ಥರು. 

ಅಂದಹಾಗೆ ಇಂತಹವೊಂದು ದೃಶ್ಯ ಕಂಡು ಬಂದಿದ್ದು ಮುಳುಗಡೆ ನಗರಿ ಬಾಗಲಕೋಟೆ(Bagalkote)ಯಲ್ಲಿ. ಹೌದು, ಭೂಸ್ವಾಧೀನದ ವಿರುದ್ದ ಹೋರಾಟಕ್ಕಿಳಿದಿದ್ದ ಇವರು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದವರು. ಗ್ರಾಮದಲ್ಲಿ 5 ಸಾವಿರ ಜನಸಂಖ್ಯೆ ಇದ್ದು, ಈ ಪೈಕಿ 3 ಸಾವಿರ ಎಕರೆ ಜಮೀನು ಇದೆ. ಈ ಮಧ್ಯೆ ಕಪ್ಪು ಎರೆಮಣ್ಣಿನ ಫಲವತ್ತಾದ ಜಮೀನು ಇದ್ದು, ವರ್ಷದಲ್ಲಿ 2 ಬಾರಿ ಬೆಳೆ ಪಡೆಯುತ್ತಾರೆ. ಫಲವತ್ತಾದ ಭೂಮಿಯಲ್ಲಿ ಸೂರ್ಯಕಾಂತಿ, ಶೇಂಗಾ ಸೇರಿದಂತೆ ಅನೇಕ ಬೆಳೆ ಬೆಳೆದು ರೈತ್ರು ನೆಮ್ಮದಿಯಿಂದ ಇದ್ದಾರೆ. ಆದ್ರೆ ಇದೀಗ ಸರ್ಕಾರ ಇವರ ಭೂಮಿಯನ್ನ ವಿಮಾನ ನಿಲ್ದಾಣ ಮತ್ತು ಕೈಗಾರಿಕೆಗಳಿಗಾಗಿ ಭೂಸ್ವಾಧೀನಕ್ಕೆ ಮುಂದಾಗಿದೆ. ಇದ್ರಿಂದ ರೊಚ್ಚಿಗೆದ್ದಿರೋ ಇಡೀ ಗ್ರಾಮಸ್ಥರು ಬೃಹತ್ ಹೋರಾಟಕ್ಕೆ ಮುಂದಾಗಿದ್ದಾರೆ.

 ಮೊದಲ ಹಂತವಾಗಿ ಟ್ರ್ಯಾಕ್ಟರ್(Tractor)​ಗಳ ಮೂಲಕ ಬಾಗಲಕೋಟೆ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ ಸಾವಿರಾರು ಜನರು ನವನಗರದ ಎಪಿಎಂಸಿ(APMC) ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ಬೃಹತ್ ಹೋರಾಟದ ಪ್ರತಿಭಟನಾ ಮೆರವಣಿಗೆ ನಡೆಸಿದ್ರು. ಈ ಸಂದರ್ಭದಲ್ಲಿ ನಮ್ಮ ಜನ್ಮ ಕೊಟ್ಟೇವು, ನಮ್ಮ ಭೂಮಿಯನ್ನ ಕೊಡುವ ಪ್ರಶ್ನೆಯೇ ಇಲ್ಲ ಎಂದು ಮಹಿಳೆ ಸೋಮವ್ವ ಆಕ್ರೋಶ ಹೊರ ಹಾಕಿದರು. 

ಭೂಮಿ ನೀರಾವರಿ ಆಗುತ್ತೆಂದು ಕನಸು ಕಂಡವರಿಗೆ ಬಿಗ್ ಶಾಕ್:

ಇನ್ನು ಇತ್ತೀಚಿಗೆ ಹಲಕುರ್ಕಿ ಗ್ರಾಮವನ್ನ ಏತ ನೀರಾವರಿ(Lift Irrigation) ಯೋಜನೆಗೆ ಒಳಪಡಿಸಲಾಗುವುದೆಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಇತ್ತೀಚಿಗೆ ಬಾಗಲಕೋಟೆ ಜಿಲ್ಲೆಗೆ ಆಗಮಿಸಿದ ವೇಳೆ ಘೋಷಣೆ ಮಾಡಲಾಗಿತ್ತು, ಇದ್ರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಮತ್ತು ಕೈಗಾರಿಕೆ ಸಚಿವ ಮುರುಗೇಶ ನಿರಾಣಿ(Murugesh R.Nirani) ಸಹ ಭಾಗಿಯಾಗಿದ್ದರು.  ಆದರೆ ಇದೀಗ ಗ್ರಾಮದ ಫಲವತ್ತಾದ ಭೂಮಿಯನ್ನ ಕೈಗಾರಿಕೆಗೆ ವಶಪಡಿಸಿಕೊಳ್ಳಲು ಮುಂದಾಗಿರೋ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರ ನಿಲುವು ಇದೀಗ ಗ್ರಾಮಸ್ಥರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾಲದ್ದಕ್ಕೆ ಸಚಿವರಾಗಲಿ, ಕಂದಾಯ ಅಧಿಕಾರಿಗಳಾಗಲಿ, ಕೆಐಎಡಿಬಿ(KIADB) ಅಧಿಕಾರಿಗಳಾಗಲಿ ಹಲಕುರ್ಕಿ ಗ್ರಾಮಕ್ಕೆ ಭೇಟಿ ನೀಡಿ ರೈತರ ಅಭಿಪ್ರಾಯ ಕೇಳದೆ, ಗ್ರಾಮಸಭೆಯನ್ನ ನಡೆಸದೆ ಏಕಾಏಕಿ 1,500 ಎಕರೆ ಜಮೀನು ಭೂಸ್ವಾಧೀನಕ್ಕೆ ಮುಂದಾಗಿರೋದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದು, ಹಲಕುರ್ಕಿ ಗ್ರಾಮಸ್ಥರಿಗೆ ಸರ್ಕಾರ ಬಿಗ್ ಶಾಕ್ ನೀಡಿದಂತಾಗಿದೆ.

ಪ್ರಾಣ ಬೇಕಾದರೆ ಕೊಟ್ಟೇವು, ಫಲವತ್ತಾದ ಭೂಮಿ ಕೊಡಲ್ಲ:

 ಹೌದು, ಸರ್ಕಾರದ ಭೂಸ್ವಾಧೀನದ ವಿರುದ್ಧ ಸಿಡಿದೆದ್ದಿರೋ ಹಲಕುರ್ಕಿ ಗ್ರಾಮಸ್ಥರು, ಒಂದೊಮ್ಮೆ ಸರ್ಕಾರ ಭೂಸ್ವಾಧೀನ ನಡೆಸಲೇಬೇಕೆಂದಾದರೆ ನಮ್ಮ ಪ್ರಾಣ ಪಡೆದು ಮಾಡಲಿ, ಆದ್ರೆ ನಮ್ಮ ಜಮೀನು ಬಿಟ್ಟು ಕೊಡುವ ಮಾತೇ ಇಲ್ಲ, ಒಂದೊಮ್ಮೆ ಜಮೀನು ಕಳೆದುಕೊಂಡಲ್ಲಿ ನಾವು ಎಲ್ಲಿ ದುಡಿಯೋದು, ಈಗಾಗಲೇ ಕೆಲ್ಸ ಇಲ್ಲದೆ ಸಾಕಷ್ಟು ಜನ ಗ್ರಾಮ ಬಿಟ್ಟು ನಗರಕ್ಕೆ ಹೋಗಿದ್ದಾರೆ. ಒಂದೊಮ್ಮೆ ಈಗ ಮತ್ತೇ ಭೂಸ್ವಾಧೀನ ಆದಲ್ಲಿ ಕುಟುಂಬಗಳು ಅತಂತ್ರವಾಗಿ ಬದುಕುವುದು ಕಷ್ಟವಾಗಲಿದೆ, ಹೀಗಾಗಿ ಸಚಿವ ನಿರಾಣಿಯವರು ಈ ಬಗ್ಗೆ ಪರಾಮರ್ಶಿಸಿ ನಿಲುವು ಬದಲಿಸಬೇಕು, ಇಲ್ಲವಾದಲ್ಲಿ ನಮ್ಮ ಹೋರಾಟವನ್ನ ಇನ್ನಷ್ಟು ಉಗ್ರ ಗೊಳಿಸುತ್ತೇವೆ ಎಂದು ಗ್ರಾಮದ ರೈತ ಮಹಿಳೆ ಪಾರವ್ವ ಎಚ್ಚರಿಕೆ ನೀಡಿದರು.

ಬಾಗಲಕೋಟೆ: ರೈತ ವಿರೋಧಿ ಕಾಯ್ದೆ ಕೈಬಿಡಲು ಯುವಕನಿಂದ 3,430 ಕಿಮೀ ಪಾದಯಾತ್ರೆ..!
                                        
ಒಟ್ಟಿನಲ್ಲಿ ತಮ್ಮ ಗ್ರಾಮದ ಭೂಸ್ವಾಧೀನದ ವಿರುದ್ದ ಬೀದಿಗಿಳಿದು ಹೋರಾಟಕ್ಕಿಳಿದ ಜನರು ಇದೀಗ ಜಿಲ್ಲಾಡಳಿತಕ್ಕೆ ಬೃಹತ್​ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಮನವಿ ನೀಡಿದ್ದು, ಇದಕ್ಕೆ ಒಂದೊಮ್ಮೆ ಸರ್ಕಾರ ಸ್ಪಂದನೆ ನೀಡದೇ ಹೋದಲ್ಲಿ ಇನ್ನುಷ್ಟು ಬೃಹತ್ ಪ್ರತಿಭಟನಾ ಹೋರಾಟ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದು, ಇದಕ್ಕೆ ಸರ್ಕಾರ ಯಾವ ರೀತಿ ಸ್ಪಂದಿಸುತ್ತೇ ಅಂತ ಕಾದು ನೋಡಬೇಕಿದೆ.

click me!