ಜಿಲ್ಲಾದ್ಯಂದ ಸುರಿದ ಭಾರೀ ಮಳೆ| ರಸ್ತೆ ಮೇಲೆ ಎರಡು ಅಡಿ ತುಂಬಿ ಹರಿದ ನೀರು| ಹಿರೇಕೆರೂರು, ಹಾನಗಲ್ಲ ಭಾಗದಲ್ಲೂ ಭರ್ಜರಿ ಮಳೆ| ಹಳೆ ಪಿಬಿ ರಸ್ತೆಯಲ್ಲಿ ಬಸ್ ನಿಲ್ದಾಣದವರೆಗೂ ಎರಡು ಅಡಿಗೂ ಹೆಚ್ಚು ನೀರು ಹರಿದು ಸಂಚಾರ ಸ್ಥಗಿತಗೊಂಡಿತು| ಹಾನಗಲ್ಲ ರಸ್ತೆ ಮೇಲೂ ನೀರು ತುಂಬಿ ಹರಿದಿದ್ದರಿಂದ ಬಸ್ ನಿಲ್ದಾಣದ ಪ್ರದೇಶದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತು| ಏಕಾಏಕಿಯಾಗಿ ಸುರಿದ ಭಾರಿ ಮಳೆಗೆ ಮಾರುಕಟ್ಟೆಪ್ರದೇಶ ಸ್ತಬ್ಧಗೊಂಡಂತಾಯಿತು| ಗುಡುಗು, ಮಿಂಚು, ಗಾಳಿ ಸಹಿತವಾಗಿ ರಭಸವಾಗಿ ಹೊಯ್ದ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ|
ಹಾವೇರಿ[ಅ.4]: ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳಲ್ಲಿ ಗುರುವಾರ ಸಂಜೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಭಾರೀ ಮಳೆ ಸುರಿದಿದ್ದು, ಸಂಚಾರ ಅಸ್ತವ್ಯಸ್ತಗೊಂಡಿತು.
ನಗರದ ಪ್ರವಾಸಿ ಮಂದಿರದ ಎದುರು ಹಳೆ ಪಿಬಿ ರಸ್ತೆಯಲ್ಲಿ ಬಸ್ ನಿಲ್ದಾಣದವರೆಗೂ ಎರಡು ಅಡಿಗೂ ಹೆಚ್ಚು ನೀರು ಹರಿದು ಸಂಚಾರ ಸ್ಥಗಿತಗೊಂಡಿತು. ಹಾನಗಲ್ಲ ರಸ್ತೆ ಮೇಲೂ ನೀರು ತುಂಬಿ ಹರಿದಿದ್ದರಿಂದ ಬಸ್ ನಿಲ್ದಾಣದ ಪ್ರದೇಶದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತು. ಏಕಾಏಕಿಯಾಗಿ ಸುರಿದ ಭಾರಿ ಮಳೆಗೆ ಮಾರುಕಟ್ಟೆಪ್ರದೇಶ ಸ್ತಬ್ಧಗೊಂಡಂತಾಯಿತು. ಗುಡುಗು, ಮಿಂಚು, ಗಾಳಿ ಸಹಿತವಾಗಿ ರಭಸವಾಗಿ ಹೊಯ್ದ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಬಸ್, ಲಾರಿ ಸಹಿತ ದೊಡ್ಡ ವಾಹನಗಳೇ ನಿಲ್ಲುವಂತಾಯಿತು. ಶಹರ ಠಾಣೆ ಎದುರು, ತಾಪಂ ಕಚೇರಿ ಎದುರು ರಸ್ತೆಯಲ್ಲಿ ನಿಲ್ಲಿಸಿಟ್ಟಿದ್ದ ಬೈಕ್, ಕಾರುಗಳು ಅರ್ಧ ಭಾಗ ಮುಳುಗಿದ್ದವು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹಿರೇಕೆರೂರು, ಹಾನಗಲ್ಲ ಭಾಗದಲ್ಲೂ ಅರ್ಧ ಗಂಟೆ ಕಾಲ ಧಾರಾಕಾರ ಮಳೆ ಸುರಿದಿದೆ. ರಾಣಿಬೆನ್ನೂರು, ಬ್ಯಾಡಗಿ, ಸವಣೂರು ಮತ್ತು ಶಿಗ್ಗಾಂವಿ ಭಾಗದಲ್ಲೂ ಸಾಧಾರಣ ಮಳೆಯಾಗಿದೆ. ಮಧ್ಯಾಹ್ನದವರೆಗೂ ಚುರುಗುಟ್ಟುವ ಬಿಸಿಲು ಇತ್ತಾದರೂ ಬಳಿಕ ದಟ್ಟಮೋಡ ಕವಿದು ಗುಡುಗು ಆರಂಭವಾಯಿತು. ಬಳಿಕ ಜೋರಾದ ಮಳೆ ಶುರುವಾಗಿದೆ. ಗುಡುಗು ಮಿಂಚಿನ ಆರ್ಭಟವೂ ಜೋರಾಗಿದ್ದರಿಂದ ಇದೇ ವೇಳೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತು.
ರಾಣಿಬೆನ್ನೂರಲ್ಲಿ ತಗ್ಗು ಪ್ರದೇಶಗಳಿಗೆ ನೀರು
ರಾಣಿಬೆನ್ನೂರು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಗುರುವಾರ ನಿರಂತರವಾಗಿ ಒಂದು ಗಂಟೆಯ ಕಾಲ ಮಳೆ ನಿರಂತರವಾಗಿ ಸುರಿಯಿತು. ಮಳೆಯಿಂದಾಗಿ ಇಲ್ಲಿನ ಚೌಡೇಶ್ವರ ನಗರ, ಪಂಪಾನಗರ, ಚಿದಂಬರ ನಗರ, ಉಮಾಶಂಕರ ನಗರ ಸೇರಿದಂತೆ ವಿವಿಧ ಭಾಗದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಯಿತು. ನಗರದ ಪಿಬಿ ರಸ್ತೆಯಲ್ಲಿರುವ ಲಲಿತ ಭವನ ಹತ್ತಿರದಲ್ಲಿ ಬೀದಿ ಬದಿಯಲ್ಲಿ ಕೋಳಿ ವ್ಯಾಪಾರ ಮಾಡುತ್ತಿದ್ದ ಟೆಂಟ್‌ಗಳಿಗೆ ನೀರು ನುಗ್ಗಿ ವ್ಯಾಪಾರಸ್ಥರು ಕೋಳಿಗಳನ್ನು ಸ್ಥಳಾಂತರ ಮಾಡಲು ತೊಂದರೆ ಎದುರಿಸಬೇಕಾಯಿತು. ಇನ್ನು ಪಿಬಿ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವ ಪರಿಣಾಮ ನೀರು ಚರಂಡಿ ತುಂಬಿ ರಸ್ತೆ ಮೇಲೆ ಹರಿದು ಪರಿಣಾಮ ವಾಹನ ಸವಾರರು ಹರಸಾಹಸ ಪಟ್ಟರು.
ಕೆಲಭಾಗದಲ್ಲಿ ಮನೆ ಹಾಗೂ ಹೋಟೆಲ್‌ಗಳಲ್ಲಿ ನೀರು ನುಗ್ಗಿದ್ದರಿಂದ ನಿವಾಸಿಗಳು ಸುಮಾರು ಒಂದು ಗಂಟೆಯ ಕಾಲ ನೀರನ್ನು ಹೊರ ಹಾಕಿದರು. ಮೇಡ್ಲೇರಿ ರಸ್ತೆಯಲ್ಲಿರುವ ಚೌಡೇಶ್ವರ ದೇವಸ್ಥಾನದ ಆವರಣದಲ್ಲಿ ಕೆಲಕಾಲ ನೀರು ನುಗ್ಗಿದೆ. ಒಟ್ಟಾರೆ ಮಧ್ಯಾಹ್ನ ಬಿಸಿಲಿನ ಪ್ರಖರತೆಯಿಂದ ಬಳುತ್ತಿದ್ದ ಜನರಿಗೆ ಮಳೆ ತಂಪರೆಯಿತು. ಆದರೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ಕಷ್ಟಪಡ ಬೇಕಾಯಿತು.
ಮಳೆಗೆ ಗೋಡೆ ಕುಸಿದು ಮಗು ಸಾವು
ಗುರುವಾರ ಸಂಜೆ ಸುರಿದ ಭಾರಿ ಮಳೆಗೆ ಗೋಡೆ ಕುಸಿದು ಬಾಲಕ ಮೃತಪಟ್ಟು, ಇಬ್ಬರು ಬಾಲಕರು ಸೇರಿದಂತೆ ಮೂವರು ಗಾಯಗೊಂಡ ಘಟನೆ ಹಾನಗಲ್ಲ ತಾಲೂಕಿನ ಹೋತನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಸಂದೀಪ ಜಯಪ್ಪ ಮೆಳ್ಳಳ್ಳಿ (6) ಮೃತ ಬಾಲಕ. ಗ್ರಾಮದ ಗುಡ್ಡಪ್ಪ ಅಂಗಡಿ ಎಂಬವರ ಮನೆ ಮೇಲೆ ಪಕ್ಕದ ಮನೆಯ ಗೋಡೆ ಕುಸಿದು ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ರಕ್ಷಿತಾ, ಪ್ರತಾಪ ಹಾಗೂ ನೀಲಮ್ಮ ಎಂಬವರಿಗೆ ಗಾಯವಾಗಿದೆ.
ಗುಡ್ಡಪ್ಪ ಎಂಬವರ ಮನೆಗೆ ಆಟವಾಡಲು ಹೋದಾಗ ಗೋಡೆ ಕುಸಿದು ಬಿದ್ದಿದೆ. ಸುಮಾರು ಒಂದು ಗಂಟೆ ಕಾಲ ಧಾರಾಕಾರವಾಗಿ ಮಳೆ ಸುರಿದದ್ದರಿಂದ ಗೋಡೆ ನೆನೆದು ಬಿದ್ದಿದೆ. ಆಟವಾಡುತ್ತಿದ್ದ ಬಾಲಕ ಗೋಡೆ ಮಣ್ಣಿನಡಿ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಗಾಯಗೊಂಡವರನ್ನು ತಕ್ಷಣ ಅಕ್ಕಿಆಲೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.