ಜಿಲ್ಲೆಯ ಮಲೆನಾಡು ಹಾಗೂ ಬಯಲು ಭಾಗದ ಹಲವೆಡೆ ಇಂದು ಮಳೆ ಸುರಿದಿದ್ದು, ಬಿರುಬೇಸಿಗೆಯಿಂದ ಕಾದ ಕಾವಲಿಯಂತಾಗಿದ್ದ ಭೂಮಿಗೆ ತಂಪೆರೆದಿದೆ. ಇದರ ನಡುವೆ ಮಲೆನಾಡಿನಲ್ಲಿ ಸಿಡಿಲಿಗೆ ರೈತ ಬಲಿಯಾಗಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಏ.13): ಜಿಲ್ಲೆಯ ಮಲೆನಾಡು ಹಾಗೂ ಬಯಲು ಭಾಗದ ಹಲವೆಡೆ ಇಂದು ಮಳೆ ಸುರಿದಿದ್ದು, ಬಿರುಬೇಸಿಗೆಯಿಂದ ಕಾದ ಕಾವಲಿಯಂತಾಗಿದ್ದ ಭೂಮಿಗೆ ತಂಪೆರೆದಿದೆ. ಇದರ ನಡುವೆ ಮಲೆನಾಡಿನಲ್ಲಿ ಸಿಡಿಲಿಗೆ ರೈತ ಬಲಿಯಾಗಿದ್ದಾರೆ. ಇತ್ತ ಮಳೆ ನಡುವೆಯೂ ಮೂಡಿಗೆರೆ ತಾಲೂಕಿನಲ್ಲಿ ಜನರು ಬೀಗರ ಬಾಡೂಟ ಸವಿದಿದ್ದಾರೆ.
undefined
ಮಳೆಯಿಂದ ರೈತಾಪಿ ವರ್ಗದಲ್ಲಿ ಸಂತಸ: ಚಿಕ್ಕಮಗಳೂರು ನಗರ ಸೇರಿದಂತೆ ಕೆಲವಡೆ ಸಾಧಾರಣ ಮಳೆಯಾಗಿದ್ದರೆ, ತರೀಕೆರೆ, ಆಲ್ದೂರು ಇತರೆಡೆಗಳಲ್ಲಿ ಉತ್ತಮ ಪ್ರಮಾಣದ ಮಳೆ ಸುರಿದಿದೆ. ರೈತರ ಭರವಸೆಯ ಮಳೆಯಾದ ರೇವತಿ ಕೊನೆಗೂ ಕರುಣೆ ತೋರಿದ್ದು, ಬಿಸಿಲ ಧಗೆಗೆ ಹೈರಾಣಾಗಿದ್ದ ಜನತೆಗೆ ಸಮಾಧಾನ ಉಂಟುಮಾಡಿದೆ.ಚಿಕ್ಕಮಗಳೂರು ನಗರದಲ್ಲಿ ಮಧ್ಯಾಹ್ನ ಜೋರಾಗಿ ಆರಂಭವಾದ ಮಳೆ ಭರವಸೆ ಮೂಡಿಸಿತ್ತಾದರೂ ಕೆಲವೇ ಕ್ಷಣದಲ್ಲಿ ಬಿರುಸು ಕಳೆದುಕೊಂಡಿತು. ಆದರೆ ಸಂಜೆ ವರೆಗೂ ತುಂತುರು ಹನಿ ಹಾಕುತ್ತಾ ಇಡೀ ವಾತಾವರಣವನ್ನು ತಣ್ಣಗಾಗಿಸಿತು. ಹಲವಾರು ತಿಂಗಳುಗಳಿಂದ ಬಿಸಿಲ ಬೇಗೆಗೆ ಸೊರಗಿದ್ದ ಜನರು ಅಂತೂ ವರುಣ ಕಣ್ಣು ತೆರೆದ ಎಂದು ನಿಟ್ಟುಸಿರು ಬಿಟ್ಟರು. ಚಿಕ್ಕಮಗಳೂರಿನ ಅರೆಮಲೆನಾಡು ಭಾಗ ಕಳಸಾಪುರ ಸೇರಿದಂತೆ ಮಲ್ಲೇನಹಳ್ಳಿ, ಖಾಂಡ್ಯ ಹಾಗೂ ಮುತ್ತೋಡಿ ಅರಣ್ಯ ಭಾಗದಲ್ಲೂ ಮಳೆಯಾಗಿರುವುದು ಸಂತಸ ಮೂಡಿಸಿದೆ.
ಸುಳ್ಳು ಘೋಷಣೆ ಮಾಡಿ ಮೋದಿ 2 ಬಾರಿ ಅಧಿಕಾರಕ್ಕೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿಡಿಲಿಗೆ ರೈತ ಸಾವು: ಎನ್ ಆರ್ ಪುರ ತಾಲೂಕಿನಲ್ಲಿ ಇಂದು ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ. ಮಳೆ ಜೊತೆಗೆ ಗುಡುಗು ಸಿಡಿಲು ಕೂಡ ಸಂಭವಿಸಿದೆ. ಎನ್ ಆರ್ ಪುರ ತಾಲೂಕಿನಲ್ಲಿ ಸಿಡಿಲಿಗೆ ರೈತ ಬಲಿಯಾಗಿದ್ದಾರೆ. ತೋಟಕ್ಕೆ ಹೋಗಿದ್ದ ರೈತನಿಗೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಎನ್.ಆರ್.ಪುರ ತಾಲೂಕಿನ ಅರಳಿಕೊಪ್ಪದ ಶಂಕರ್ (48) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಸಂಜೆಯಿಂದ ಗುಡುಗು ಮಿಂಚು ಸಹಿತ ಧಾರಾಕಾರವಾಗಿ ಎನ್ ಆರ್ ಪುರ ತಾಲೂಕಿನಲ್ಲಿ ಮಳೆ ಸುರಿದಿದೆ. ಶೃಂಗೇರಿ, ಎನ್ಆರ್ ಪುರ, ಬಾಳೆಹೊನ್ನೂರು ಭಾಗದಲ್ಲೂ ನಿನ್ನೆ ಮಳೆಯಾಗಿದ್ದರೆ, ಕೊಪ್ಪದಲ್ಲಿ ಇಂದು ಸಾಧಾರಣ ಮಳೆಯಾಗಿದೆ.ಇತ್ತ ಬಯಲು ಭಾಗದ ತರೀಕೆರೆ ಪಟ್ಟಣದಲ್ಲಿ ಇಂದು ಉತ್ತಮ ಮಳೆಯಾಗಿದೆ. ರಸ್ತೆಗಳ ಮೇಲೆ ನೀರು ಹರಿದಿದೆ.
ಮಳೆ ನಡುವೆಯೂ ಬೀಗರ ಬಾಡೂಟ ಸವಿದ ಜನ: ಮಲೆನಾಡಿನ ಭಾಗವಾದ ಮೂಡಿಗೆರೆ ತಾಲೂಕಿನ ಕೂವೆ ಸಮೀಪದ ಬೀರ್ಗೂರಿನಲ್ಲಿ ಮಳೆ ನಡುವೆಯೂ ಜನರು ಬೀಗರ ಬಾಡೂಟವನ್ನು ಸವಿದಿದ್ದಾರೆ. ತಲೆ ಮೇಲೆ ದೊಡ್ಡ-ದೊಡ್ಡ ಪ್ಲೇಟ್ ಇಟ್ಕೊಂಡು ಬಾಡೂಟ ಸವಿದಿರುವ ವಿಡಿಯೋ ವೈರಲ್ ಆಗಿದೆ. ಶಾಮಿಯಾನ ಕೆಳಗೆ ಬಿದ್ರು, ಮಳೆಯಲ್ಲೇ ಬಾಡೂಟವನ್ನು ಜನರು ಸೇವನೆ ಮಾಡಿದ್ದಾರೆ. ಮೂಡಿಗೆರೆಯಲ್ಲಿ ಎರಡು ಗಂಟೆಗಳ ಕಾಲ ಮಳೆ ಸುರಿದಿದೆ.
ಸಂಜಯ ಪಾಟೀಲ್ 'ಎಕ್ಸ್‌ಟ್ರಾ ಪೆಗ್' ಹೇಳಿಕೆ ಬಿಜೆಪಿಯ ಹಿಡನ್ ಅಜೆಂಡಾ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಕ್ರೋಶ
ರೇವತಿ ಮಳೆಗೆ ಇನ್ನಷ್ಟು ನಿರೀಕ್ಷೆ: ಕೆಲವಡೆ ಕೃತಕವಾಗಿ ನೀರುಣಿಸಿ ಕಾಫಿ, ಅಡಿಕೆ, ತೆಂಗು ಇನ್ನಿತರೆ ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿರುವ ಬೆಳೆಗಾರರು, ರೈತರ ಪಾಲಿಗೆ ಇಂದಿನ ಮಳೆ ಕೊಂಚ ಸಮಾಧಾನ ಮೂಡಿಸಿದೆ. ನಿರಂತರವಾಗಿ ಮೂರ್ನಾಲ್ಕು ದಿನ ಮಳೆ ಸುರಿಯಲೆಂದು ವರುಣದೇವನಲ್ಲಿ ಪ್ರಾರ್ಥಿಸುತ್ತಿದ್ದಾರೆ. ರೇವತಿ ಮಳೆ ಇನ್ನೂ ಮೂರುದಿನಗಳ ಕಾಲ ಬರಬೇಕಿದೆ. ರೇವತಿ ಸ್ವಲ್ಪ ಪ್ರಮಾಣದಲ್ಲಾದರೂ ದರ್ಶನ ಕೊಟ್ಟರೆ ಶುಭ ಸೂಚನೆ ಎಂದು ರೈತರು ನಂಬಿದ್ದಾರೆ. ಇದರಿಂದ ಉಳಿದ ಮಳೆಗಳು ಕೈ ಹಿಡಿಯುತ್ತವೆ ಎನ್ನುವ ಮಾತುಗಳಿವೆ. ಈಗ ರೇವತಿ ಉತ್ತಮ ಆರಂಭ ನೀಡಿರುವುದು ಇನ್ನಷ್ಟು ನಿರೀಕ್ಷೆಯನ್ನು ಮೂಡಿಸಿದೆ.