ಬೆಂಗ್ಳೂರಲ್ಲಿ ವರುಣನ ಅಬ್ಬರ: 200 ಮನೆಗಳಿಗೆ ನುಗ್ಗಿದ ನೀರು, ಬಿಬಿಎಂಪಿಗೆ ಸಾರ್ವಜನಿಕರ ಹಿಡಿಶಾಪ

Published : May 03, 2022, 04:39 AM IST
ಬೆಂಗ್ಳೂರಲ್ಲಿ ವರುಣನ ಅಬ್ಬರ: 200 ಮನೆಗಳಿಗೆ ನುಗ್ಗಿದ ನೀರು, ಬಿಬಿಎಂಪಿಗೆ ಸಾರ್ವಜನಿಕರ ಹಿಡಿಶಾಪ

ಸಾರಾಂಶ

*  ಮಳೆಗೆ ತುಂಬಿ ಹರಿದ ಗೌಡನಪಾಳ್ಯ ಕೆರೆ *  ತಡರಾತ್ರಿವರೆಗೂ ಜನರಿಗೆ ತಪ್ಪದ ಬವಣೆ *  ಧರೆಗುರುಳಿದ ಮರಗಳು  

ಬೆಂಗಳೂರು(ಮೇ.03): ನಗರದಲ್ಲಿ ಭಾನುವಾರ ಸುರಿದ ಆಲಿಕಲ್ಲು ಮಳೆಗೆ(Rain) 28 ಮರಗಳು ಮುರಿದು ಬಿದ್ದಿದ್ದು, ಉತ್ತರಹಳ್ಳಿ ಸೇರಿದಂತೆ ಕೆಲ ಬಡಾವಣೆಗಳಲ್ಲಿ 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಪರದಾಡಿದರು. ವಾರ್ಡ್‌ ಸಂಖ್ಯೆ 184ರ ಗೌಡನಪಾಳ್ಯ ಕೆರೆ ಮಳೆಯಿಂದ ತುಂಬಿ ರಾಜಕಾಲುವೆಗೆ ನೀರು ಹರಿದು ಲಕ್ಷ್ಮಯ್ಯಲೇಔಟ್‌ನ 52ರಿಂದ 60 ಮನೆಗಳಿಗೆ ನೀರು ನುಗ್ಗಿತ್ತು. ಇದರಿಂದಾಗಿ ನಿವಾಸಿಗಳು ತಡರಾತ್ರಿವರೆಗೂ ಮನೆಯೊಳಗಿನಿಂದ ನೀರು ಹೊರ ಹಾಕಲು ಪರದಾಡಿದರು. ಬಿಳೇಕಳ್ಳಿಯ ಅನುಗ್ರಹ ಬಡಾವಣೆಯ ನಾಲ್ಕೈದು ಮನೆಗಳಿಗೆ ರಸ್ತೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.

ಬೆಂಗಳೂರು ದಕ್ಷಿಣ(South Bengaluru) ಕ್ಷೇತ್ರದ ಉತ್ತರಹಳ್ಳಿಯ ಲಕ್ಷ್ಮಯ್ಯ ಬಡಾವಣೆ, ಕೃಷ್ಣಪ್ಪ ಬಡಾವಣೆ ಹಾಗೂ ಗುಂಡು ಮುನೇಶ್ವರ ರಸ್ತೆಗಳಲ್ಲಿರುವ 200ಕ್ಕೂ ಹೆಚ್ಚು ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿತು. ಇದರಿಂದ ನಿವಾಸಿಗಳು ರಾತ್ರಿಯಿಡೀ ಮನೆಯ ಹೊರಗಡೆ ಆಶ್ರಯ ಪಡೆದಿದ್ದರು. ಕೆಲವರು ತಮ್ಮ ಸಂಬಂಧಿಕರ ಮನೆಗಳಿಗೆ ಉಳಿದುಕೊಂಡಿದ್ದರು. ದಿನಸಿ, ಹಾಸಿಗೆ, ದಿಂಬು, ಬಟ್ಟೆಗಳು ಸೇರಿ ಮನೆಯಲ್ಲಿದ್ದ ಸಾಮಗ್ರಿಗಳು ಒದ್ದೆಯಾದವು. ಪ್ರತಿ ಬಾರಿ ಮಳೆ ಬಂದಾಗ ಈ ಸಮಸ್ಯೆ ಉಂಟಾಗುತ್ತಿದೆ. ಶಾಶ್ವತ ಪರಿಹಾರ(Compensation) ಒದಗಿಸಲು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಬಿರುಗಾಳಿ, ಗುಡುಗು ಸಹಿತ ಆಲಿಕಲ್ಲು ಮಳೆ

ಮುರಿದು ಬಿದ್ದ ಮರಗಳು

ದಕ್ಷಿಣ ವಲಯದ ಐಪಿಎಸ್‌ ಕಾಲೋನಿ, ಬಿಟಿಎಂ 2ನೇ ಹಂತದ 7ನೇ ಮುಖ್ಯ ರಸ್ತೆ, ಬೊಮ್ಮನಹಳ್ಳಿಯ ವಿಜಯಬ್ಯಾಂಕ್‌, ಕೋರಮಂಗಲದ ಬಿಬಿಎಂಪಿ ಪಾರ್ಕ್ ಸಮೀಪ, ಶಿವರಾಮಪುರ, ಕೆ.ಜಿ.ರಸ್ತೆ, ಜಯಮಹಲ್‌, ರಾಜರಾಜೇಶ್ವರಿ ನಗರ, ಹಗದೂರು ರಸ್ತೆ, ವೈಟ್‌ಫೀಲ್ಡ್‌, ಸಿ.ವಿ.ರಾಮನ್‌ ನಗರದ ಗಣೇಶ ದೇವಸ್ಥಾನ ಬಳಿ, ಮೈಸೂರು ರಸ್ತೆಯ ಬ್ಯಾಟರಾಯನಪುರ ಸರ್ಕಾರಿ ಶಾಲೆ ಸಮೀಪ, ಅರಕೆರೆ, ದೇವರ ಜಿಕ್ಕನಹಳ್ಳಿ, ಯಲಹಂಕ ಡಿ.ಬ್ಲಾಕ್‌ ಸೇರಿದಂತೆ ಸುಮಾರು 28 ಕಡೆಗಳಲ್ಲಿ ಮರಗಳು ಮತ್ತು ಮರದ ಕೊಂಬೆಗಳು ಮುರಿದು ಬಿದ್ದಿದ್ದು, ಬಿಬಿಎಂಪಿ ಸಿಬ್ಬಂದಿ ತಂಡ ಅವುಗಳನ್ನು ತೆರವುಗೊಳಿಸಿತು. ಬಿಟಿಎಂ ಲೇಔಟ್‌ನಲ್ಲಿ ನಿಂತಿದ್ದ ಕಾರಿನ ಮೇಲೆ ಮರವೊಂದು ಬಿದ್ದು ಕಾರು ಜಖಂಗೊಂಡಿದೆ.
ಮಲ್ಲೇಶ್ವರ, ಕೆಂಗೇರಿಯ ರಾಬಿನ್‌ ಥಿಯೇಟರ್‌, ಮೈಸೂರು ರಸ್ತೆ ಮೇಲ್ಸೇತುವೆ, ಬನ್ನೇರುಘಟ್ಟರಸ್ತೆಯ ಮೆಟ್ರೋ ನಿಲ್ದಾಣದ ಕೆಳಗೆ ಸೇರಿದಂತೆ ಹಲವೆಡೆ ನೀರು ನಿಂತು ವಾಹನ ಸವಾರರ ಸುಗಮ ಸಂಚಾರಕ್ಕೆ ಅಡ್ಡಿಯುಂಟು ಮಾಡಿತ್ತು. ನಗರದ ಕೆಲವೆಡೆ ವಿದ್ಯುತ್‌ ಕಂಬಗಳಿಗೂ ಹಾನಿಯಾಗಿದ್ದು, ಬೆಸ್ಕಾಂ ಸಿಬ್ಬಂದಿ ನಗರದ ಕೆಲ ಬಡಾವಣೆಗಳಲ್ಲಿ ಭಾನುವಾರವೇ ವಿದ್ಯುತ್‌(Electricity) ಮರು ಸ್ಥಾಪನೆ ಕಾರ್ಯ ಮಾಡಿದ್ದರು.

ಕರ್ನಾಟಕದಲ್ಲಿ ಬೇಸಿಗೆ ಮಳೆ ಆರ್ಭಟ: 9 ಮನೆ ಕುಸಿತ, ಕೊಪ್ಪಳ, ವಿಜಯನಗರದಲ್ಲಿ ಬೆಳೆ ನಾಶ

ಅನಾಹುತ ತಪ್ಪಿಸಲು ಕ್ರಮ

ಮಳೆ ಅನಾಹುತ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮಳೆಯಿಂದಾಗಿ ಕೆಲ ಮನೆಗಳಲ್ಲಿ ನೀರು ನುಗ್ಗಿದೆ. ಅದೃಷ್ಟವಶಾತ್‌ ದೊಡ್ಡ ಪ್ರಮಾಣದಲ್ಲಿ ಅನಾಹುತವಾಗಿಲ್ಲ. ಉತ್ತರಹಳ್ಳಿ ಹಾಗೂ ವಿದ್ಯಾಪೀಠ ಸೇರಿ ಕೆಲ ಪ್ರದೇಶಗಳಲ್ಲಿ 63 ಮಿ.ಮೀ. ಮಳೆ ಸುರಿದಿದೆ. ಮಳೆ ಅನಾಹುತ ತಡೆಯಲು ಆಯಾ ವಲಯಗಳ ತಂಡ, ವಿಭಾಗ ತಂಡ ಹಾಗೂ ಕೇಂದ್ರ ಕಚೇರಿ ನಿಯಂತ್ರಣ ಕೊಠಡಿ ಸನ್ನದ್ಧವಾಗಿದೆ ಎಂದು ಬಿಬಿಎಂಪಿ ಮುಖ್ತ ಆಯುಕ್ತ ಗೌರವ್‌ ಗುಪ್ತ ಹೇಳಿದ್ದಾರೆ.
 

PREV
Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ