11 ಜಿಲ್ಲೆಗಳಲ್ಲಿ ಮಳೆಯಾರ್ಭಟ: 6 ಬಲಿ

By Kannadaprabha NewsFirst Published Aug 5, 2022, 10:14 AM IST
Highlights

ಕಲ್ಯಾಣ ಕರ್ನಾಟಕದ ಬಹುಭಾಗ ಸೇರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಗುರುವಾರ ಒಟ್ಟು ಆರು ಮಂದಿ ಮಳೆ ಸಂಬಂಧಿ ಕಾರಣಗಳಿಗೆ ಮೃತಪಟ್ಟಿರುವ ಪ್ರತ್ಯೇಕ ಘಟನೆಗಳು ವರದಿಯಾಗಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಲ್ಯಾಣ ಕರ್ನಾಟಕದ ಬಹುಭಾಗ ಸೇರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಗುರುವಾರ ಒಟ್ಟು ಆರು ಮಂದಿ ಮಳೆ ಸಂಬಂಧಿ ಕಾರಣಗಳಿಗೆ ಮೃತಪಟ್ಟಿರುವ ಪ್ರತ್ಯೇಕ ಘಟನೆಗಳು ವರದಿಯಾಗಿವೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನವೂ ತೀವ್ರ ಅಸ್ತವ್ಯಸ್ತಗೊಂಡಿದ್ದು ಕಲಬುರಗಿ ನಗರವೊಂದರಲ್ಲೇ 300ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು ನಿವಾಸಿಗಳು ಪರದಾಡುವಂತಾಗಿದೆ. ಕಲಬುರಗಿ, ಯಾದಗಿರಿ, ರಾಯಚೂರು, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ರಾಮನಗರ, ತುಮಕೂರು, ಮೈಸೂರು, ಚಾಮರಾಜನಗರ ನಗರದಲ್ಲಿ ಉತ್ತಮ ಮಳೆ ಸುರಿದಿದೆ.

ತುಮಕೂರಲ್ಲಿ 4 ಬಲಿ: ತುಮಕೂರು ಜಿಲ್ಲೆಯಿಂದ ಅತಿ ಹೆಚ್ಚು 4 ಪ್ರಾಣಹಾನಿಗಳು ವರದಿಯಾಗಿದೆ. ಕೊರಟೆಗೆರೆ ತಾಲೂಕಿನ ಕುರುಡಗಾನಹಳ್ಳಿಯಲ್ಲಿ ಗುರುವಾರ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಮ್ಮ(70) ತೊರೆ ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಗುಬ್ಬಿ ತಾಲೂಕಿನ ಕೋಣೆಮಾದನಹಳ್ಳಿ ಗ್ರಾಮದ ಅರುಣ್‌ಕುಮಾರ್‌ (30) ತೋಟದಿಂದ ಹಿಂತಿರುಗುವ ಸಂದರ್ಭದಲ್ಲಿ ದಾರಿ ತಿಳಿಯದೆ ಮಳೆ ನೀರಿನಿಂದ ತುಂಬಿದ್ದ ಹಾಳು ಬಾವಿಗೆ ಬಿದ್ದು ಮೃತಪಟ್ಟಿದ್ದರೆ, ಗುಬ್ಬಿಯ ಚೇಳೂರು ಹೋಬಳಿಯ ಬಂಗೇನಹಳ್ಳಿ ಕೆರೆಯಲ್ಲಿ ಜಾನವಾರುಗಳ ಮೈ ತೊಳೆಯಲು ಹೋಗಿದ್ದ ಯುವಕ ಮನೋಜ್‌(22) ಕಾಲು ಜಾರಿಬಿದ್ದು ಮೃತಪಟ್ಟಿದ್ದಾನೆ. ತುರುವೇಕೆರ ಬಳಿ ಬುಧವಾರ ರಾತ್ರಿ ಜಲಾವೃತವಾಗಿದ್ದ ಸೇತುವೆ ದಾಟುತ್ತಿದ್ದ ಓಮ್ನಿ ಕಾರು ಕೊಚ್ಚಿ ಹೋಗಿದ್ದು ಅದರಲ್ಲಿದ್ದ ತಿಪಟೂರಿನ ಪಟೇಲ್‌ ಕುಮಾರಸ್ವಾಮಿ ನೀರುಪಾಲಾಗಿದ್ದಾರೆ.

ಇನ್ನೂ 5 ದಿನ ರಾಜ್ಯದಲ್ಲಿ ಮಳೆಯಾರ್ಭಟ: ನದಿಪಾತ್ರಗಳಲ್ಲಿ ಹೈ ಅಲರ್ಟ್

ಇನ್ನು ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕುರ್ಡಿಗ್ರಾಮದ ರೈತ ವೆಂಕಟೇಶ (36) ಹೊಲಕ್ಕೆ ಹೋಗಿ ಬುಧವಾರ ಸಂಜೆ ಮನೆಗೆ ಮರಳಿ ಬರುವಾಗ ಹೊರವಲಯದ ಹಳ್ಳದಲ್ಲಿ ಕಾಲು ಜಾರಿಬಿದ್ದು ಕೊಚ್ಚಿ ಹೋಗಿದ್ದಾರೆ. ಆ.2ರಂದು ಮನೆ ಕುಸಿದು ಬಿದ್ದು ತೀವ್ರ ಗಾಯಗೊಂಡಿದ್ದ ಕಲಬುರಗಿ ಮೋಮಿನಪುರಾ ಬಡಾವಣೆಯ ನಿವಾಸಿ ವಾಹಿದ್‌(68) ಗುರುವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಏತನ್ಮಧ್ಯೆ ಧಾರಾಕಾರ ಮಳೆಯಿಂದ ಶಿಥಿಲಗೊಂಡಿದ್ದ ಕಲಬುರಗಿ ಜಿಲ್ಲೆ ಆಳಂದದ ಮಾದನಹಿಪ್ಪರಗಾ ಕರ್ನಾಟಕ ಪಬ್ಲಿಕ್‌ ಶಾಲೆಯ ಪಿಯು ಕಾಲೇಜಿನಲ್ಲಿ ಗುರುವಾರ ತರಗತಿ ನಡೆಯುತ್ತಿರುವಾಗಲೇ ಮೇಲ್ಚಾವಣಿ ಕುಸಿದು ಮೂವರು ವಿದ್ಯಾನಿಯರಿಗೆ ಗಾಯಗಳಾಗಿವೆ.

ರಾಜ್ಯದಲ್ಲಿ ವರುಣನ ಅಬ್ಬರ: ಡ್ಯಾಂಗಳಿಗೆ ಭಾರೀ ನೀರು

ಇನ್ನು ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ ತಾಲೂಕುಗಳಲ್ಲಿ ಮಳೆಯ ಆರ್ಭಟಕ್ಕೆ ಬಹುತೇಕ ಕೆರೆ​ಗಳು ಕೋಡಿ ಬಿದ್ದು ಕೃಷಿ ಭೂಮಿ ಜಲಾ​ವೃ​ತ​ಗೊಂಡಿ​ದ್ದರೆ, ಹಲ​ವೆಡೆ ಸಂಪರ್ಕ ರಸ್ತೆ​ಗಳು ಬಂದ್‌ ಆಗಿವೆ. ಬೆಂಗ​ಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ 8 ಅಂಡರ್‌ ಪಾಸ್‌ ಗಳು ಸಂಪೂ​ರ್ಣ​ವಾಗಿ ಜಲಾ​ವೃ​ತ​ಗೊಂಡಿದ್ದು ಸಂಚಾರ ಅಸ್ತವ್ಯಸ್ತವಾಗಿವೆ. ನೀರು ಹರಿದು ಹೋಗದೆ ಅಕ್ಕ​ಪ​ಕ್ಕದ ಕೃಷಿ ಜಮೀ​ನು​ಗ​ಳಿಗೆ ನುಗ್ಗಿದೆ. ಬಿಡದಿ ಹೋಬಳಿ ಚಿಕ್ಕ​ಕುಂಟ​ನ​ಹಳ್ಳಿಯ ಹಳ್ಳ​ದಲ್ಲಿ ಕಾರೊಂದು ಕೊಚ್ಚಿ ಹೋಗಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣ​ಪಾಯ ಸಂಭ​ವಿ​ಸಿಲ್ಲ.
 

click me!