ತುಂಗಭದ್ರಾ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರಿಂಸ ಹಂಪಿ ಸ್ಮಾರಕಗಳು ಮುಳುಗಿ ಹೋಗಿವೆ.
ಹೊಸಪೇಟೆ (ಸೆ.22): ತುಂಗಭದ್ರಾ ಜಲಾಶಯದ ಮೇಲ್ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಜಲಾಶಯದಿಂದ 1 ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ನದಿಗೆ ಹರಿಬಿಡಲಾಗಿದ್ದು, ಹಂಪಿಯಲ್ಲಿ ಪ್ರವಾಹ ಸೃಷ್ಟಿಯಾಗಿದ್ದು, ಪ್ರಮುಖ ಸ್ಮಾರಕಗಳು ಮುಳುಗಡೆಯಾಗಿವೆ.
ಏತನ್ಮಧ್ಯೆ, ತುಂಗಭದ್ರಾ ಮಂಡಳಿ ರಾಜ್ಯದ ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ಆಂಧ್ರಪ್ರದೇಶದ ಅನಂತಪುರ, ಮೆಹಬೂಬನಗರ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಗೆ ಪ್ರವಾಹ ಮುನ್ನೆಚ್ಚರಿಕೆ ಸಂದೇಶ ರವಾನಿಸಿ, ಅಲರ್ಟ್ ಮಾಡಿದೆ. ಹೀಗಾಗಿ ನದಿಪಾತ್ರದಲ್ಲಿ ತೆಪ್ಪ ಹಾಕುವುದನ್ನು ಹಾಗೂ ನದಿ ಭಾಗದಲ್ಲಿ ಓಡಾಡುವುದನ್ನು ನಿಷೇಧಿಸಲಾಗಿದೆ. ಜತೆಗೆ ನದಿ ಪಕ್ಕದ ಹಳ್ಳಿಗಳ ಜನರನ್ನು ಸ್ಥಳಾಂತರಿಸಿ ಕಾಳಜಿ ಕೇಂದ್ರಗಳನ್ನು ತೆರೆಯಲು ಸಂಬಂಧಿಸಿದ ಜಿಲ್ಲಾಡಳಿತಗಳು ಮುಂದಾಗಿವೆ.
ಕಾರವಾರ; ಸಿನಿಮೀಯ ಕಾರ್ಯಾಚರಣೆ, ಜನರಿಂದಲೇ ಮೀನುಗಾರರ ರಕ್ಷಣೆ
ಸ್ಮಾರಕಗಳು ಮುಳುಗಡೆ: ಇತ್ತೀಚೆಗೆ ಪ್ರವಾಸೋದ್ಯಮಕ್ಕೆ ತೆರೆದುಕೊಂಡಿದ್ದ ಹಂಪಿಯಲ್ಲೀಗ ಪ್ರವಾಹ ಸೃಷ್ಟಿಯಾಗಿದೆ. ನದಿ ಪಕ್ಕದಲ್ಲಿರುವ ಧಾರ್ಮಿಕ ವಿಧಿವಿಧಾನ ಮಂಟಪ, ಪುರಂದರ ದಾಸರ ಮಂಟಪ ಸೇರಿ ನಾನಾ ಮಂಟಪಗಳು ಜಲಾವೃತವಾಗಿವೆ. ಜತೆಗೆ ಹಂಪಿಯ ರಾಮ-ಲಕ್ಷ್ಮಣ ದೇಗುಲದ ಮೆಟ್ಟಿಲುವರೆಗೆ ನೀರು ಬಂದಿದೆ. ಹಂಪಿಯ ಚಕ್ರತೀರ್ಥದ ಬಳಿ ನದಿ ರಭಸವಾಗಿ ಹರಿಯುತ್ತಿದ್ದು, ನೋಡುಗರ ಕಣ್ಮನ ಸೆಳೆಯುವಂತಿದೆ.
ನದಿಗೆ ನೀರು: ತುಂಗಭದ್ರಾ ಜಲಾಶಯದ ಗರಿಷ್ಠ ಮಟ್ಟ1633 ಅಡಿ ಇದ್ದು, ಜಲಾಶಯದ ಗರಿಷ್ಠ ಸಾಮರ್ಥ್ಯ 100.855 ಟಿಎಂಸಿಯಷ್ಟಿದೆ. ಸದ್ಯ ಜಲಾಶಯ ಭರ್ತಿಯಾಗಿದ್ದು, ಒಳ ಹರಿವು ವಿಪರೀತವಾಗಿದೆ. ಹೀಗಾಗಿ ಜಲಾಶಯದ 30 ಗೇಟ್‌ಗಳನ್ನು ತೆರೆದು 1 ಲಕ್ಷ 6 ಸಾವಿರಕ್ಕೂ ಅಧಿಕ ಕ್ಯುಸೆಕ್ ನೀರು ನದಿಗೆ ಬಿಡಲಾಗುತ್ತಿದೆ. ಜಲಾಶಯದ ಒಳ ಹರಿವಿನಲ್ಲಿ ಇನ್ನಷ್ಟುಏರಿಕೆಯಾಗುವ ಸಾಧ್ಯತೆ ಇರುವುದರಿಂದ ನದಿಗೆ ಇನ್ನೂ ಹೆಚ್ಚಿನ ಪ್ರಮಾಣದ ನೀರು ಹರಿಸಲಾಗುವುದು ಎಂದು ತುಂಗಭದ್ರಾ ಮಂಡಳಿ ಈಗಾಗಲೇ ಮುನ್ಸೂಚನೆ ನೀಡಿದೆ.