Heavy Rain : ಒಡೆದ ಕೆರೆ ಕಟ್ಟೆಗಳು; ಪರಿಹಾರ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ!

By Kannadaprabha News  |  First Published Sep 6, 2022, 11:11 AM IST

ಇತ್ತೀಚೆಗೆ ಸುರಿದ ಭಾರೀ ಮಳೆಗೆ ತಾಲೂಕಿನ ಕೆಲವು ಕೆರೆ ಕಟ್ಟೆಗಳು ಒಡೆದು ಭಾರೀ ಪ್ರಮಾಣದ ಹಾನಿಯಾಗಿದ್ದರೂ ರಾಜ್ಯ ಸರ್ಕಾರ ಹಾಗೂ ಸಚಿವರು ಇದುವರೆಗೂ ಪರಿಹಾರ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವುದು ರೈತರು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.


ಕೆ.ಆರ್‌.ಪೇಟೆ (ಸೆ.6) : ಇತ್ತೀಚೆಗೆ ಸುರಿದ ಭಾರೀ ಮಳೆಗೆ ತಾಲೂಕಿನ ಕೆಲವು ಕೆರೆ ಕಟ್ಟೆಗಳು ಒಡೆದು ಭಾರೀ ಪ್ರಮಾಣದ ಹಾನಿಯಾಗಿದ್ದರೂ ರಾಜ್ಯ ಸರ್ಕಾರ ಹಾಗೂ ಸಚಿವರು ಇದುವರೆಗೂ ಪರಿಹಾರ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವುದು ರೈತರು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜುಲೈ ತಿಂಗಳ ಅಂತ್ಯದಿಂದ ಆಗಸ್ವ್‌ ತಿಂಗಳ ಆರಂಭದಲ್ಲಿ ಸುರಿದ ರಣ ಮಳೆಗೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ದೊಡ್ಡಕ್ಯಾತನಹಳ್ಳಿ, ಮಾವಿನಕಟ್ಟೆಕೊಪ್ಪಲು, ಮಾಳಗೂರು ಕೆರೆಗಳು ಒಡೆದು ಕೆರೆ ಬಯಲಿನ ಕೃಷಿ ಭೂಮಿ, ರೈತರ ತೋಟಗಳು ಮತ್ತು ಭಿತ್ತನೆ ಮಾಡಿದ್ದ ಕೃಷಿ ಭೂಮಿಗಳು ಕೊಚ್ಚಿ ಹೋಗಿದ್ದವು.

Heavy Rain in Mandya: ಕೆರೆ ಕೋಡಿ ಹರಿದು 45 ಆಡು, ಒಂದು ಕರು ಸಾವು

Tap to resize

Latest Videos

ಸಂತೇಬಾಚಹಳ್ಳಿ(Santebachanahalli), ಅಘಲಯ, ಕಿಕ್ಕೇರಿಯ ಅಮಾನಿ ಕೆರೆ ಸೇರಿದಂತೆ ಕೆಲವೆಡೆ ಸಂಪರ್ಕ ಸೇತುವೆಗಳು ಹಾನಿಗೀಡಾಗಿವೆ, ರೈತರು, ಜನರ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ. ಕುಸಿದ ಮನೆಗಳಿಗೆ ತಾಲೂಕು ಆಡಳಿತ ಒಂದಷ್ಟುಪರಿಹಾರ ನೀಡಿರುವುದು ಬಿಟ್ಟರೆ ಮಳೆ ಹಾನಿಯ ಯಾವುದೇ ಶಾಶ್ವತ ಕಾಮಗಾರಿ ಆರಂಭವಾಗಿಲ್ಲ. ಹಾನಿಗೀಡಾದ ಸೇತುವೆ ಮತ್ತು ರಸ್ತೆಗಳನ್ನು ಸರಿಪಡಿಸುವ ಕೆಲಸಕ್ಕೆ ಮುಂದಾಗಿಲ್ಲ. ಹಾಳಾಗಿರುವ ರಸ್ತೆಗಳಲ್ಲಿ ರೈತರು ತಾವು ಬೆಳೆದ ಕಬ್ಬು ಮತ್ತಿತರ ಕೃಷಿ ಉತ್ಪನ್ನಗಳನ್ನು ಕಾರ್ಖಾನೆ ಮತ್ತು ಮಾರುಕಟ್ಟೆಗಳಿಗೆ ಸಾಗಿಸಲು ಹರಸಾಹಸ ಪಡುತ್ತಿದ್ದಾರೆ.

ಒಡೆದು ಹೋಗಿರುವ ಕೆರೆಗಳಲ್ಲಿ ನೀರು ಖಾಲಿಯಾಗಿರುವುದರಿಂದ ಕೆಲವು ಕೆರೆ ಬಯಲಿನ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಸಾಕಷ್ಟುಮಳೆಯಾಗಿದ್ದರೂ ಕೆರೆಗಳು ಖಾಲಿಯಾಗಿರುವುದರಿಂದ ರೈತರಿಗೆ ಚಿಂತೆಗೀಡು ಮಾಡಿದೆ. ತೋಟಗಾರಿಕೆ ಇಲಾಖೆಯ ಮಾಹಿತಿಯ ಪ್ರಕಾರ ತಾಲೂಕಿನಲ್ಲಿ ಸುಮಾರು 1 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರೈತರ ತೆಂಗು, ಅಡಿಕೆ, ಬಾಳೆ ಮುಂತಾದ ತೋಟಗಾರಿಕಾ ಬೆಳೆಗಳು ಹಾಳಾಗಿವೆ. ತೋಟಗಾರಿಕೆ ಇಲಾಖೆ ಹಾನಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ ಇದುವೆರೆಗೆ ರೈತರಿಗೆ ಯಾವುದೇ ಪರಿಹಾರ ದೊರಕಿಲ್ಲ. ಇದೇ ರೀತಿ ಕೆರೆ ಬಯಲಿನಲ್ಲಿ ಭತ್ತ, ರಾಗಿ ಸೇರಿದಂತೆ ಸುಮಾರು 40.24 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ರೈತರಿಗೆ 10,06ಸ000 ರು.ಗಳಷ್ಟುಬೆಳೆಹಾನಿಯಾಗಿದೆ ಎಂದು ಕೃಷಿ ಇಲಾಖೆ ರಾಜ್ಯ ಸರ್ಕಾರಕ್ಕೆ ಅಧಿಕೃತ ವರದಿ ಸಲ್ಲಿಸಿದೆ.

ನೀರಾವರಿ ಇಲಾಖೆ ಮಳೆ ಹಾನಿಯಿಂದ ತಾಲೂಕಿನಲ್ಲಿ 24 ಕೋಟಿಯಷ್ಟುಹಾನಿಯಾಗಿದೆ. ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ಇದುವರೆಗೂ ರಾಜ್ಯ ಸರ್ಕಾರದಿಂದ ಹಾಳಾಗಿರುವ ರಸ್ತೆಗಳು, ಸೇತುವೆಗಳು ಮತ್ತು ನಾಲಾ ರಸ್ತೆಗಳ ಸುಧಾರಣೆಗೆ ಹಣ ಬಿಡುಗಡೆಯಾಗಿಲ್ಲ.

ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸಿ: ಅತಿವೃಷ್ಟಿಯಿಂದ ತಾಲೂಕಿನ ಕಿಕ್ಕೇರಿ ಕೆರೆ ಕೋಡಿ ಸೇತುವೆ ಹಾಳಾಗಿರುವುದರಿಂದ ಕಿಕ್ಕೇರಿ ಮತ್ತು ಸೊಳ್ಳೇಪುರ ನಡುವಿನ ಸಂಚಾರಕ್ಕೆ ತೊಂದರೆಯಾಗಿದೆ. ಅಘಲಯ- ದೊಡ್ಡ ಸೋಮನಹಳ್ಳಿ ನಡುವಿನ ಹಳ್ಳದ ಸೇತುವೆ ಹಾಳಾಗಿರುವುದುರಿಂದ ಅಘಲಯ ಮಾರ್ಗದ ಜನ ಸುತ್ತಿ ಬಳಸಿ ಕೆ.ಆರ್‌ .ಪೇಟೆ ಪಟ್ಟಣಕ್ಕೆ ಬರಬೇಕಾಗಿದೆ. ಗ್ರಾಮೀಣ ರಸ್ತೆಗಳು ಗುಂಡಿ ಹಾಳಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಟಿ.ಕೆ.ಹಳ್ಳಿ ಜಲರೇಚಕ ಯಂತ್ರಾಗಾರ ಜಲಾವೃತ; ಬೆಂಗಳೂರು ಕುಡಿಯುವ ನೀರು ಪೂರೈಕೆ ಸ್ಥಗಿತ

ತಾಲೂಕಿನ ಮದ್ದಿಕ್ಯಾಚುಮನಹಳ್ಳಿ ಜನ ಸಂಪರ್ಕ ರಸ್ತೆಯ ಸುಧಾರಣೆಗಾಗಿ ಒತ್ತಾಯಿಸಿದ್ದರೂ ಗ್ರಾಮೀಣ ರಸ್ತೆಯ ಸುಧಾರಣೆಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಸಚಿವರು ಅಗತ್ಯ ಅನುದಾನ ತಂದು ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾಳಾಗಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ.

ಕ್ಷೇತ್ರದ ಶಾಸಕರೂ ಆದ ಸಚಿವ ಕೆ.ಸಿ.ನಾರಾಯಣಗೌಡ ರಾಜಕಾರಣಕ್ಕೆ ನೀಡುವಷ್ಟುಒತ್ತನ್ನು ರೈತರ ಸಮಸ್ಯೆಗಳ ಪರಿಹಾರಕ್ಕೆ ನೀಡುತ್ತಿಲ್ಲ. ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಸಚಿವರು ಚುನಾಯಿತ ಜನಪ್ರತಿನಿಧಿಗಳಿಗೆ ಟಿವಿ ಹಂಚುವ ಮೂಲಕ ಮತ ಬ್ಯಾಂಕ್‌ ರಾಜಕಾರಣಕ್ಕೆ ಮುಂದಾಗಿದ್ದಾರೆ. ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ರೈತರ ಸಮಸ್ಯೆಯನ್ನು ಆಲಿಸುತ್ತಿಲ್ಲ.

- ಕಾರಿಗನಹಳ್ಳಿ ಪುಟ್ಟೇಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ.

ಅತಿವೃಷ್ಟಿಯಿಂದಾಗಿ ಅಚ್ಚುಕಟ್ಟು ಪ್ರದೇಶದ ರಸ್ತೆಗಳು, ಕೆರೆ ಮತ್ತು ನಾಲೆಗಳು ಒಡೆದು 24 ಕೋಟಿ ರು.ಗೂ ಹೆಚ್ಚು ನಷ್ಟವಾಗಿದೆ. ನಷ್ಟದ ವಿವರವನ್ನು ನೀರಾವರಿ ಇಲಾಖೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಅಗತ್ಯ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದೆ. ಕೆಲವೆಡೆ ತಾತ್ಕಾಲಿಕ ರಸ್ತೆಗಳನ್ನು ಮಾಡಿಕೊಡಲಾಗಿದೆ. ಒಡೆದ ಕೆರೆಗಳು, ಸೇತುವೆ ಮತ್ತು ರಸ್ತೆಗಳ ಡಿಸೈನಿಂಗ್‌, ¶ೌಂಡೇಷನ್‌ ಮಾಡಿ ಇಲಾಖೆಯಿಂದ ಸಿದ್ಧತೆ ಮಾಡಿಕೊಂಡಿದೆ. ಅನುದಾನ ಬಿಡುಗಡೆಯಾದ ಕೂಡಲೇ ಕಾಮಗಾರಿ ಆರಂಭಿಸುತ್ತೇವೆ.

ಕಿಸರ್‌ ಅಹಮ್ಮದ್‌, ಎಚ್‌ಎಲ್‌ಬಿಸಿ ನಂ 03 ವಿಭಾಗದ ಕಾರ್ಯಪಾಲಕ ಅಭಿಯಂತರ

click me!