Bengaluru Rain | ದಾಖಲೆ ಮಳೆಗೆ ತತ್ತರ : ಬೆಂಗಳೂರಿನ ಮಹಾ ಪ್ರವಾಹ ಸೃಷ್ಟಿ

By Kannadaprabha NewsFirst Published Nov 23, 2021, 6:40 AM IST
Highlights
  • ಬೆಂಗಳೂರಿನಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಇದರಿಂದ ನಾಗರಿಕ ಸಮುದಾಯ ತತ್ತರಿಸಿದೆ.  
  • ಭಾರೀ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. 

 ಬೆಂಗಳೂರು (ನ.23): ಬೆಂಗಳೂರಿನಲ್ಲಿ (Bengaluru) ಭಾರಿ ಮಳೆ ಸುರಿಯುತ್ತಿದ್ದು ಇದರಿಂದ ನಾಗರಿಕ ಸಮುದಾಯ ತತ್ತರಿಸಿದೆ.  ಭಾರೀ ಮಳೆ (heavy Rain) ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಎಲ್ಲೆಲ್ಲಿ ಏನೇನಾಯ್ತು..? ಯಲಹಂಕದ ಪೊಲೀಸ್‌ ಠಾಣೆ (Yalahanka Police station) ವೃತ್ತದಲ್ಲಿರುವ ರೈಲ್ವೆ ಅಂಡರ್‌ ಪಾಸ್‌ನಲ್ಲಿ ನಿಂತಿದ್ದ ನೀರಿನಲ್ಲಿ ಮೂರು ಬಿಎಂಟಿಸಿ ಬಸ್‌ಗಳು (BMTC Bus) ಮೂರು ಗಂಟೆಗಿಂತ ಹೆಚ್ಚು ಕಾಲ ಸಿಲುಕಿಕಿಕೊಂಡ ಪರಿಣಾಮ ದೇವನಹಳ್ಳಿ ಮಾರ್ಗವಾಗಿ ಯಲಹಂಕ, ಹೆಬ್ಬಾಳದ ಕಡೆ ಸಂಚರಿಸುವ ವಾಹನ ಸವಾರರಿಗೆ ತೀವ್ರ ತೊಂದರೆಯುಂಟಾಯಿತು.ಸಿಂಗಾಪುರ ಕೆರೆ ಕೋಡಿ ಬಿದ್ದಿದ್ದರಿಂದ ವಿದ್ಯಾರಣ್ಯಪುರದ ಮತ್ತು ಮುನಿಸ್ವಾಮಪ್ಪ ಬಡಾವಣೆಯ ಹಲವು ಮನೆಗಳಿಗೆ ನೀರು ನುಗ್ಗಿತ್ತು. ಈ ಭಾಗದ ಜನ ರಾತ್ರಿ ಪೂರ್ತಿ ನೀರನ್ನು ಹೊರ ಹಾಕಲು ಪರದಾಡಿದರು. ಅಂಗಡಿಗಳು, ಮನೆಗಳಲ್ಲಿದ್ದ ವಸ್ತುಗಳು ನೀರು ಪಾಲಾದವು.

ಬಿಬಿಎಂಪಿ ಅಧಿಕಾರಿಗಳ ಜನರ ವಿರುದ್ಧ ಆಕ್ರೋಶ

ಪ್ರತಿ ವರ್ಷ ಮಳೆ ಬಂದಾಗಲೂ ಇದೇ ರೀತಿಯ ಸಮಸ್ಯೆ ಉಂಟಾಗುತ್ತಿದೆ. ಈಗಾಗಲೇ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಕ್ರಮಕ್ಕೆ ಮುಂದಾಗುತ್ತಿಲ್ಲ. ಶಾಸಕರು ಮತ್ತು ಬಿಬಿಎಂಪಿ (BBMP) ಅಧಿಕಾರಿಗಳು ಇತ್ತ ತಲೆ ಹಾಕುತ್ತಿಲ್ಲ. ಸಣ್ಣ ಅಂಗಡಿ ನಡೆಸಿಕೊಂಡು ಜೀವನ ನಡೆಸುತ್ತಿದ್ದೇವೆ. ಇದೇ ರೀತಿ ಮುಂದುವರಿದಲ್ಲಿ ಜೀವನ ನಡೆಸುವುದಾದರೂ ಹೇಗೆ ಎಂದು ಸ್ಥಳೀಯರು ಪ್ರಶ್ನಿಸಿದರು. ಕಳೆದ ಮೂರು ದಿನಗಳಿಂದ ಇದೇ ಸಮಸ್ಯೆ ಎದುರಿಸುತ್ತಿದ್ದು, ನಿದ್ದೆಯಿಲ್ಲದೆ ಪರದಾಡುತ್ತಿದ್ದೇವೆ ಎಂದು ವಿದ್ಯಾರಣ್ಯ ಪುರದ ನಿವಾಸಿಗಳು ಆಕ್ರೋಶ ವ್ಯಕ್ತ ಪಡಿಸಿದರು.

ರಸ್ತೆಯಲ್ಲಿ ನೀರು

ಯಲಹಂಕದ ಕೋಗಿಲೆ ಕ್ರಾಸ್‌ ಬಳಿ ರಸ್ತೆ ತುಂಬ ನೀರು ನಿಂತಿದ್ದು, ಯಲಹಂಕ- ಕೋಗಿಲು ಸಂಪರ್ಕಿಸುವ ರಸ್ತೆ ಸಂಪೂರ್ಣ ಜಲಾವೃತ್ತವಾಗಿತ್ತು. ಅಲ್ಲದೆ, ಕೋಗಿಲು ಕ್ರಾಸ್‌ (Cross) ಬಳಿಯ ಸಪ್ತಗಿರಿ ಬಡಾವಣೆಯಲ್ಲಿಯ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದರಿಂದ ಜನತೆ ತೀವ್ರ ತೊಂದರೆ ಅನುಭವಿಸಿದರು.

ತುಂಬಿ ಹರಿದ ಅಲ್ಲಾಳಸಂದ್ರ ಕೆರೆ

ಯಲಹಂಕಕ್ಕೆ ಹೊಂದಿಕೊಂಡಿರುವ ಅಲ್ಲಾಳಸಂದ್ರ ಕೆರೆ (Lake) ತುಂಬಿ ಹರಿದ ಪರಿಣಾಮ ಈ ಭಾಗದ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿರುವ ವಸ್ತುಗಳು ತೇಲಾಡುತ್ತಿದ್ದವು. ಅಕ್ಕಿ, ಬೇಳೆ, ಈರುಳ್ಳಿ, ಸಕ್ಕರೆ ಉಪ್ಪು ದಿನ ಬಳಕೆಯ ಎಲ್ಲವಸ್ತುಗಳು ನೀರುಪಾಲಾದವು. ಅಲ್ಲದೆ, ಟಿವಿ, ಫ್ರಿಡ್ಜ್‌ನಲ್ಲಿ ನೀರು ಸೇರಿದ್ದರಿಂದ ಕೆಟ್ಟು ಹೋಗಿವೆ ಎಂದು ನಿವಾಸಿಗಳು ಗೋಳು ತೋಡಿಕೊಂಡರು.

100 ಕೇಜಿ ಮೀನು ಹಿಡಿದರು

ಅಲ್ಲಾಳಸಂದ್ರ ಕೆರೆಯಿಂದ ಹೊರ ಬಂದ ನೀರಿನ ಜೊತೆ ಮೀನುಗಳು (Fish) ಮನೆಗಳಿಗೆ ತೇಲಿ ಬಂದವು. ಸ್ಥಳೀಯ ನಿವಾಸಿ ಶ್ರೀನಿವಾಸ್‌ ಎಂಬುವರು 100 ಕೆ.ಜಿ ಮೀನು ಹಿಡಿದು ಸ್ಥಳೀಯರಿಗೆ ಹಂಚಿದರು. ಅಲ್ಲದೆ, ನೀರಿನೊಂದಿಗೆ ಬಂದಿದ್ದ ಸುಮಾರು 20ಕ್ಕೂ ಹೆಚ್ಚು ಹಾವುಗಳನ್ನು ಮತ್ತೆ ಕೆರೆಗೆ ಬಿಟ್ಟರು.

ರೈಲ್ವೆ ಕಾಂಪೌಂಡ್‌ ಕುಸಿತ: ವಾಹನಗಳು ಜಖಂ

ಮಳೆಯಿಂದ ಯಶವಂತಪುರದ ಮೋಹನ್‌ ಕುಮಾರ್‌ ನಗರದಲ್ಲಿ ರೈಲ್ವೆ (Railway) ಕಾಂಪೌಂಡ್‌ವೊಂದು ಕುಸಿದಿದ್ದು, ಪಕ್ಕದಲ್ಲೇ ನಿಲ್ಲಿಸಿದ್ದ ಕೆಲವು ವಾಹನಗಳು (Vehicle) ಜಖಂಗೊಂಡವು. ರಾತ್ರಿ 8ರ ವೇಳೆಗೆ ರೈಲ್ವೆ ಕಾಂಪೌಂಡ್‌ ಕುಸಿದ ಪರಿಣಾಮ ಗೋಡೆ ಪಕ್ಕದಲ್ಲಿ ನಿಲ್ಲಿಸಿದ್ದ 2-3 ಆಟೋಗಳು ಹಾಗೂ ಒಂದು ದ್ವಿಚಕ್ರವಾಹನ ಜಖಂಗೊಂಡಿದೆ.

2 ಮರ ಧರೆಗೆ

ಗಾಳಿ ಸಹಿತ ಬಿದ್ದ ಮಳೆಗೆ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣ (Metro station) ಸಮೀಪ ಹಾಗೂ ಸಂಜಯನಗರದ 15ನೇ ಅಡ್ಡರಸ್ತೆಯಲ್ಲಿ ತಲಾ ಒಂದು ಮರ ಉರುಳಿ ಬಿದ್ದವು. ಸಂಜೆ ವಾಹನ ದಟ್ಟಣೆ ಇದ್ದ ಹಿನ್ನೆಲೆಯಲ್ಲಿ ಕೆಲ ಕಾಲ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗಿತ್ತು. ಸ್ಥಳಕ್ಕೆ ಬಂದ ಬಿಬಿಎಂಪಿ ಸಿಬ್ಬಂದಿ ಮರ ತೆರವುಗೊಳಿಸಿದರು.

ರಾತ್ರಿ ಇಡೀ ರಸ್ತೆಯಲ್ಲಿ ಕಳೆದ ಜನ

ಇಡೀ ರಾತ್ರಿ ಸುರಿದ ಮಳೆಯಿಂದ ಯಲಹಂಕದಿಂದ-ಯಶವಂತ ಮಾರ್ಗದಲ್ಲಿರುವ ಎಂ.ಎಸ್‌.ಪಾಳ್ಯದಲ್ಲಿ ರಸ್ತೆಗಳಲ್ಲಿ ನೀರು ನಿಂತಿತ್ತು. ಹಲವು ಮನೆಗಳಿಗೂ ನೀರು ನುಗ್ಗಿದ್ದ ಪರಿಣಾಮ ಜನತೆ ರಾತ್ರಿಯಿಡೀ ರಸ್ತೆಯಲ್ಲಿ ನಿಲ್ಲುವ ಸ್ಥಿತಿ ಎದುರಾಯಿತು.

ವಾಹನ ಸಂಚಾರ ಅಸ್ತವ್ಯಸ್ತ

ಟಿ.ದಾಸರಹಳ್ಳಿಯ ಕೆಲವು ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ರಾತ್ರಿಯಿಡಿ ನಿದ್ರೆಯಿಲ್ಲದೆ ಪರದಾಡಿದರು. ಇಲ್ಲಿಯ ಬಾಗಲುಗುಂಟೆ-ಶೆಟ್ಟಹಳ್ಳಿ ಮುಖ್ಯರಸ್ತೆ ಮತ್ತು ಬೆಂಗಳೂರು-ತುಮಕೂರು ಹೆದ್ದಾರಿ, 8ನೇ ಮೈಲಿ ಸಂಪೂರ್ಣ ಜಲಾವೃತಗೊಂಡು ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ನೀರಿನ ಜೊತೆಯಲ್ಲೇ ಕಸ ಕಡ್ಡಿ ಹುಳುಗಳು ಹಾಗೂ ತ್ಯಾಜ್ಯವೆಲ್ಲ ಮನೆಯೊಳಗೆ ತೇಲಿ ಬಂದಿತು.

ನೆಹರು ಸಂಶೋಧನಾ ಕೇಂದ್ರಕ್ಕೆ ನುಗ್ಗಿದ ನೀರು

ಜಕ್ಕೂರು ಏರೋಡ್ರಂನ ಹಿಂಭಾಗದಲ್ಲಿರುವ ಜವಾಹರ್‌ಲಾಲ್‌ ನೆಹರು ಸಂಶೋಧನಾ ಕೇಂದ್ರಕ್ಕೂ  ನೀರು ನುಗ್ಗಿತ್ತು. ಜಕ್ಕೂರು ಮತ್ತು ರಾಚೇನಹಳ್ಳಿಯ ಕೆರೆ ಕೋಡಿ ಒಡೆದು ಕೇಂದ್ರದ ಸುತ್ತ ಮುತ್ತಲು ನೀರು ಆವರಿಸಿತ್ತು. ಇದರಿಂದ ಸಂಶೋಧನ ಕೇಂದ್ರದ ಕಂಪ್ಯೂಟರ್‌ ಸೆಕ್ಷನ್‌, ಅಡ್ಮಿನ್‌ ಸೆಕ್ಷನ್‌, ಲ್ಯಾಬ್‌ಗಳಿರುವ ನೆಲ ಮಹಡಿಗೆ ನೀರು ನುಗ್ಗಿತ್ತು. ಇದರಿಂದ ಹಲವು ದಾಖಾಲೆಗಳು ನೀರು ಪಾಲಾದವು ಎಂದು ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

click me!