ಮಂಡ್ಯ/ಚಾಮರಾಜನಗರ (ನ.14): ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ (Heavy rain) ಸುರಿಯುತ್ತಿದೆ. ಮಂಡ್ಯ ಜಿಲ್ಲೆಯಲ್ಲಿಯೂ ವರುಣನ ಆರ್ಭಟ ಜೋರಾಗಿದ್ದು, ನೂರಾರು ಎಕರೆ ಜಮೀನಿಗೆ ನೀರು ನುಗ್ಗಿದೆ.
ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗ್ರಾಮಗಳ ನೂರಾರು ಎಕರೆ ಜಮೀನು (Farm Land) ಜಲಾವೃತವಾಗಿದ್ದು, ಬಲ್ಲೇನಹಳ್ಳಿ, ಚಿಂದಗಿರಿಕೊಪ್ಪಲು ಸುತ್ತಮುತ್ತ ಗ್ರಾಮಗಳ ಜಮೀನು ಸಂಪೂರ್ಣ ನೀರಿನಿಂದಾವೃತವಾಗಿದೆ.
undefined
ಹಟ್ಟೆ ಹಳ್ಳ ಹರಿಯುವ ವ್ಯಾಪ್ತಿಯ ಜಮೀನುಗಳು ಜಲಾವೃತವಾಗಿದ್ದು, ರಾತ್ರಿ 10 ಗಂಟೆಗೆ ಶುರುವಾದ ಮಳೆ ಮುಂಜಾನೆವರೆಗೂ ಸುರಿದಿದೆ. ಹಳ್ಳ-ಕೊಳ್ಳಗಳು ಸಂಪೂರ್ನ ಭರ್ತಿಯಾಗಿದ್ದು, ಕಬ್ಬು, ಭತ್ತ, ತೆಂಗು, ಅಡಕೆ ಸೇರಿದಂತೆ ಇತರೆ ಬೆಳೆಗಳು ನೀರಿನಲ್ಲಿ ಮುಳುಗಿವೆ. ರಾತ್ರಿ ಸುರಿದ ಮಳೆಯಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ (Crops) ಹಾನಿಯಾಗಿದೆ.
ಭಾರಿ ಮಳೆಗೆ ಮಂಡ್ಯ ಜಿಲ್ಲೆ ಪಾಂಡವಪುರ (Pandavapura) ತಾಲೂಕಿನ ಲಿಂಗಾಪುರ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗಿ 8 ಮನೆ ಗೋಡೆ ಕುಸಿತವಾಗಿದೆ. ರಾತ್ರಿ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ನಿನ್ನೆ ಸಂಜೆ 4 ಗಂಟೆಯಿಂದ ಇಂದು ಮುಂಜಾನೆಯವರೆಗೂ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಹಳ್ಳದ ನೀರು ಉಕ್ಕಿ ಹರಿದು ಗ್ರಾಮಕ್ಕೆ ನುಗ್ಗಿದೆ.
ಗ್ರಾಮದ ಬಹುತೇಕ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯುಂಟಾಗಿದ್ದು, ದಿನಸಿ ಸೇರಿದಂತೆ ಅಗತ್ಯ ವಸ್ತುಗಳು ಸಂಪೂರ್ಣ ನಾಶವಾಗಿವೆ. ಮನೆಗೆ ನೀರು ತುಂಬಿಕೊಳ್ಳುತ್ತಿದ್ದಂತೆ ಜನರು ಮನೆಗಳಿಂದ ಹೊರ ಬಂದಿದ್ದರಿಂದ ಪ್ರಾಣ ಹಾನಿ ತಪ್ಪಿದೆ. ಮನೆ ಕಳೆದುಕೊಂಡವರನ್ನು ಸಂಬಂಧಿಕರು ಹಾಗು ವಿವಿಧ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.
ಆಟೋ, ಗೂಡ್ಸ್ ವಾಹನದಲ್ಲಿ ಅಳಿದುಳಿದ ಸಾಮಗ್ರಿ ತೆಗೆದುಕೊಂಡು ಜನರು ಊರು ಬಿಡುತ್ತಿದ್ದು, ಮಳೆಯಿಂದ ಸಾಕಷ್ಟು ಅವಾಂತರ ಉಂಟಾಗಿದೆ.
ಮಧ್ಯ ರಾತ್ರಿಯೇ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ಸಿ.ಎಸ್.ಪುಟ್ಟರಾಜು (CS Puttaraju) ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ತುರ್ತು ಪರಿಹಾರ ಕಾರ್ಯ ನಡೆಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಅಗತ್ಯ ಸವಕರ್ಯ ಒದಗಿಸುವ ಭರಸವೆಯನ್ನೂ ನೀಡಿದರು.
ಕೊಚ್ಚಿ ಹೋದ ರಸ್ತೆ : ಭಾರಿ ಮಳೆಗೆ ರಸ್ತೆ ಕೊಚ್ಚಿ ಹೋಗಿದ್ದು, ರಸ್ತೆಯಲ್ಲೇ ಕಾರೊಂದು ಸಿಲುಕಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಹುಣಸನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದ್ದು, ಭಾರೀ ಮಳೆಗೆ ಹುಣಸನಹಳ್ಳಿ ಹೆಚ್.ಬಳ್ಳೇಕೆರೆ ಗ್ರಾಮಕ್ಕೆ ಸಂಪರ್ಕ ಸಾಧಿಸುವ ರಸ್ತೆಯೇ ಇಲ್ಲದಂತಾಗಿದೆ.
ರಸ್ತೆ ಕೊಚ್ಚಿಹೋದ ಸ್ಥಳದಲ್ಲೇ ಕಾರು (Car) ಸಿಲುಕಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ರಸ್ತೆಯ ಅಕ್ಕಪಕ್ಕದ ಜಮೀನಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಚಾಮರಾಜನಗರ : ತಮಿಳುನಾಡು (tamilnadu) ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯಿಂದ ಮೆಟ್ಟೂರು ಜಲಾಶಯ ಭರ್ತಿಯಾಗಿದೆ. ಇತ್ತೀಚೆಗೆ ಮಂಡ್ಯ ಜಿಲ್ಲೆ ಕೆ.ಆರ್.ಎಸ್.(KRS) ಜಲಾಶಯ ಕೂಡ ಭರ್ತಿಯಾಗಿದ್ದು, ಇದೀಗ ಮೆಟ್ಟೂರು ಜಲಾಶಯ ಭರ್ತಿಯಾಗಿ ತಮಿಳುನಾಡಿನ ನೀರಿನ ದಾಹ ತಣಿಸಿದೆ.
ಕಾವೇರಿ (Cauvery) ನೀರಿಗಾಗಿ ತಮಿಳುನಾಡು ಪದೇ ಪದೇ ಕ್ಯಾತೆ ತೆಗೆಯುವ ಮುನ್ನವೇ ಇದೀಗ ಕಾವೇರಿ ತುಂಬಿದ್ದಾಳೆ. ಮೆಟ್ಟೂರು ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಗರಿಷ್ಟ ಮಟ್ಟ 120 ಅಡಿ ಇದ್ದು, ಇಂದಿನ ಮಟ್ಟ 120 ಅಡಿಯಷ್ಟಾಗಿದೆ. ಒಟ್ಟು 93.47 ಟಿಎಂಸಿ ನೀರು ಸಂಗ್ರಹವಾಗಿದ್ದು, ಒಳ ಹರಿವು 25000 ಕ್ಯೂಸೆಕ್ಸ್ ಇದೆ. ಹೊರಹರಿವು 24000 ಕ್ಯೂಸೆಕ್ಸ್ ಇದೆ. ಯಾವುದೇ ಕ್ಷಣದಲ್ಲಿ ಜಲಾಶಯದಿಂದ ನದಿಗೆ ನೀರು ಬಿಡುವ ಸಾಧ್ಯತೆ ಇದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದಿರಲು ತಮಿಳುನಾಡು ಜಲಸಂಪನ್ಮೂಲ ಇಲಾಖೆ ಸೂಚನೆ ನೀಡಿದೆ.
ಚಾಮರಾಜನಗರ : ತಮಿಳುನಾಡಿನಲ್ಲಿ ಸುರಿಯುತ್ತಿರುವ ಸತತ ಮಳೆ ಹಿನ್ನಲೆ ದಿಂಬಂ ಘಟ್ಟಗಳಿಂದ ಸುವರ್ಣಾವತಿಗೆ(suvarnavathi) ಅಪಾರ ಪ್ರಮಾಣದಲ್ಲಿ ನೀರು ಹರಿದಿದ್ದು, ಚಾಮರಾಜನಗರದ ಸುವರ್ಣಾವತಿ ಜಲಾಶಯ ಭರ್ತಿಯಾಗಿದೆ. ಚಾಮರಾಜನಗರ ತಾಲೂಕಿನ ಅಟ್ಟಗೂಳಿಪುರದ ಬಳಿಯಿರೋ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ. ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದ್ದು,
ನದಿ ಬಳಿ ತೆರಳದಂತೆ ರೈತರು,ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಕಬಿನಿ ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆ ಹೊರಡಿಸಿದ್ದಾರೆ.
ಕುಸಿದ ಮನೆ : ಇನ್ನು ಸುರಿಯುತ್ತಿರುವ ಭಾರಿ ಮಳೆಯಿಂದ ಮನೆ ಕುಸಿದು ಬಿದ್ದಿರುವ ಘಟನೆ ನಂಜನಗೂಡು ಪಟ್ಟಣದ ಅಶೋಕಪುರಂನಲ್ಲಿ ನಡೆದಿದೆ. ಪ್ರಾಣಾಪಾಯದಿಂದ ಕುಟುಂಬಸ್ಥರು ಪಾರಾಗಿದ್ದಾರೆ. ಹಲವು ದಿನಗಳಿಂದ ಮಳೆ ಸುರಿಯುತ್ತಿದ್ದು ಹಲವೆಡೆ ಅಪಾರ ನಷ್ಟವನ್ನುಂಟು ಮಾಡುತ್ತಿದೆ.