ಬೆಂಗಳೂರು (ಜು.05): ರಾಜ್ಯದ ಕೆಲವು ಪ್ರದೇಶಗಳಲ್ಲಿ ಜು.9ರವರೆಗೆ ವ್ಯಾಪಕ ಮಳೆ ಬೀಳುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ‘ಯೆಲ್ಲೋ ಅಲರ್ಟ್’ ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಅಬ್ಬರಿಸಿ ಮರೆಯಾಗಿದ್ದ ವರುಣ ಇದೀಗ ಮತ್ತೆ ಜೋರಾಗುವ ಮುನ್ಸೂಚನೆ ನೀಡಿದ್ದಾನೆ. ದಕ್ಷಿಣ ಒಳನಾಡು ಭಾಗದಲ್ಲಿ ಜು.6ರಂದು ಗುಡುಗು ಸಹಿತ ಭಾರಿ ಮಳೆ ನಿರೀಕ್ಷೆ ಇದೆ. ಹೀಗಾಗಿ ಬೆಂಗಳೂರು ಗ್ರಾಮಾಂತರ ಮತ್ತು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ.
3 ಮಕ್ಕಳು ಸೇರಿ ಐವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಬಡಿದ ಸಿಡಿಲು; ಭಯಾನಕ ವಿಡಿಯೋ! ...
ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ವ್ಯಾಪಕ ಮಳೆ ನಿರೀಕ್ಷೆ ಕಾರಣಕ್ಕೆ ಜು.8 ಮತ್ತು 9ರಂದು ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಅಲ್ಲದೇ ಕೆಲವು ದಿನಗಳ ಹಿಂದಷ್ಟೆಅತ್ಯಧಿಕ ಮಳೆ ಕಂಡಿದ್ದ ಉತ್ತರ ಒಳನಾಡಿಗೆ ವರುಣ ತುಸು ವಿರಾಮ ನೀಡಿದ್ದಾನೆ. ಈ ಭಾಗದ ಕೆಲವು ಪ್ರದೇಶಗಳಲ್ಲಿ ಮಾತ್ರ ಹಗುರದಿಂದ ಸಾಧಾರಣ ಮಳೆ ಸುರಿಯಲಿದೆ ಎಂದು ಅಂದಾಜಿಸಲಾಗಿದೆ.
ಮಳೆಗಾಲದಲ್ಲಿ ಕಾಡುವ ಜ್ವರದಿಂದ ಮಕ್ಕಳ ರಕ್ಷಣೆ ಮಾಡುವುದು ಹೇಗೆ.? ಡಾಕ್ಟ್ರು ಹೀಗಂತಾರೆ ...
ಶ್ರೀಲಂಕಾದ ಕರಾವಳಿ ಭಾಗದ ಸಮುದ್ರದಲ್ಲಿ ಮೇಲ್ಮೈ ಸುಳಿ ಗಾಳಿ ತೀವ್ರಗೊಂಡಿದೆ. ಇದರ ಪರಿಣಾಮದಿಂದ ರಾಜ್ಯದಲ್ಲಿ ಮಳೆ ಆಗಲಿದ್ದು, ಜು.5ರ ನಂತರ ಮಳೆ ಪ್ರಮಾಣದಲ್ಲಿ ಇನ್ನಷ್ಟುಏರಿಕೆಯಾಗಲಿದೆ. ತಾಪಮಾನ ಪ್ರಮಾಣ ತುಸು ಇಳಿಕೆಯಾಗಿ, ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ 24ಗಂಟೆಯಲ್ಲಿ ಉತ್ತರ ಒಳನಾಡಿನ ರಾಯಚೂರು ಜಿಲ್ಲೆಯ ಧಡೆಸುಗುರು 5 ಸೆಂ.ಮೀ., ಗದಗನಲ್ಲಿ 4 ಸೆಂ.ಮೀ ಮಳೆ ಸುರಿದಿದೆ. ಕಲಬುರಗಿ (35.1 ಡಿ.ಸೆ), ದಾವಣಗೆರೆ(34), ವಿಜಯಪುರ(33.5), ಬೀದರ್(33), ಚಿತ್ರದುರ್ಗ(32.6), ಬೆಂಗಳೂರು ನಗರ ಮತ್ತು ಗ್ರಾಮಾಂತರ(31 ಡಿ.ಸೆ) ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ಇಲಾಖೆ ವರದಿ ಮಾಡಿದೆ.