
ಸಕಲೇಶಪುರ (ಜೂ.14): ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್(UT Khader) ಅವರು ರಾತ್ರಿ 11 ಗಂಟೆಗೆ ಪ್ರಗತಿ ಪರಿಶೀಲನಾ ಸಭೆ ಆರಂಭಿಸಿ ಮುಂಜಾನೆ 3 ಗಂಟೆ ವರೆಗೂ ಸಭೆ ನಡೆಸಿ ಅಚ್ಚರಿ ಮೂಡಿಸಿದ್ದಾರೆ.
ಹಾಸನ(Hassan)ದ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆ(Crawford Hospital in Sakleshpur)ಯಲ್ಲಿ ಗುರುವಾರ ರಾತ್ರಿ 11 ಗಂಟೆಯಿಂದ ಶುಕ್ರವಾರ ಮುಂಜಾನೆ 3 ಗಂಟೆಯ ತನಕ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಶಾಸಕ ಸಿಮೆಂಟ್ ಮಂಜು, ಸಂಸದ ಶ್ರೇಯಸ್ ಪಟೇಲ್ ಭಾಗವಹಿಸಿದ್ದರು. ಜೂ.5ರಂದು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ರಾತ್ರಿ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೀಗ ತಡರಾತ್ರಿ ಆಸ್ಪತ್ರೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಚ್ಚರಿ ಮೂಡಿದ್ದಾರೆ.
ಸ್ಥಳೀಯ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಕರ್ನಾಟಕದ ಇತಿಹಾಸದಲ್ಲೇ ಮಧ್ಯರಾತ್ರಿವರೆಗೆ ಪ್ರಗತಿ ಪರಿಶೀಲನಾ ಸಭೆ ನಡೆಸುವ ಮಂತ್ರಿ ಯಾರಾದರೂ ಇದ್ದರೆ ಅದು ಯು.ಟಿ. ಖಾದರ್ ಮಾತ್ರ. ವಿಧಾನಸಭಾ ಅಧ್ಯಕ್ಷರಾಗಿದ್ದಾಗ ಅವರ ಕಾರ್ಯವೈಖರಿಯನ್ನು ನೋಡಿದ್ದೇನೆ. ಸದನದಲ್ಲಿ ಮಾತನಾಡಲು ಅವಕಾಶ ಸಿಗುವುದು ಒಂದು ಕೋಟಿಗೂ ಅಧಿಕ ಅನುದಾನ ದೊರೆತಷ್ಟು ಖುಷಿ ನೀಡುತ್ತದೆ. ಅಂತಹ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಶಾಸಕರಿಗೂ ಸಮಾನ ಅವಕಾಶ ಕಲ್ಪಿಸಿದ ಮೊದಲ ಸಭಾಧ್ಯಕ್ಷರಲ್ಲಿ ಇವರು ಎಂದರೆ ತಪ್ಪಾಗದು ಎಂದು ಹೇಳಿದರು.
ಇನ್ನು ಸಭೆಯಲ್ಲಿ ಮಾತನಾಡಿದ ಯು.ಟಿ.ಖಾದರ್, ಸರ್ಕಾರಿ ಆಸ್ಪತ್ರೆ ಎಂದರೆ ಅದು ಕುಟುಂಬದ ಆಸ್ಪತ್ರೆಯೆಂದು ಭಾವಿಸಬೇಕು. ರೋಗಿಗಳು ಬಂದ ವೇಳೆ ಅವರಿಗೆ ಮಾನವೀಯತೆಯಿಂದ ಚಿಕಿತ್ಸೆ ನೀಡಬೇಕು ಎಂದು ವೈದ್ಯರಿಗೆ ಸಲಹೆ ನೀಡಿದರು.
ಐದು ವರ್ಷ ಸೇವೆ ಸಲ್ಲಿಸಿದ ವೈದ್ಯರಿಗೆ ಶುಭಸುದ್ದಿ
ಇನ್ನು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಐದು ವರ್ಷ ಪೂರ್ಣಗೊಳಿಸಿ ಸೇವೆ ಸಲ್ಲಿಸಿದ ಹೊರಗುತ್ತಿಗೆ ವೈದ್ಯರನ್ನು ಶೀಘ್ರದಲ್ಲೇ ನೇಮಕಾತಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ ಸಚಿವರು, ಆಸ್ಪತ್ರೆಯಲ್ಲಿನ ಕುಂದುಕೊರತೆಗಳ ಬಗ್ಗೆ ರಾಜ್ಯಾದ್ಯಂತ ನೂತನ ಸಹಾಯವಾಣಿಯನ್ನು ಸ್ಥಾಪಿಸುವ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದು ಇದೇ ವೇಳೆ ಹೇಳಿದರು.
ಕಿರಿಯ ವೈದ್ಯರು ಹಾಗೂ ಹೊಸದಾಗಿ ಬರುವ ವೈದ್ಯರಲ್ಲಿ ಆಸ್ಪತ್ರೆಯ ಬಗ್ಗೆ ಸಕಾರಾತ್ಮಕ ಭಾವನೆ ಮೂಡಿಸಿ ಕೆಲಸಕ್ಕೆ ಸೇರಿಸಿಕೊಳ್ಳಬೇಕು, ಅವರನ್ನು ಮನವೊಲಿಸಬೇಕು ಎಂದರು. ಮಾನಸಿಕವಾಗಿ ಸದೃಢವಾಗಿರುವ ನಿವೃತ್ತ ವೈದ್ಯರನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳಲು ಸರ್ಕಾರದೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸಂಘ-ಸಂಸ್ಥೆಯವರು ಆಸ್ಪತ್ರೆಯನ್ನು ತಮ್ಮ ಆಸ್ಪತ್ರೆ ಎಂಬ ಭಾವನೆಯೊಂದಿಗೆ ನೋಡಬೇಕು. ವೈದ್ಯರು ಮತ್ತು ಸಿಬ್ಬಂದಿಗಳೊಂದಿಗೆ ಮಾನವೀಯ ದೃಷ್ಟಿಕೋನದಿಂದ ವರ್ತಿಸಬೇಕು ಹಾಗೂ ಅವರಿಗೆ ತೊಂದರೆ ಉಂಟಾಗದ ರೀತಿಯಲ್ಲಿ ಸಹಕರಿಸಬೇಕು ಎಂದರು.