ಕೆಲಸ ನಿರ್ವಹಿಸದ ವೈದ್ಯರು ತೊಲಗಿ: ಆರೋಗ್ಯ ಸಚಿವರ ಖಡಕ್ ವಾರ್ನಿಂಗ್

By Kannadaprabha News  |  First Published Sep 27, 2019, 3:26 PM IST

ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಕೆಲಸ ಮಾಡಲಾಗದ ವೈದ್ಯರು ಮನೆಗೆ ಹೋಗಿ ಅಂತ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಸರ್ಕಾರಿ ವೈದ್ಯರು ಎರಡು ಬೋಟ್‌ಗಳ ಮೇಲೆ ಕಾಲು ಇಡಬಾರದು. ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಎಂಬಿಬಿಎಸ್‌ ಪದವಿ ಮುಗಿಸಿ ಹೊರ ಬರುತ್ತಿದ್ದು, ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದು ವೇಳೆ ಸರ್ಕಾರಿ ವೈದ್ಯರೂ ಖಾಸಗಿಯಾಗಿಯೂ ಕೆಲಸ ಮಾಡುವುದೇ ಆದರೆ ಮೊದಲು ಎಲ್ಲಿಂದ ತೊಲಗಿ ಎಂದು ಗುಡುಗಿದ್ದಾರೆ.


ಮಡಿಕೇರಿ(ಸೆ.27): ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ನಿಮಗೆ ಆಗದಿದ್ದರೆ ಇಲ್ಲಿಂದ ತೊಲಗಿ ಎಂದು ಕೆಲಸದಲ್ಲಿ ಶ್ರದ್ಧೆ ತೋರಿಸದ ಸರ್ಕಾರಿ ವೈದ್ಯರಿಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಲು ಗುರುವಾರ ರಾತ್ರಿ ಮಡಿಕೇರಿ ಆಗಮಿಸಿದ ಅವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಎಂತಹ ಪರಿಸ್ಥಿತಿಗೂ ನಾನು ಬಗ್ಗುವುದಿಲ್ಲ. ಸರ್ಕಾರಿ ವೈದ್ಯರು ಎರಡು ಬೋಟ್‌ಗಳ ಮೇಲೆ ಕಾಲು ಇಡಬಾರದು. ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಎಂಬಿಬಿಎಸ್‌ ಪದವಿ ಮುಗಿಸಿ ಹೊರ ಬರುತ್ತಿದ್ದು, ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದು ವೇಳೆ ಸರ್ಕಾರಿ ವೈದ್ಯರೂ ಖಾಸಗಿಯಾಗಿಯೂ ಕೆಲಸ ಮಾಡುವುದೇ ಆದರೆ ಮೊದಲು ಎಲ್ಲಿಂದ ತೊಲಗಿ ಎಂದು ಗುಡುಗಿದರು.

Tap to resize

Latest Videos

ಕೊಡವ ಭಾಷೆಯಲ್ಲೇ ಸಚಿವ ಶ್ರೀರಾಮುಲು ಟ್ವೀಟ್‌

ಸರ್ಕಾರಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಕಾಪೋರೇಟ್‌ ಸೆಕ್ಟರ್‌ ಮಾದರಿಯಲ್ಲಿ ಸರ್ಕಾರಿ ಆಸ್ಪತ್ರೆಗಳು ಆಗಬೇಕು ಅನ್ನುವುದು ನನ್ನ ಗುರಿ. ಸರ್ಕಾರಿ ಆಸ್ಪತ್ರೆಗಳನ್ನು ಶುಚಿಯಾಗಿಡಲು ಟೆಂಡರ್‌ ಮೂಲಕ ನಿರ್ವಹಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸರ್ಕಾರಿ ಆಸ್ಪತ್ರೆಯಲ್ಲಿರುವ ವೈದ್ಯರ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಆಯಾ ಜಿಲ್ಲೆಯ ಆರೋಗ್ಯಾಧಿಕಾರಿಗಳಲ್ಲಿ ವೈದ್ಯರನ್ನು ನೇಮಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಅಗತ್ಯ:

ಕೊಡಗಿಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಅಗತ್ಯತೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೊಡಗಿಗೆ ಎಮರ್ಜೆನ್ಸಿ ಆಸ್ಪತ್ರೆಯ ಅಗತ್ಯವಿದೆ. ಕಳೆದ ವರ್ಷ ಪ್ರವಾಹದ ಸನ್ನಿವೇಶವನ್ನು ನಾನು ಮನಗಂಡಿದ್ದೇನೆ. ಈ ಬಗ್ಗೆ ಸಿಎಂ ಹಾಗೂ ಶಾಸಕರ ಜೊತೆ ಮಾತನಾಡುತ್ತೇನೆ. ಅಲ್ಲದೆ ಈ ಸಂಬಂಧ ಹಣಕಾಸು ಹಾಗೂ ಆಡಳಿತಾತ್ಮಕ ಅನುಮೋದನೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಸಿಎಂ ಅವರನ್ನು ಮುಂಚೂಣಿಯಲ್ಲಿ ನಿಂತು ಮನವೊಲಿಸುವ ಕೆಲಸ ಮಾಡುತ್ತೇನೆ, ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತನಾಡುವೆ ಎಂದು ಭರವಸೆ ನೀಡಿದರು.

ಗೊಂದಲ ಪರಿಹಾರ:

ಚುನಾವಣಾ ಆಯೋಗ ಆದೇಶ ನೀಡುವ ಮೊದಲೆ ಅನರ್ಹ ಶಾಸಕರ ಗೊಂದಲವನ್ನು ನಾವೇ ಬಗೆಹರಿಸಿಕೊಳ್ತೇವೆ. ಯಾರೂ ಭಯ ಪಡುವ ಅಗತ್ಯವಿಲ್ಲ. ಈ ಸರ್ಕಾರ ಸುಗಮವಾಗಿ ಮೂರು ವರ್ಷ ಪೂರೈಸಲಿದೆ ಎಂದು ಅನರ್ಹ ಶಾಸಕರ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಅವರು ಭರವಸೆ ನೀಡಿದರು.

ಆರೋಗ್ಯ ಸಚಿವರ ಭೇಟಿ, ಕೊಡಗಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಟ್ವೀಟ್ ಅಭಿಯಾನ

click me!