3 ಕಿ.ಮೀ. ದೂರು ನಡೆದುಕೊಂಡು ಆಸ್ಪತ್ರೆಯಲ್ಲಿ ಸೇರಿದ ಕೊರೋನಾ ಸೋಂಕಿತ ಮಹಿಳೆ| ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದ ಘಟನೆ| ಆಟೋ ಹತ್ತಿದರೆ ಚಾಲಕಗೂ ಸೋಂಕು ತಗಲುವ ಭೀತಿಯಿಂದ ನಡೆದುಕೊಂಡೇ ಆಸ್ಪತ್ರೆಗೆ ದಾಖಲಾದ ಮಹಿಳೆ|
ಕೊಪ್ಪಳ(ಜು.06): ಆರೋಗ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷತನದಿಂದ ಕೊರೋನಾ ಸೋಂಕಿತ ಮಹಿಳೆಯಬ್ಬಳು ನಡೆದುಕೊಂಡೇ ಆಸ್ಪತ್ರೆ ಸೇರಿರುವ ಘಟನೆ ಜಿಲ್ಲೆಯ ಗಂಗಾವತಿ ನಗರದಲ್ಲಿ ಇಂದು (ಭಾನುವಾರ) ನಡೆದಿದೆ.
ಪತಿ ಮತ್ತು ಪತ್ನಿ ಬೆಂಗಳೂರಿನಲ್ಲಿ ಧೋಬಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈ ದಂಪತಿ ಕಳೆದ 15 ದಿನಗಳ ಹಿಂದೆ ಬೆಂಗಳೂರಿನಿಂದ ಗಂಗಾವತಿಗೆ ಆಗಮಿಸಿದ್ದರು. ಪತ್ನಿಗೆ ಪರೀಕ್ಷೆ ಮಾಡಿಸಿದಾಗ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಆಂಬುಲೆನ್ಸ್‌ಗೆ ಕರೆ ಮಾಡಿ ವಿಷಯವನ್ನ 36 ವರ್ಷದ ಸೋಂಕಿತ ಮಹಿಳೆಯ ಪತಿ ತಿಳಿಸಿದ್ದಾರೆ. ನಿಮ್ಮ ಮನೆ ಬಳಿ ಆಂಬುಲೆನ್ಸ್ ಬಂದರೆ ಮನೆ ಸುತ್ತ ಮುತ್ತ ಜನರಿಗೆ ಗೊತ್ತಾಗುತ್ತೆ, ಹೀಗಾಗಿ ನೀವೇ ನೇರವಾಗಿ ಕೋವಿಡ್ ಆಸ್ಪತ್ರೆಗೆ ಬಂದು ದಾಖಲಾಗಿ ಎಂದು ಹೇಳುವ ಮೂಲಕ ಹಾರಿಕೆಯ ಉತ್ತರ ನೀಡಿದ್ದಾರೆ.
ಕಾರಟಗಿ: ಹೈದರಾಬಾದ್‌ನಿಂದ ಬಂದ ವ್ಯಕ್ತಿಗೆ ಕೊರೋನಾ, ಆತಂಕದಲ್ಲಿ ಜನತೆ
ಹೀಗಾಗಿ ಬೇರೆ ದಾರಿ ಕಾಣದೆ ಕೊರೋನಾ ಸೋಂಕಿತ ಮಹಿಳೆ ಸುಮಾರು ಮೂರು ಕಿಲೋಮೀಟರ್ ನಡೆದುಕೊಂಡೇ ಆಸ್ಪತ್ರೆ ಸೇರಿದ್ದಾಳೆ. ಆಟೋ ಹತ್ತಿದರೆ ಚಾಲಕಗೂ ಸೋಂಕು ತಗಲುವ ಭೀತಿಯಿಂದ ನಡೆದು ಕೊಂಡು ಹೋಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಈ ಬಗ್ಗೆ ಮಾತನಾಡಿದ ಗಂಗಾವತಿ ತಹಶೀಲ್ದಾರ್ ಚಂದ್ರಕಾಂತ್ ಅವರು, ಸೋಂಕಿತರನ್ನ ಕೋವಿಡ್ ಆಸ್ಪತ್ರೆಗೆ ಕರೆತಂದು ದಾಖಲಿಸುವುದು ಆರೋಗ್ಯ ಇಲಾಖೆಯವರ ಕೆಲಸವಾಗಿದೆ. ಆದರೆ, ಸಿಬ್ಬಂದಿ ಹೀಗೆ ಮಾಡ ಬಾರದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.