ನಿಲ್ಲದ ಕೊರೋನಾ ಕಾಟ: ಕೊಟ್ಟೂ​ರಲ್ಲಿ ಮನೆ ಮನೆಗೆ ಕೋವಿಡ್‌ ಟೆಸ್ಟ್‌

By Kannadaprabha News  |  First Published Sep 21, 2020, 12:05 PM IST

ಕೊರೋನಾ ಪರೀ​ಕ್ಷೆ​ಗಾಗಿ 29 ತಂಡ ರಚಿ​ಸಿದ ಆರೋಗ್ಯ ಇಲಾ​ಖೆ| 400ಕ್ಕೂ ಹೆಚ್ಚು ಜನ​ರಿಗೆ ಸೋಂಕು ತಗು​ಲಿ​ದ್ದ​ರಿಂದ ಹೆಚ್ಚಾದ ಭೀತಿ| ಕೊಟ್ಟೂರು ಪಟ್ಟಣದ 35 ಸಾವಿರಕ್ಕೂ ಅಧಿಕ ಜನರಿಗೆ ಕೊರೋನಾ ಪರೀಕ್ಷಿಸಲು ಆರೋಗ್ಯ ಇಲಾಖೆ ನಿರ್ಧಾರ| 


ಜಿ. ಸೋಮಶೇಖರ

ಕೊಟ್ಟೂರು(ಸೆ.21): ಕೊರೋನಾ ಕೊಟ್ಟೂರಿಗರನ್ನು ಭಯಾನಕವಾಗಿ ಕಾಡತೊಡಗಿದ್ದು ಕಂಗೆಡಿಸಿದೆ. ತಾಲೂಕಿನಲ್ಲಿ 400ಕ್ಕೂ ಹೆಚ್ಚು ಜನ​ರಿಗೆ ಸೋಂಕು ತಗು​ಲಿ​ದ್ದ​ರೆ, 15ಕ್ಕೂ ಹೆಚ್ಚು ಜನ ಕೊರೋನಾದಿಂದಲೇ ಸಾವಿಗೀಡಾಗಿದ್ದಾರೆ. ಪ್ರತಿಯೊಬ್ಬರಲ್ಲೂ ದಿನ ದಿನಕ್ಕೂ ರೋಗದ ಬಗ್ಗೆ ಮತ್ತಷ್ಟು ಭೀತಿಗೊಳಗಾಗುವಂತೆ ಮಾಡಿದೆ. ಈ ಹಿನ್ನೆ​ಲೆ​ಯ​ಲ್ಲಿ ಆರೋಗ್ಯ ಇಲಾಖೆ ಇದೀಗ ಕೊಟ್ಟೂರಿನ ಪ್ರತಿಯೊಬ್ಬರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸುವ ಕಾರ್ಯವನ್ನು ಭಾನುವಾರದಿಂದ ಕೈಗೆತ್ತಿಕೊಂಡಿದೆ.

Latest Videos

undefined

ಪಟ್ಟಣದಲ್ಲಿ 35 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು ಇಷ್ಟು ಪ್ರಮಾಣದ ನಾಗರಿಕರನ್ನು ಪರೀಕ್ಷಿಸಲು 3-4 ದಿನಗಳ ಕಾಲ ವಿನಿಯೋಗವಾಗಲಿದೆ. ಇದಕ್ಕೆಂದೇ ಕೊಟ್ಟೂರು, ಉಜ್ಜಯಿನಿ ಮತ್ತು ನಾಗರಕಟ್ಟೆಮತ್ತಿತರ ಭಾಗಗಳ ಆಶಾ ಕಾರ್ಯಕರ್ತರನ್ನು ಆರೋಗ್ಯ ಇಲಾಖೆ ಬಳಸಿಕೊಂಡಿದೆ.

ಕೊಟ್ಟೂರಿನಲ್ಲಿ ಒಟ್ಟು 29 ತಂಡಗಳನ್ನು ಕೋವಿಡ್‌ ಪರೀಕ್ಷೆಗಳಿಗೆಂದೇ ಆರೋಗ್ಯ ಇಲಾಖೆ ರಚನೆ ಮಾಡಿದೆ. ಪ್ರತಿ ಭಾಗಕ್ಕೆ ಇಬ್ಬರು ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರ ತಂಡ ತೆರಳಲಿದೆ. ಪ್ರತಿ ಮನೆಯವರ ಆರೋಗ್ಯ ವಿವರವನ್ನು ಕಲೆಹಾಕಿ ಪ್ರತಿಯೊಬ್ಬರ ದೇಹದಲ್ಲಿನ ಆಮ್ಲಜನಕ ಪ್ರಮಾಣ 95 ಕ್ಕಿಂತ ಕಡಿಮೆ ಕಂಡುಬಂದರೆ ಅಂಥವರನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆಯಿಸಿಕೊಂಡು ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲಾಗುತ್ತದೆ. ಪ್ರತಿ ತಂಡಕ್ಕೆ ಆಕ್ಸಿಮೀಟರ್‌ ಯಂತ್ರವನ್ನು ಬಳಕೆ ಮಾಡಿಕೊಳ್ಳಲು ಆರೋಗ್ಯ ಇಲಾಖೆ ನೀಡಿದೆ. ಈ ಆಕ್ಸಿಮೀಟರ್‌ ಯಂತ್ರದ ಪರೀಕ್ಷೆಗೆ ಪ್ರತಿಯೊಬ್ಬರೂ ಮುಂದಾಗಿ ಸಹಕರಿಸಬೇಕಿದೆ.

'ದಲಿತರು ದೂರವಾಗಿದ್ದೇ ಕಾಂಗ್ರೆಸ್‌ ಅಧಿಕಾರ ಕಳೆದುಕೊಳ್ಳಲು ಕಾರಣ'

ಕೊಟ್ಟೂರು ಪಟ್ಟಣದಲ್ಲಿ ಅನೇಕ ಕಾಯಿಲೆಗೆ ಒಳಗಾಗಿ ಮೃತಪಟ್ಟಿದ್ದರೆ, ಮೃತಪಟ್ಟವರೆಲ್ಲ ಕೊರೋನಾದಿಂದಲೇ ಎಂದು ಸುದ್ದಿ ಹಬ್ಬಿ ಜನರನ್ನು ಕಳೆದ ವಾರದಿಂದ ಮತ್ತಷ್ಟುಭೀತಿಗೊಳಿಸಿದೆ. ದಿನವೊಂದಕ್ಕೆ ಕನಿಷ್ಠ 6ರಿಂದ 7 ಜನರಿಗೆ ಕೊರೋನಾ ಪಾಸಿಟಿವ್‌ ಕಂಡು ಬರುತ್ತಿರುವುದು ಎಲ್ಲರನ್ನೂ ಘಾಸಿಗೊಳಿಸಿದೆ. ಕೊಟ್ಟೂರಿನ ಕೊರೋನಾ ಸೋಂಕಿತರ ಸಂಖ್ಯೆ ಪ್ರಮಾಣ ಹೆಚ್ಚಾಗುತ್ತಿರುವ ಕಾರಣಕ್ಕಾಗಿ ಜಿಲ್ಲಾಡಳಿತ ಕೂಡಲೇ ಪಟ್ಟಣದ ಪ್ರತಿಯೊಬ್ಬರನ್ನು ಪರೀಕ್ಷೆಗೆ ಒಳ​ಪ​ಡಿ​ಸ​ಲು ಆರೋಗ್ಯ ಇಲಾಖೆಗೆ ಸೂಚನೆ ನೀಡಿ ರೋಗ ನಿಯಂತ್ರಣಕ್ಕೆ ಸೂಚಿಸಿದೆ. ಈ ಕಾರಣದಿಂದ ತಾಲೂಕು ಆರೋಗ್ಯ ಇಲಾಖೆ ವೈದ್ಯರು ಕಳೆದ 2-3 ದಿನಗಳಿಂದ ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಸಿಬ್ಬಂದಿಯನ್ನು ಈ ಸಂಬಂಧ ತರಬೇತಿ ನೀಡಿ ಮನೆ ಮನೆಗೆ ತೆರಳಿ ಪ್ರತಿಯೊಬ್ಬರ ಪರೀಕ್ಷೆ ಕೈಗೊಳ್ಳುವಂತೆ ಅಣಿಗೊಳಿಸಿದ್ದಾರೆ. ಪಾಸಿಟಿವ್‌ ಬಂದವರನ್ನು ಕೂಡಲೇ ಕೋವಿಡ್‌ ಚಿಕಿತ್ಸೆಗೆ ಒಳಪಡಿಸಿ ಗುಣಪಡಿಸುವ ಕಾರ್ಯವನ್ನು ಆರೋಗ್ಯ ಇಲಾಖೆಯವರು ಕೈಗೊಂಡಿದ್ದಾರೆ.

ಕೊಟ್ಟೂರು ಪಟ್ಟಣದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣಕ್ಕಾಗಿ ಜಿಲ್ಲಾಡಳಿತ ಪಟ್ಟಣದಲ್ಲಿನ ಪ್ರತಿಯೊಬ್ಬರ ಪರೀಕ್ಷೆ ಮಾಡುವಂತೆ ಸೂಚಿಸಿದೆ. ಭಾನುವಾರದಿಂದ ಆಶಾ ಕಾರ್ಯಕರ್ತರ ಸಹಕಾರದೊಂದಿಗೆ ನಮ್ಮ ಇಲಾಖೆ ಕೈಗೊಂಡಿದೆ. ಪ್ರತಿ ಮನೆಯವರು ಆರೋಗ್ಯ ಮತ್ತು ಆಶಾ ಕಾರ್ಯಕರ್ತರ ತಂಡಕ್ಕೆ ಮಾಹಿತಿ ನೀಡಿ ಸಹಕರಿಸಬೇಕು. ಯಾರೊಬ್ಬರೂ ಅನಗತ್ಯವಾಗಿ ಭೀತಿಗೆ ಒಳಗಾಗಬಾರದು ಎಂದು ಕೊಟ್ಟೂರು ತಾಲೂಕು ವೈದ್ಯಾಧಿಕಾರಿ ಡಾ. ಷಣ್ಮುಖನಾಯ್ಕ ಅವರು ತಿಳಿಸಿದ್ದಾರೆ. 

ಕೊಟ್ಟೂರಿನಲ್ಲಿ ಮನೆ ಮನೆ ಸಮೀಕ್ಷೆ ಕೈಗೊಂಡು ಕೊರೋನಾ ಪರೀಕ್ಷೆಗೆ ಗುರಿಪಡಿಸುವ ಆರೋಗ್ಯ ಇಲಾಖೆಯ ಕ್ರಮವನ್ನು ಸ್ವಾಗತಿಸುತ್ತೇವೆ. ಈ ಹಂತದಲ್ಲಿ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಆರೋಗ್ಯದ ವಿವರಗಳನ್ನು ನೀಡುವ ಮೂಲಕ ಭಯಾನಕ ರೋಗ ನಿಯಂತ್ರಣಕ್ಕೆ ಸಹಕರಿಸೋಣ ಎಂದು ಕೊಟ್ಟೂರಿನ ನಾಗರಿಕ ಚನ್ನಬಸವರಾಜ್‌ ಅವರು ತಿಳಿಸಿದ್ದಾರೆ. 
 

click me!