ನಗರದಲ್ಲಿ ಮತ್ತೊಮ್ಮೆ ವಿಶೇಷ ಚೇತನರ ಆರೋಗ್ಯ ತಪಾಸಣೆ ಹಾಗೂ ಅರ್ಹರಿಗೆ ಕೃತಕ ಅಂಗಾಂಗ ವಿತರಣೆ ಶಿಬಿರವನ್ನು ಶೀಘ್ರದಲ್ಲೇ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ಚಿಕ್ಕಮಗಳೂರು (ಅ.28): ನಗರದಲ್ಲಿ ಮತ್ತೊಮ್ಮೆ ವಿಶೇಷ ಚೇತನರ ಆರೋಗ್ಯ ತಪಾಸಣೆ ಹಾಗೂ ಅರ್ಹರಿಗೆ ಕೃತಕ ಅಂಗಾಂಗ ವಿತರಣೆ ಶಿಬಿರವನ್ನು ಶೀಘ್ರದಲ್ಲೇ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಸಿ.ಟಿ.ರವಿ ಹೇಳಿದರು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿ.ಪಂ., ವಿಶೇಷ ಚೇತನರ ಅಭಿವೃದ್ಧಿ ಇಲಾಖೆ ಹಾಗೂ ಕೇಂದ್ರ ಸರ್ಕಾರಿ ಸ್ವಾಮ್ಯದ ಅಲಿಂಕೋ ಸಂಸ್ಥೆ ಸಹಯೋಗದಲ್ಲಿ 50 ಮಂದಿ ವಿಶೇಷಚೇತನರಿಗೆ 10 ಲಕ್ಷ ಮೌಲ್ಯದ ವಿವಿಧ ಕೃತಕ ಅಂಗಾಂಗ ಪರಿಕರಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಜಿಲ್ಲೆಯಲ್ಲಿ 15,584 ಮಂದಿ ವಿಶೇಷಚೇತನರಿದ್ದಾರೆ ಎಂದು ಗುರುತಿಸಲಾಗಿದೆ. ಅದರಲ್ಲಿ ಈಗಾಗಲೇ ಯುಡಿಐಡಿ ಕಾರ್ಡ್‌ಗಳನ್ನ 13,354 ಜನರಿಗೆ ವಿತರಿಸಲಾಗಿದೆ. ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಕಾರ್ಡು ವಿತರಿಸಿರುವ ಎರಡನೇ ಜಿಲ್ಲೆಯಾಗಿದೆ. ಇಲಾಖೆ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಅರ್ಹರಿಗೆ ಶೇ.100 ರಷ್ಟುಕಾರ್ಡು ವಿತರಣೆ ಮೂಲಕ ಮೊದಲ ಕ್ರಮಾಂಕಕ್ಕೆ ತಲುಪಬೇಕು ಎಂದರು. ನಗರದ ಎಐಟಿ ಕಾಲೇಜಿನಲ್ಲಿ ಇತ್ತೀಚಿಗೆ ಆಯೋಜಿಸಿದ್ದ ವಿಶೇಷ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಅಲಿಂಕೋ ಸಂಸ್ಥೆ ಮೂಲಕ ಕೃತಕ ಅಂಗಾಂಗಗಳನ್ನು ಕೊಡಲು ಯೋಜನೆ ರೂಪಿಸಿದ್ದೆವು.
Chikkamagaluru: ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಶಾಸಕ ಸಿಟಿ ರವಿ ಕುಣಿತ
ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ನಮ್ಮ ರಾಜ್ಯದವರೇ ಆದ ಕೇಂದ್ರ ಸಚಿವ ಚಿತ್ರದುರ್ಗದ ಸಂಸದರಾದ ಎ.ಆರ್.ನಾರಾಯಣಸ್ವಾಮಿ ಅವರಿಗೆ ನಾವು ವಿಶೇಷ ಧನ್ಯವಾದ ಸಲ್ಲಿಸುತ್ತೇನೆ ಎಂದರು. ಒಂದೇ ಒಂದು ಶಿಬಿರದಲ್ಲಿ ಇಷ್ಟುಜನರಿಗೆ ಕೃತಕ ಅಂಗಾಗ ವಿತರಿಸಿರುವುದು ದಾಖಲೆಯಾಗಿದೆ. ನಾವು ಇನ್ನೊಮ್ಮೆ ಈ ರೀತಿ ಶಿಬಿರವನ್ನು ಆಯೋಜನೆ ಮಾಡಿ ಉಳಿದ ವಿಶೇಷ ಚೇತನರಿಗೂ ಸಹ ಕೃತಕ ಅಂಗಾಂಗಗಳನ್ನು ವಿತರಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು. ಈ ಹಿಂದೆ ಶಾಸಕರ ಅನುದಾನವನ್ನ ಚರಾಸ್ತಿಗಳಿಗೆ ಕೊಡಲು ಅವಕಾಶ ಇರಲಿಲ್ಲ. ಸ್ಥಿರಾಸ್ತಿಗಳಿಗೆ ಮಾತ್ರ ಕೊಡಬಹುದಿತ್ತು.
ನಾವು ಎಂಎಲ್‌ಎ ಅನುದಾನದಲ್ಲಿ ಮೂರು ಚಕ್ರ ವಾಹನಗಳನ್ನು ಕೊಡಬಹುದು ಎಂದು ಕಾನೂನು ತಿದ್ದುಪಡಿ ಮಾಡಿಸಿ, ನನ್ನ ಅನುದಾನದಲ್ಲಿ ಪ್ರತಿವರ್ಷ ಅನುದಾನ ಮೀಸಲಿಟ್ಟು ಈವರೆಗೆ 106 ಜನರಿಗೆ ತ್ರಿಚಕ್ರ ವಾಹನ ಕೊಡಿಸಲಾಗಿದೆ ಎಂದರು. ನಗರಸಭೆಯಲ್ಲಿ ತಿದ್ದುಪಡಿ ಮಾಡಿಸಿ ನಗರಸಭೆಯಿಂದಲೂ ಕೊಡಿಸಲು ಕ್ರಮ ವಹಿಸಿದೆವು. ಅನಂತರ ಉಳಿದವರೂ ಆರಂಭಿಸಿದರು. ಇದರಿಂದ ವಿಶೇಷ ಚೇತನರಿಗೆ ನಾವೂ ಸಹ ಸಮಾಜದ ನಡುವೆ ಧೈರ್ಯದಿಂದ ಬದುಕಬಹುದು ಎನ್ನುವ ಆತ್ಮವಿಶ್ವಾಸ ಬಂದಿದೆ ಎಂದರು.
Chikkamagaluru: ದೀಪಾವಳಿ ಹಬ್ಬದಂದು ಗೋವುಗಳಿಗೆ ಸಿಂಗಾರ ಮಾಡಿ ವಿಶೇಷ ಪೂಜೆ
ಜಿ.ಪಂ. ಸಿಇಓ ಅಧಿಕಾರಿ ಜಿ.ಪ್ರಭು ಮಾತನಾಡಿ, ಈ ಹಿಂದೆ ಆಯೋಜಿಸಲಾಗಿದ್ದ ಆರೋಗ್ಯ ಮೇಳದಲ್ಲಿ ವಿಶೇಷಚೇತನರಿಗೆ ಉಚಿತವಾಗಿ ಕೃತಕ ಅಂಗಾಂಗಗಳನ್ನು ವಿತರಿಸುವ ನಿರ್ಧಾರ ಮಾಡಿದ್ದೆವು. ಅದರಂತೆ ಸುಮಾರು .5 ಕೋಟಿಗಳಷ್ಟುಮೌಲ್ಯದ ಪರಿಕರಗಳನ್ನು ಈವರೆಗೆ ವಿತರಿಸಲಾಗಿದೆ. ಇದು ಕಡೇ ಕಂತಿನ ವಿತರಣೆ ಕಾರ್ಯಕ್ರಮವಾಗಿದೆ. ಇಂದು ಸುಮಾರು 50 ಜನರಿಗೆ .10 ಲಕ್ಷ ಮೌಲ್ಯದ ಪರಿಕರಗಳನ್ನು ವಿತರಿಸಲಾಗುತ್ತಿದೆ. ಈವರೆಗೆ ಜಿಲ್ಲೆಯ ಎಲ್ಲ ತಾಲೂಕುಗಳ ವಿಶೇಷಚೇತನರಿಗೆ ಹಂತ ಹಂತವಾಗಿ ಪರಿಕರಗಳನ್ನು ಕೊಡುವ ಕೆಲಸ ಮಾಡಿದ್ದೆವೆ ಎಂದರು. ಕಾರ್ಯಕ್ರಮದಲ್ಲಿ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಅಧ್ಯಕ್ಷ ಕೆ.ಪಿ.ವೆಂಕಟೇಶ್, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಸಿಡಿಎ ಅಧ್ಯಕ್ಷ ಸಿ.ಆನಂದ್, ತಾ.ಪಂ. ಸಿಇಓ ತಾರಾನಾಥ್ ಇದ್ದರು.