ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ಗುಡ್ಡೇತೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗೂರಿನ ಕುಗ್ರಾಮವೊಂದರ 11 ವರ್ಷದ ವಿದ್ಯಾರ್ಥಿನಿಯೊಬ್ಬಳು ರಾಜ್ಯ ಮಟ್ಟದ ಚಾಂಪಿಯನ್ನಾಗಿ ಹೊರಹೊಮ್ಮಿದ್ದಾಳೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಅ.28): ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ಗುಡ್ಡೇತೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗೂರಿನ ಕುಗ್ರಾಮವೊಂದರ 11 ವರ್ಷದ ವಿದ್ಯಾರ್ಥಿನಿಯೊಬ್ಬಳು, ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಶಟಶಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿ ಜೂನಿಯರ್ ವಿಭಾಗದ ಸಿಂಗಲ್ಸ್ ಹಾಗೂ ಡಬಲ್ಸ್ ನಲ್ಲಿ ರಾಜ್ಯ ಮಟ್ಟದ ಚಾಂಪಿಯನ್ನಾಗಿ ಹೊರಹೊಮ್ಮಿದ್ದಾಳೆ. ಮೇಗೂರಿನ ನವೀನ್ ಹಾಗೂ ಅಕ್ಷತಾ ದಂಪತಿಗಳ ಪುತ್ರಿ ಎಂ.ಎನ್. ಉನ್ನತಿ ಅಪರೂಪದ ಸಾಧನೆ ಮಾಡಿದ ವಿದ್ಯಾರ್ಥಿನಿ. ಸರಿಯಾದ ಕನಿಷ್ಠ ಮೂಲ ಸೌಲಭ್ಯಗಳು ಹಾಗೂ ವ್ಯವಸ್ಥಿತ ಸಾರ್ವಜನಿಕ ಸಾರಿಗೆಯ ವ್ಯವಸ್ಥೆಯೂ ಇಲ್ಲದ ಮಲೆನಾಡಿನ ಕುಗ್ರಾಮ ಮೇಗೂರಿನ ಬಾಲಕಿಶೃಂಗೇರಿಯ ಜ್ಞಾನ ಭಾರತಿ ಶಿಕ್ಷಣ ಸಂಸ್ಥೆಯಲ್ಲಿ ಐದನೇ ತರಗತಿಯಲ್ಲಿ ಕಲಿಯುತ್ತಿದ್ದು, ಕಲಿಕೆಯೊಂದಿಗೆ ಷಟಲ್ ಬ್ಯಾಡ್ಮಿಂಟನಲ್ಲೂ ಕ್ರೀಡಾಭಿಮಾನಿಗಳು ಮೆಚ್ಚುವ ಉತ್ತಮ ಸಾಧನೆ ಮಾಡಿದ್ದಾಳೆ.ಉತ್ತಮ ಗುಣಮಟ್ಟದ ಸಿಂಥೆಟಿಕ್ ಕೋರ್ಟಗಳಲ್ಲಿ ಅಭ್ಯಾಸ ನಡೆಸಿ, ಹೆಸರಾಂತ ಶಟಲ್ ಬ್ಯಾಡ್ಮಿಂಟನ್ ಕ್ಲಬ್ಗಳ ನುರಿತ ಕೋಚ್ ಗಳಿಂದ ತರಬೇತಿ ಪಡೆದ ಸ್ಪರ್ಧಿಗಳನ್ನು ಪಂದ್ಯದಲ್ಲಿ ಮಣಿಸಿದ ಉನ್ನತಿ, ರಾಜ್ಯ ಮಟ್ಟದ ಚಾಂಪಿಯನ್ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾಳೆ.
ಗುಣಮಟ್ಟದ ಅಂಕಣ ನಿರ್ಮಾಣಕ್ಕೆ ಒತ್ತಾಯ: ಬೆಂಗಳೂರಿನ ಹೆಚ್ ಎಸ್ ಆರ್ ಕ್ಲಬ್ ನಲ್ಲಿ ಕರ್ನಾಟಕ ಶಟಲ್ ಬ್ಯಾಡ್ಮಿಂಟನ್ ಅಸೋಷಿಯೇಷನ್ ಅಕ್ಟೋಬರ್ 17 ರಿಂದ 22ರ ವರೆಗೆ ನಡೆಸಿದ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಹಂತ ಹಂತವಾಗಿ ಹತ್ತಕ್ಕೂ ಹೆಚ್ಚು ಪಂದ್ಯಗಳನ್ನು ಗೆದ್ದು, ಶನಿವಾರ ನಡೆದ 11 ವರ್ಷ ವಯಸ್ಸಿನ್ನೊಳಗಿನವರ ಜೂನಿಯರ್ ವಿಭಾಗದ ಫೈನಲ್ ಪಂದ್ಯದಲ್ಲಿ 14_21 ಅಂಕ ಗಳಿಸುವ ಮೂಲಕ ಚಾಂಪಿಯನ್ ಶಿಪ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.ಅಭ್ಯಾಸಕ್ಕೆ ಸರಿಯಾದ ಕೋರ್ಟ್ ಇಲ್ಲದ್ದರಿಂದ ಛತ್ರವೊಂದರ ಸಿಮೆಂಟ್ ನೆಲದ ಚಿಕ್ಕ ಕೋರ್ಟಿನಲ್ಲೇ ತರಬೇತುದಾರ ನವಜಿತ್ ಮಾರ್ಗದರ್ಶನದಲ್ಲಿ ನಿರಂತರ ಅಭ್ಯಾಸ ನಡೆಸಿದ ಬಾಲಕಿ, ತನ್ನ ಛಲ ಬಿಡದ ಶ್ರಮದಿಂದಲೇ ಸ್ಟೇಟ್ ಲೆವೆಲ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾಳೆ.
ಪೋಷಕರಿಗೆ ಮಗಳ ಸಾಧನೆ ಹೆಮ್ಮೆ ಎನಿಸುತ್ತದೆ, ಸ್ಥಳೀಯವಾಗಿ ಅಭ್ಯಾಸ ನಡೆಸಲು ಗುಣಮಟ್ಟದ ಅಂಕಣ ಇಲ್ಲದಿರುವುದರಿಂದ ಮಗಳ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಖಾಸಗಿ ಅಕಾಡಮಿಗಳ ಕೋರ್ಟಿನಲ್ಲಿ ಅಭ್ಯಾಸ ಮಾಡಲು ಘಂಟೆಗೆ 300 ರೂ ನೀಡಬೇಕಾಗಿದ್ದು, ಆರ್ಥಿಕವಾಗಿ ಸಬಲರಲ್ಲದ ನಮಗೆ ಅದು ಕಷ್ಠ ಸಾಧ್ಯ. ದಯಮಾಡಿ ಸರ್ಕಾರ ಶೃಂಗೇರಿಯಲ್ಲಿ ಸಿಂಥೆಟಿಕ್ ಅಂಕಣ ನಿರ್ಮಿಸಿಕೊಟ್ಟರೆ ನನ್ನ ಮಗಳಂತೆ ನೂರಾರು ಪ್ರತಿಭೆಗಳಿಗೆ ಅನುಕೂಲವಾಗಲಿದೆ ಎಂದು ಬಾಲಕಿ ತಂದೆ ನವೀನ್ ಮೇಗೂರು ಹೇಳುತ್ತಾರೆ. ಶಟಲ್ ಬ್ಯಾಡ್ಮಿಂಟನ್ನಲ್ಲಿ ಅಂತಾರಾಷ್ಟೀಯ ಪಂದ್ಯವಾಡಬೇಕೆಂಬ ಆಸೆ ಇದೆ. ಅಭ್ಯಾಸಕ್ಕೆ ಹಾಗೂ ತರಬೇತಿಗೆ ಪ್ರೋತ್ಸಾಹ ಸಿಕ್ಕರೆ ಹೆಚ್ಚಿನ ಸಾಧನೆ ಮಾಡುತ್ತೇನೆ ಎನ್ನುವುದು ಸಾಧಕಿ ಎಂ.ಎನ್.ಉನ್ನತಿ ಮಾತಾಗಿದೆ.
ಕ್ರೀಡೆಗಳನ್ನು ಯುದ್ಧದ ರೀತಿಯಲ್ಲಿ ಬಿಂಬಿಸಲಾಗುತ್ತದೆ: ರವಿಶಂಕರ್ ಗುರೂಜಿ ಬೇಸರ
ಒಟ್ಟಾರೆ ಸಾಮಾನ್ಯವಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಜಯಗಳಿಸಬೇಕಾದರೆ ದಿನಕ್ಕೆ ಕನಿಷ್ಠ ನಾಲ್ಕರಿಂದ ಆರು ಘಂಟೆಗಳ ನಿರಂತರ ಅಭ್ಯಾಸ ಅಗತ್ಯವಿರುತ್ತದೆ. ಈ ಅಭ್ಯಾಸವನ್ನು ಗುಣಮಟ್ಟದ ಸಿಂಥೆಟಿಕ್ ಅಂಕಣಗಳಲ್ಲಿ ಮಾಡಬೇಕಿದ್ದು, ಸಿಮೆಂಟ್ ಕೋರ್ಟಿನಲ್ಲಿ ಅಭ್ಯಾಸ ನಡೆಸಿದಾಗ ಕಾಲುಗಳ ಪಾದಗಳಲ್ಲಿ ನೋವು ಉಂಟಾಗುತ್ತದೆ ಮತ್ತು ಅಭ್ಯಾಸದ ವೇಳೆಯಲ್ಲಿ ಆಯತಪ್ಪಿ ಬಿದ್ದರೆ ಮೂಳೆ ಮುರಿತಕ್ಕೊಳಗಾಗುವ ಅಪಾಯವವಿದೆ ಎನ್ನುತ್ತಾರೆ ಅನುಭವಿ ಆಟಗಾರರು. ಈ ಕಾರಣದಿಂದಾಗಿಯೇ ಅನೇಕ ಗ್ರಾಮೀಣ ಆಟಗಾರರು ಸಮಸ್ಯೆ ಎದುರಿಸುತ್ತಿದ್ದು, ಸರ್ಕಾರ ತಾಲೂಕು ಕೇಂದ್ರಗಳಲ್ಲಿಯಾದರೂ ಗುಣಮಟ್ಟದ ಅಂಕಣ ನಿರ್ಮಾಣಕ್ಕೆ ಮುಂದಾಗಬೇಕಿದೆ ಎನ್ನುವುದು ಕ್ರೀಡಾಸಕ್ತರ ಆಗ್ರಹವಾಗಿದೆ.