'2023ಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿ'

By Kannadaprabha NewsFirst Published Aug 2, 2021, 1:23 PM IST
Highlights

* ಹಾವೇರಿ ಜಿಲ್ಲಾ ಜೆಡಿಎಸ್‌ ಉಸ್ತುವಾರಿ ಎನ್‌.ಎಚ್‌. ಕೋನರೆಡ್ಡಿ ಭವಿಷ್ಯ
* ದಕ್ಷಿಣ ಭಾರತದಲ್ಲಿ ಪ್ರಬಲವಾಗುತ್ತಿರುವ ಪ್ರಾದೇಶಿಕ ಪಕ್ಷಗಳು 
* ಜೆಡಿಎಸ್‌ನಲ್ಲಿ ಮೊದಲಿನಿಂದಲೂ ಅಲ್ಪಸಂಖ್ಯಾತರಿಗೆ ಆದ್ಯತೆ 
 

ಹಾನಗಲ್ಲ(ಆ.02): ಕರ್ನಾಟಕ ರಾಜ್ಯದಲ್ಲಿ 2023 ಚುನಾವಣೆ ಬಳಿಕ ಜೆಡಿಎಸ್‌ ಸರ್ಕಾರ ರಚನೆಗೊಳ್ಳಲಿದೆ. ಎಚ್‌.ಡಿ. ಕುಮಾರಸ್ವಾಮಿ ಮತ್ತೆ ಸಿಎಂ ಆಗಲಿದ್ದಾರೆ ಎಂದು ಹಾವೇರಿ ಜಿಲ್ಲಾ ಜೆಡಿಎಸ್‌ ಉಸ್ತುವಾರಿ ಎನ್‌.ಎಚ್‌. ಕೋನರೆಡ್ಡಿ ಭವಿಷ್ಯ ನುಡಿದಿದ್ದಾರೆ. 

ಶನಿವಾರ ಪಟ್ಟಣದಲ್ಲಿ ಜೆಡಿಎಸ್‌ ಕಚೇರಿ ಉದ್ಘಾಟಿಸಿದ ಬಳಿಕ ನೂರಾನಿ ಹಾಲ್‌ನಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಬಲವಾಗುತ್ತಿವೆ. ಕರ್ನಾಟಕದಲ್ಲಿಯೂ ಈ ಶಕೆ ಆರಂಭಗೊಳ್ಳಲಿದೆ. ರಾಷ್ಟ್ರೀಯ ಪಕ್ಷಗಳ ಜನವಿರೋಧಿ ನೀತಿಯಿಂದ ಮತದಾರರು ಬೇಸತ್ತಿದ್ದಾರೆ. ಇದು ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯ ತೋರುವ ಸಮಯ. ಪಕ್ಷ ಸಂಘಟನೆಯಲ್ಲಿ ವೈಫಲ್ಯಗಳನ್ನು ಸರಿಪಡಿಸಿಕೊಂಡು ಮುನ್ನಡೆಯಬೇಕು ಎಂದು ಎನ್‌.ಎಚ್‌. ಕೋನರೆಡ್ಡಿ ಕರೆ ನೀಡಿದ್ದಾರೆ. 

ಜೆಡಿಎಸ್‌ನಲ್ಲಿ ಮೊದಲಿನಿಂದಲೂ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಲಾಗುತ್ತಿದೆ. ಹಾನಗಲ್ಲ ವಿಧಾನಸಭಾ ಕ್ಷೇತ್ರಕ್ಕೆ ಅಲ್ಪಸಂಖ್ಯಾತ ಅಭ್ಯರ್ಥಿ ಆಯ್ಕೆ ಮಾಡಲಾಗಿದೆ. ಬೈ ಎಲೆಕ್ಷನ್‌ ಯಾವತ್ತೂ ಜೆಡಿಎಸ್‌ ಗಂಭೀರವಾಗಿ ಪರಿಗಣಿಸುತ್ತದೆ. ಪ್ರಾದೇಶಿಕ ಪಕ್ಷವನ್ನು ಹುಟ್ಟು ಹಾಕಿ ನಡೆಸಿಕೊಂಡು ಹೋಗುವುದು ಸುಲಭವಲ್ಲ. ಕರ್ನಾಟಕದ ಸುತ್ತಲಿನ ರಾಜ್ಯಗಳನ್ನು ನೋಡಿದಾಗ ಪ್ರಾದೇಶಿಕ ಪಕ್ಷಗಳ ಯುಗ ಆರಂಭಗೊಂಡಿದೆ. ಹಾನಗಲ್‌ ಪ್ರಚಾರಕ್ಕೆ ದೇವೇಗೌಡ, ಎಚ್‌ಡಿಕೆ ಸೇರಿದಂತೆ ಜೆಡಿಎಸ್‌ನ ಪ್ರಮುಖ ನಾಯಕರು ಆಗಮಿಸಲಿದ್ದಾರೆ ಎಂದು ಎನ್‌.ಎಚ್‌. ಕೋನರೆಡ್ಡಿ ತಿಳಿಸಿದರು.

ಹಾನಗಲ್ಲ ಉಪಚುನಾವಣೆ ಘೋಷಣೆಗೂ ಮುನ್ನವೇ ರಾಜಕೀಯ ಗಾಳಿ..!

ಜೆಡಿಎಸ್‌ ಅವಧಿಯಲ್ಲಿ ರಾಜ್ಯದ ದೆಹಲಿ ಪ್ರತಿನಿಧಿನಿಯಾಗಿದ್ದ ಬೆಂಗಳೂರಿನ ಸೈಯ್ಯದ್‌ ಮುಹೀದ್‌ ಅಲ್ತಾಪ್‌ ಮಾತನಾಡಿ, ಜೆಡಿಎಸ್‌ ಬಗ್ಗೆ ಲೇವಡಿ ಮಾಡುವ ಕಾಂಗ್ರೆಸ್‌ ಮತ್ತು ಬಿಜೆಪಿ ಕುಟುಂಬ ರಾಜಕಾರಣಕ್ಕೆ ಹೊರತಾಗಿಲ್ಲ ಎಂದು ಹರಿಹಾಯ್ದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಹಲಗೇರಿ ಮಾತನಾಡಿ, ಹಾನಗಲ್ಲನಲ್ಲಿ ಜೆಡಿಎಸ್‌ ಬಲವರ್ಧನೆಗೊಳ್ಳುತ್ತಿದೆ. ಎಚ್‌ಡಿಕೆ ಕಾರ್ಯಕ್ರಮಗಳ ಅರಿವು ಜನರಿಗೆ ಮನವರಿಕೆಯಾಗಬೇಕು ಎಂದರು.

ಹಾನಗಲ್ಲ ಉಪಚುನಾವಣೆ ಜೆಡಿಎಸ್‌ ಅಭ್ಯರ್ಥಿ ನಿಯಾಜ್‌ ಶೇಖ್‌ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಭಿಮಾನಿಗಳು ತಾಲೂಕಿನಲ್ಲಿ ಸಾಕಷ್ಟುಸಂಖ್ಯೆಯಲ್ಲಿದ್ದಾರೆ. ಈ ಅಂಶ ಪಕ್ಷ ಸಂಘಟನೆಗೆ ಅನುಕೂಲಕರ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಪಕ್ಷ ಬೇರೂರಿದೆ ಎಂದರು.

ತಾಲೂಕು ಘಟಕದ ಅಧ್ಯಕ್ಷ ಎಸ್‌.ಎಸ್‌. ಹಿರೇಮಠ, ಹಾನಗಲ್ಲ ಉಪಚುನಾವಣೆ ಮೂಲಕ ಜಿಲ್ಲೆಯಲ್ಲಿ ಜೆಡಿಎಸ್‌ ಶಕ್ತಿ ಪ್ರದರ್ಶನವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಖಂಡರಾದ ಸುರೇಶ ನಾಯ್ಕ, ಬಸವರಾಜ ಹಾದಿ, ರಾಮನಗೌಡ ಪಾಟೀಲ, ಖಾದರ್‌ ಮೊಹಿದ್ದೀನ್‌ ಶೇಖ, ಮಲ್ಲಪ್ಪ ಕೋಣನಕೇರಿ, ಕೇಷವ ಶೇಷಗಿರಿ ಮೊದಲಾದವರು ವೇದಿಕೆಯಲ್ಲಿದ್ದರು.
 

click me!