ಗಂಗಾವತಿ: ಅಂಜನಾದ್ರಿ ಸುತ್ತ ನಿಷೇಧಾಜ್ಞೆ ಬಿಸಿ..!

By Kannadaprabha NewsFirst Published Aug 2, 2021, 1:04 PM IST
Highlights

* ಹೆಚ್ಚುತ್ತಿರುವ ಪ್ರವಾಸಿಗರ ಸಂಖ್ಯೆಯ ನಿಯಂತ್ರಣಕ್ಕೆ ಕ್ರಮ
*  ನಿಷೇಧಾಜ್ಞೆ ಆದೇಶ ಹೊರಡಿಸಿದ ಎಸಿ ನಾರಾಯಣರೆಡ್ಡಿ
* ಮತ್ತೆ ದೇವಸ್ಥಾನಗಳ ಬಾಗಿಲುಗಳಿಗೆ ಬೀಗ
 

ಕೊಪ್ಪಳ(ಆ.02): ಮೂರನೇ ಅಲೆ ರಾಜ್ಯಾದ್ಯಂತ ಹೆಚ್ಚಾಗುತ್ತಿರುವ ಹಿನ್ನೆಲೆ ಕೋವಿಡ್‌ ಕಟ್ಟಿ ಹಾಕಲು ಜಿಲ್ಲೆಯಲ್ಲಿನ ಪ್ರಮುಖ ದೇವಸ್ಥಾನಗಳು ಹಾಗೂ ಪ್ರವಾಸಿ ತಾಣಗಳಲ್ಲಿ ಪ್ರವೇಶ ನಿಷೇಧ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸುತ್ತಿದೆ. ಈಗಾಗಲೇ ಹುಲಿಗೆಮ್ಮ ದೇವಸ್ಥಾನಕ್ಕೆ ಬೀಗ ಜಡಿದ ಬೆನ್ನಲ್ಲೇ ವಿಶ್ವಪ್ರಸಿದ್ಧ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ದೇವಸ್ಥಾನ ಸುತ್ತಲೂ ನಿಷೇಧಾಜ್ಞೆ ಜಾರಿ ಮಾಡಿ, ಉಪವಿಭಾಗಾಧಿಕಾರಿ ನಾರಾಯಣರಡ್ಡಿ ಅವರು ಆದೇಶ ಹೊರಡಿಸಿದ್ದಾರೆ.

ಅಂಜನಾದ್ರಿ ಬೆಟ್ಟದ 2 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಆ. 2ರಿಂದ 17ರ ವರೆಗೂ ನಿಷೇಧಾಜ್ಞೆ ಜಾರಿ ಮಾಡಿ, ಆದೇಶ ಮಾಡಲಾಗಿದ್ದು, 15 ದಿನಗಳ ಕಾಲ ನಿಷೇಧಾಜ್ಞೆ ಜಾರಿಯಲ್ಲಿ ಇರುತ್ತದೆ. ಅಲ್ಲಿಯವರೆಗೂ ದೇವಸ್ಥಾನ ವ್ಯಾಪ್ತಿಯಲ್ಲಿಯೂ ಭಕ್ತರು ಆಗಮಿಸುವಂತೆ ಇಲ್ಲ ಮತ್ತು ದೇವಸ್ಥಾನಕ್ಕೂ ಪ್ರವೇಶ ನಿಷೇಧ ಮಾಡಲಾಗಿದೆ. ಆದರೆ, ವಿಧಿವಿಧಾನಗಳಂತೆ ದೇವಸ್ಥಾನದಲ್ಲಿ ಪೂಜೆ, ಪುನಸ್ಕಾರಗಳು ನಡೆಯುತ್ತವೆಯಾದರೂ ಭಕ್ತರಿಗೆ ಮಾತ್ರ ಅವಕಾಶ ಇರುವುದಿಲ್ಲ.

ಕೊಪ್ಪಳ: ತಗ್ಗಿದ ಕೊರೋನಾ, ಅಂಜನಾದ್ರಿ ಬೆಟ್ಟಕ್ಕೆ ಭಕ್ತರ ಲಗ್ಗೆ..!

8-10 ಸಾವಿರ ಭಕ್ತರು

ಅಂಜನಾದ್ರಿ ಬೆಟ್ಟಕ್ಕೆ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಇನ್ನು ಶನಿವಾರ ಮತ್ತು ಭಾನುವಾರ ಈ ಸಂಖ್ಯೆ 8-10 ಸಾವಿರಕ್ಕೆ ಏರುತ್ತಿತ್ತು ಎನ್ನುವುದು ಜಿಲ್ಲಾಡಳಿತ ನೀಡುವ ಲೆಕ್ಕಾಚಾರ. ಇಷ್ಟೊಂದು ಭಕ್ತರು ಒಟ್ಟಿಗೆ ಸೇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮುನ್ನೆಚ್ಚರಿಕೆ ವಹಿಸುವುದು ಆಗುತ್ತಲೇ ಇರಲಿಲ್ಲ. ಎಷ್ಟೇ ಜಾಗೃತಿ ಮೂಡಿಸಿದರೂ ಭಕ್ತರು ಮಾತ್ರ ಕ್ಯಾರೆ ಎನ್ನದೇ ಜಮಾಯಿಸುತ್ತಿದ್ದರು. ಹೀಗಾಗಿ, ಈಗ ನಿಷೇಧಾಜ್ಞೆ ಆದೇಶ ಹೊರಡಿಸಲಾಗಿದೆ. ಆದರೆ, ಇಲ್ಲಿಗೆ ನಿತ್ಯವೂ ನಾಲ್ಕಾರು ಸಾವಿರ ಹಾಗೂ ಶನಿವಾರ ಮತ್ತು ಭಾನುವಾರ 10-20 ಸಾವಿರ ಭಕ್ತರು ಆಗಮಿಸುತ್ತಾರೆ. ಬೆಳಗ್ಗೆಯಿಂದ ರಾತ್ರಿ ವರೆಗೂ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ ಎಂದು ಹೇಳಲಾಗುತ್ತದೆ.

ನಾನಾ ರಾಜ್ಯದಿಂದ ಆಂಜನೇಯ ದೇವಸ್ಥಾನದ ಭಕ್ತರು ನಾನಾ ರಾಜ್ಯ, ದೇಶದಲ್ಲಿಯೂ ಇದ್ದಾರೆ. ಹೀಗಾಗಿ, ಇಲ್ಲಿಗೆ ಸ್ಥಳೀಯರಿಗಿಂತ ಬೇರೆಡೆಯಿಂದ ಬರುವ ಭಕ್ತರೇ ಅಧಿಕ. ಅದರಲ್ಲೂ ಉತ್ತರ ಭಾರತದಿಂದ ದೊಡ್ಡ ಸಂಖ್ಯೆಯಲ್ಲಿಯೇ ಇಲ್ಲಿಗೆ ಆಗಮಿಸುತ್ತಾರೆ. ಹೀಗಾಗಿಯೇ ಜಿಲ್ಲಾಡಳಿತ ತುರ್ತಾಗಿ ಈ ನಿರ್ಧಾರ ಕೈಗೊಂಡಿದೆ.

ಕೋವಿಡ್‌ ಮತ್ತೆ ಹೆಚ್ಚುವ ಸಾಧ್ಯತೆ ಇರುವುದರಿಂದ ಮತ್ತು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆಯನ್ನು ಹದಿನೈದು ದಿನಗಳ ಕಾಲ ಹೊರಡಿಸಲಾಗಿದೆ ಎಂದು ಕೊಪ್ಪಳ ಎಸಿ ನಾರಾಯಣರಡ್ಡಿ ತಿಳಿಸಿದ್ದಾರೆ. 
 

click me!