ನಿಮ್ಮ ಋುಣ ತೀರಿಸಲು ನನ್ನ ಸಿಎಂ ಮಾಡಿ : HD Kumaraswamy

By Kannadaprabha NewsFirst Published Dec 5, 2022, 5:30 AM IST
Highlights

ರಾಜ್ಯದಲ್ಲಿನ ಬಡವರು, ರೈತರು ಹಾಗೂ ಸಾರ್ವಜನಿಕರ ಸಮಸ್ಯೆ ನಿವಾರಿಸಲು ಜೆಡಿಎಸ್‌ಗೆ ಸ್ಪಷ್ಟಬಹುಮತ ನೀಡಿ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

 ಪಾವಗಡ (ಡಿ.05):  ರಾಜ್ಯದಲ್ಲಿನ ಬಡವರು, ರೈತರು ಹಾಗೂ ಸಾರ್ವಜನಿಕರ ಸಮಸ್ಯೆ ನಿವಾರಿಸಲು ಜೆಡಿಎಸ್‌ಗೆ ಸ್ಪಷ್ಟಬಹುಮತ ನೀಡಿ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಪಾವಗಡ ವಿಧಾನಸಭೆ ಕ್ಷೇತ್ರದ ದೊಮತಮರಿ, ವೆಂಕಟಾಪುರ, ನಾಗಮಡಿಕೆ, ವೈ.ಎನ್‌.ಹೊಸಕೋಟೆ ಹಾಗೂ ಪಾವಗಡ ಪಟ್ಟಣದ ಎಸ್‌ಎಸ್‌ಕೆ ವೃತ್ತದಲ್ಲಿ ಭಾನುವಾರ ತಾಲೂಕು ಜೆಡಿಎಸ್‌ ವತಿಯಿಂದ ಹಮ್ಮಿಕೊಂಡಿದ್ದ ಪಂಚರತ್ನ ರಥಯಾತ್ರೆ ವೇಳೆ ಮಾತನಾಡಿದರು.

ಜನ ಸಾಮಾನ್ಯರ ಸಮಸ್ಯೆ ನಿವಾರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ನಮ್ಮ ಕಾಲದಲ್ಲಿ ಜಾರಿಗೆ ತಂದಿದ್ದು, ಸರ್ಕಾರದ ನಿರ್ಲಕ್ಷ್ಯದ ಪರಿಣಾಮ ಯೋಜನೆಯ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ನನ್ನ ಮೇಲೆ ವಿಶ್ವಾಸವಿಟ್ಟು ರಾಜ್ಯದಲ್ಲಿ ಜೆಡಿಎಸ್‌ (JDS) ಅಧಿಕಾರಕ್ಕೆ ತಂದರೆ (Farmers) ಹಾಗೂ ಬಡವರ ಕಲ್ಯಾಣ ಕಾರ್ಯಕ್ರಮ ಅನುಷ್ಟಾನಕ್ಕೆ ತರಲು ಬದ್ಧನಾಗಿರುವೆ. ಕೇವಲ 40 ಸೀಟು ಪಡೆದು ಸಮ್ಮಿಶ್ರ ಸರ್ಕಾರದಲ್ಲಿ ಎರಡು ಬಾರಿ ಸಿಎಂ ಆಗಿದ್ದು, ಇದರಿಂದ ಜನಪರ ಸಮಸ್ಯೆ ನಿವಾರಣೆ ಸಾಧ್ಯವಾಗಿಲ್ಲ. ಅಧಿಕಾರದಲ್ಲಿರುವ ಕಾಲದಲ್ಲಿ ಸಾಲಮನ್ನಾ ಸೇರಿದಂತೆ ಅನೇಕ ರೀತಿಯ ಜನಪರ ಯೋಜನೆ ಜಾರಿಗೆ ತಂದಿದ್ದೇನೆ. ಇನ್ನೊಮ್ಮೆ ಈ ರಾಜ್ಯದ ಸಿಎಂ ಆಗಲು ಅವಕಾಶ ನೀಡಿದರೆ ನಿಮ್ಮ ಋುಣ ತೀರಿಸುವುದಾಗಿ ಹೇಳಿದರು.

ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ಜನಪರ ಸಮಸ್ಯೆ ನಿವಾರಣೆಗೆ ರಾಜ್ಯದಲ್ಲಿ ಕುಮಾರಸ್ವಾಮಿ ಸಿಎಂ ಆಗಬೇಕು. ಈ ನಿಟ್ಟಿನಲ್ಲಿ ಸಜ್ಜಾಗುವಂತೆ ಜನರಲ್ಲಿ ಮನವಿ ಮಾಡಿದರು.

ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆರ್‌.ಸಿ.ಅಂಜಿನಪ್ಪ ಮಾತನಾಡಿದರು. ರಾಜ್ಯ ಜೆಡಿಎಸ್‌ ಉಪಾಧ್ಯಕ್ಷ ತಿಮ್ಮಾರೆಡ್ಡಿ, ಹಿರಿಯ ಮುಖಂಡರಾದ ರಾಜಶೇಖರಪ್ಪ, ಜೆಡಿಎಸ್‌ ಕಾರ್ಯಾಧ್ಯಕ್ಷ ಎನ್‌.ಎ.ಈರಣ್ಣ, ಮುಖಂಡರಾದ ಕೆ.ಎನ್‌.ರಾಮಕೃಷ್ಣರೆಡ್ಡಿ, ಅಕ್ಕಲಪ್ಪನಾಯ್ಡ್‌, ತಾಲೂಕಿನ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ಮಂಜುನಾಥ್‌ ಚೌದರಿ, ಪುರಸಭೆ ಮಾಜಿ ಸದಸ್ಯರಾದ ಮನುಮಹೇಶ್‌ ಗುಟ್ಟಹಳ್ಳಿ ಮಣಿ, ಜಿ.ಎ.ವೆಂಕಟೇಶ್‌, ನಾಗೇಂದ್ರ, ಗೋಪಾಲ್‌, ಸಾಯಿಸುಮನ್‌, ಅಂಬಿಕಾ ರಮೇಶ್‌, ಮುಖಂಡ ಕಾವಲಗೆರೆ ರಾಮಾಂಜಿನಪ್ಪ, ಗೋಪಾಲ್‌, ಭರತ್‌ಕುಮಾರ್‌, ಐಟಿ ಘಟಕದ ಶಿವಕುಮಾರ್‌, ಹನುಮಂತ್‌, ಕೆ.ಟಿ.ಹಳ್ಳಿ ಸೋಡಾ ಮಂಜುನಾಥ್‌, ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರಿದ್ದರು.

ಹೊಸಬರಿಗೆ ಜೆಡಿಎಸ್‌ ಟಿಕೆಟ್‌ ನೀಡಲಿ: ಭಗವಂತಪ್ಪ

ಪಾವಗಡ ವಿಧಾನಸಭೆ ಚುನಾವಣೆಯಲ್ಲಿ ಅಭಿವೃದ್ಧಿ ಹಾಗೂ ಸಮಾಜಪರ ಕಾಳಜಿಯುಳ್ಳ ಹೊಸಬರಿಗೆ ಟಿಕೆಟ್‌ ನೀಡಿದರೆ, ಜೆಡಿಎಸ್‌ನಲ್ಲಿ ಉಳಿಯುವುದಾಗಿ ಹಿರಿಯ ಮುಖಂಡ ಮಾರಮ್ಮನಹಳ್ಳಿ ಭಗವಂತಪ್ಪ ತಮ್ಮ ನಿಲುವು ಸ್ಪಷ್ಟಪಡಿಸಿ, ಹಲವು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಪಟ್ಟಣದ ಎಂಎಆರ್‌ ಲೇಔಟ್‌ನ ತಮ್ಮ ನಿವಾಸದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಕೆ.ಎಂ.ತಿಮ್ಮರಾಯಪ್ಪ ತಮ್ಮ ಅಧಿಕಾರ ಅವಧಿಯಲ್ಲಿ ನನ್ನ ಹಾಗೂ ಬೆಂಬಲಿಗ ಕಾರ್ಯಕರ್ತರನ್ನು ಕಡೆಗಣಿಸಿದ್ದು ಅತ್ಯಂತ ನೋವು ತಂದಿದೆ. ಅವರಿಂದ ಯಾವುದೇ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ. ಬರುವ ಇಲ್ಲಿನ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪರಿಗೆ ಮತ್ತೆ ಟಿಕೆಟ್‌ ನೀಡಿದರೆ ಜೆಡಿಸ್‌ ಪಕ್ಷ ಬಿಡಲಿದ್ದು ವಿದ್ಯಾರ್ಥಿ ದಿಸೆ ಸೇರಿ, ಕಳೆದ ಸುಮಾರು 30 ವರ್ಷಗಳಿಂದ ಜೆಡಿಎಸ್‌ ಪರಿವಾರದಲ್ಲಿ ಕೆಲಸ ಮಾಡಿದ್ದೇನೆ. ಸ್ಥಳೀಯ ಮುಖಂಡ ಹಾಗೂ ಕಾರ್ಯಕರ್ತರ ಜತೆಯಲ್ಲಿ ತಾಲೂಕಿನಲ್ಲಿ ಜೆಡಿಎಸ್‌ ಪ್ರಬಲ ಸಂಘಟನೆಗೆ ಹೆಚ್ಚು ಶ್ರಮವಹಿಸಿದ್ದು ಪಕ್ಷದಲ್ಲಿ ನಿಷ್ಟಾವಂತರಾಗಿ ಕೆಲಸ ಮಾಡಿದ್ದೇನೆ. ಕಳೆದ ಎರಡು ಬಾರಿ ಜೆಡಿಎಸ್‌ನಿಂದ ತಿಮ್ಮರಾಯಪ್ಪನಿಗೆ ಟಿಕೆಟ್‌ ಕೊಟ್ಟಸಂದರ್ಭದಲ್ಲಿ ಹಠಕ್ಕೆ ಬಿದ್ದು ಲಕ್ಷಾಂತರ ರು ಹಣ ಖರ್ಚು ಮಾಡಿ ಗೆಲುವಿಗೆ ಪಕ್ಷದ ಎಲ್ಲರು ಶ್ರಮಿಸಿದ್ದೇವೆ. ಶಾಸಕರಾದ ಬಳಿಕ ನಮ್ಮ ಸಮಸ್ಯೆ ಹೇಳಿದರೆ, ಕ್ಯಾರೆ ಮಾಡದೇ ಕಡೆಗಣಿಸಿದ್ದು ಎಂದೂ ಮರೆಯಲು ಸಾಧ್ಯವಿಲ್ಲ. ಇದಕ್ಕಿಂತ ಅವಮಾನ ಬೇಕೇ, ನಮ್ಮ ಕಾರ್ಯಕರ್ತರು ವಂಚಿತರಾಗಿದ್ದಾರೆ. ಅಧಿಕಾರ ಅವಧಿ ಸಮಾರಂಭ ವೇಳೆ ಒಮ್ಮೆಯಾದರೂ ಗುರ್ತಿಸಿ ವೇದಿಕೆಗೆ ನನ್ನ ಕರೆದಿಲ್ಲ. ನಮ್ಮ ತಂದೆ ಸಮಾನರಾದ ಎಚ್‌.ಡಿ.ದೇವೇಗೌಡ ಹಾಗೂ ನಮ್ಮ ನಾಯಕ ಕುಮಾರಸ್ವಾಮಿ ಹತ್ತಿರ ಸಹ ಭೇಟಿ ಮಾಡಿಸಿಲ್ಲ. ರಾಜ್ಯ ಜೆಡಿಎಸ್‌ ಕಚೇರಿ ಬಳಿಯಾಗಲಿ ಕರೆದಿಲ್ಲ. ಇವರಿಂದ ತಾಲೂಕಿನ ಅಭಿವೃದ್ಧಿ ಹಾಗೂ ಬದ್ದತೆ ನಿರೀಕ್ಷೆ ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು. ಗೆಲ್ಲುವ ಮೊದಲು ಒಂದು, ಗೆದ್ದ ಬಳಿಕ ಇನ್ನೊಂದು ರೀತಿ ವರ್ತಿಸುತ್ತಿದ್ದು ಇವರಿಗೆ, ಚುನಾವಣೆಯಲ್ಲಿ ವರಿಷ್ಠರು ಟಿಕೆಟ್‌ ಕೊಟ್ಟರೆ ನಾನು ಜೆಡಿಎಸ್‌ ಬಿಡುವ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದರು.

ಮುಖಂಡ ಎಸ್‌.ಹನುಮಂತರಾಯಪ್ಪ, ರಾಜ್ಯ ಜೆಡಿಎಸ್‌ ಘಟಕದ ಎನ್‌.ರಾಮಾಂಜಿನಪ್ಪ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

click me!