‌ ಚುನಾವಣೆ ಪ್ರತಿಷ್ಠೆ : ಮತ್ತೊಮ್ಮೆ ಮೈತ್ರಿಯತ್ತ ಮುಖ ಮಾಡುತ್ತಿದ್ದಾರೆ ಎಚ್‌ಡಿಕೆ

By Kannadaprabha NewsFirst Published Mar 12, 2021, 12:34 PM IST
Highlights

ದೇವೇಗೌಡರು ಬಿಜೆಪಿ ಜೊತೆಗೆ ಮಾಡಿಕೊಂಡ ಸಿಂಡಿಕೇಟ್ ಸೋಲಿಸಲು ಕಾಂಗ್ರೆಸ್ ಜೊತೆ ಸೇರಿ ಚುನಾವಣೆ ಎದುರಿಸಲು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಜ್ಜಾಗಿದ್ದಾರೆ. 

ಮೈಸೂರು(ಮಾ.12):  ಮಾ. 16 ರಂದು ನಡೆಯಲಿರುವ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಮೈಮುಲ್‌) ಚುನಾವಣೆಯನ್ನು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ಕಾಂಗ್ರೆಸ್‌ ಹಾಗೂ ತಮ್ಮ ಪಕ್ಷದವರ ಸಿಂಡಿಕೇಟ್‌ ಮಾಡಿಕೊಂಡು ತಮ್ಮದೇ ಪಕ್ಷದ ಶಾಸಕ ಜಿ.ಟಿ. ದೇವೇಗೌಡರು ಬಿಜೆಪಿಯವರೊಂದಿಗೆ ಮಾಡಿಕೊಂಡಿರುವ ಸಿಂಡಿಕೇಟ್‌ ಅನ್ನು ಸೋಲಿಸಲು ಹೋರಾಟ ನಡೆಸುತ್ತಿದ್ದಾರೆ.

ಈ ಸಂಬಂಧ ಬುಧವಾರ ಸಂಜೆಯೇ ಮೈಸೂರಿಗೆ ಆಗಮಿಸಿ, ಬೀಡುಬಿಟ್ಟಿದ್ದ ಅವರು  ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ಚಾಮುಂಡಿ ಬೆಟ್ಟ ಹಾಗೂ ನಂಜನಗೂಡು ದೇವಾಲಯಗಳ ದರ್ಶನಕ್ಕೆ ಬಂದಿದ್ದೆ. ಆದರೆ ನಮ್ಮ ಪಕ್ಷದ ಕಾರ್ಯಕರ್ತರು ಮೈಮುಲ್‌ ಚುನಾವಣೆಯನ್ನು ನನ್ನ ಗಮನಕ್ಕೆ ತಂದಿದ್ದಾರೆ. ಪಕ್ಷದಲ್ಲಿನ ಕೆಲವರು ಬಿಜೆಪಿ ಜೊತೆ ಸೇರಿ ತಮ್ಮ ದೇ ರೀತಿ ಚುನಾವಣೆ ಮಾಡಲು ಹೊರಟಿದ್ದಾರೆ. ಹೀಗಾಗಿ ನಮ್ಮ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ನಾನು ಕೂಡ ಶನಿವಾರ ಪ್ರವಾಸ ಮಾಡಿ, ನಮ್ಮ ಸಿಂಡಿಕೇಟ್‌ನ ಸದಸ್ಯರನ್ನು ಗೆಲ್ಲಿಸುವಂತೆ ಮನವಿ ಮಾಡುತ್ತಿದ್ದೇನೆ ಎಂದರು.

ದೇವೇಗೌಡ ವಿರುದ್ಧ ನಿಂತ ರೇವಣ್ಣ, ಎಚ್‌ಡಿಕೆ : ಸಹೋದರರಿಂದ ಹೊಸ ತಂತ್ರಗಾರಿಕೆ

ಈ ಚುನಾವಣೆ ಬಗ್ಗೆ ಸಾ.ರಾ.ಮಹೇಶ್‌ ಆಗಲಿ ನಮ್ಮ ಯಾವುದೇ ಮುಖಂಡರು ನೇತೃತ್ವ ವಹಿಸಿಕೊಂಡಿಲ್ಲ. ಸಹಕಾರಿ ಚುನಾವಣೆ ಬೇರೆ ರೀತಿ ಇರುತ್ತೆ. ಪಕ್ಷಗಳ ಹಿನ್ನೆಲೆ ಅಪ್ರಸ್ತುತ. ಪಕ್ಷದಲ್ಲಿನ ಕೆಲವರು ಅವರದ್ದೆ ರೀತಿಯಲ್ಲಿ ಚುನಾವಣೆ ಮಾಡ್ತಾರೆ. ಆದ್ರೆ ನಾನು ಎಂದೂ ಸಹ ಸಹಕಾರಿ ಕ್ಷೇತ್ರದ ಚುನಾವಣೆ ಭಾಗಿಯಾಗಿಲ್ಲ. ನನ್ನ ಸಹೋದರ ರೇವಣ್ಣ ಭಾಗಿ ಆಗ್ತಿದ್ದಾರೆ. ಆದರೆ ಇತ್ತಿಚಿಗೆ ಸಹಕಾರಿ ಕ್ಷೇತ್ರದ ತೀರ್ಮಾನಗಳ ಬಗ್ಗೆ ಬೇಸರ ಇದೆ. ನ್ಯಾಯಯುತವಾದ ತೀರ್ಮಾನಗಳನ್ನ ಅನ್ಯಾಯಯುತವಾದ ತೀರ್ಮಾನ ಮಾಡ್ತಾರೆ. ಸಹಕಾರಿಗಳಿಗೆ ರೂಲ್‌ ಬುಕ್‌ ಇಲ್ಲ. ಹಾಗಾಗಿ ಇಲ್ಲಿನ ಪ್ರಕ್ರಿಯೆಗಳು ನನ್ನ ಅನುಭವಕ್ಕೆ ಬಂದಿವೆ. ಇಲ್ಲಿನ ನಮ್ಮ ಹಿಂದಿನ ಕೆಲ ನಾಯಕರು ಅವರ ವೈಯುಕ್ತಿಕ ನೆಲೆಗಟ್ಟಿನಲ್ಲಿ ಚುನಾವಣೆ ಮಾಡ್ತಿದ್ದಾರೆ ಎಂದರು.

ಇಲ್ಲಿಯೇ ವಿಶೇಷವಾದ ಚುನಾವಣೆ ಮಾಡ್ತಿದ್ದಾರೆ. ಹುಣಸೂರು ಮೈಸೂರು ಡಿವಿಷನ್ನಲ್ಲಿ ಚುನಾವಣೆ ಮಾಡ್ತಿದ್ದಾರೆ. ಇಂತ ಚುನಾವಣೆ ಇಲ್ಲಿ ಮಾತ್ರ ನಡೆಯುತ್ತಿದೆ. ರಾಜ್ಯದ ಎಲ್ಲ ಕಡೆ ಒಂದು ವಿಧಾನಸಭಾ ಕ್ಷೇತ್ರದಿಂದ ಒಬ್ಬರಿಗೆ ಅವಕಾಶ ಇರುತ್ತೆ. ಆದ್ರೆ ಇಲ್ಲಿ ಬೇರೆಯೆ ರೀತಿ ಚುನಾವಣೆ ಮಾಡ್ತಿದ್ದಾರೆ. ಇದು ನನಗೆ ಯಕ್ಷ ಪ್ರಶ್ನೆಯಾಗಿ ಕಾಡ್ತಿದೆ ಎಂದು ಅವರು ಹೇಳಿದರು.

ಇಲ್ಲಿನ ಹಿಂದಿನ ಆಡಳಿತ ಮಂಡಳಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಒಂದೊಂದು ಉದ್ಯೋಗಕ್ಕೆ 20 ರಿಂದ 45 ಲಕ್ಷ ಹಣ ಪಡೆದಿದ್ದಾರೆ. ಬರೋಬ್ಬರಿ 50 ಕೋಟಿಗು ಹೆಚ್ಚು ಹಣ ಖರ್ಚು ಮಾಡ್ತಿದ್ದಾರೆ. ಅದಕ್ಕೆ ದುಡ್ಡು ಕೊಟ್ಟವರು ಕೆಲಸಕ್ಕಾಗಿ ಕಾಯುತ್ತಿರುವವರ ಪರಿಸ್ಥಿತಿ ಏನಾಗಿದೇಯೋ. ಈ ಮೈಮುಲ್‌ ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಇಂತಹ ಅನುಭವ ನನಗೆ ಆಗಿರಲಿಲ್ಲ.

ರಾಮನಗರ ಮೈಸೂರಿನಲ್ಲಿ ಇತ್ತಿಚಿಗೆ ಸಹಕಾರಿ ಕ್ಷೇತ್ರದ ಚುನಾವಣೆಗಳು ನನಗೆ ಅನುಭವ ನೀಡಿವೆ. ಹಾಗಾಗಿ ಚುನಾವಣೆಯಲ್ಲಿ ನಮ್ಮ ಪಕ್ಷದ ಸಿಂಡಿಕೇಟ್‌ ಮಾಡಿಕೊಳ್ಳಬೇಕಿದೆ. ನಮ್ಮ ಹಳೆ ನಾಯಕರನ್ನ ನಂಬಿಕೊಳ್ಳದೆ ಕಾರ್ಯಕರ್ತರ ಮೂಲಕ ಚುನಾವಣೆ ನಡೆಸುತ್ತೇವೆ. ಈ ಮೈಮುಲ್‌ ಚುನಾವಣೆಯಲ್ಲಿ ಜೆಡಿಎಸ್‌ ಸಿಂಡಿಕೇಟ್‌ ಮಾಡಿಕೊಂಡು ಸ್ಪರ್ಧೆಗೆ ಹೋಗುತ್ತಿದ್ದೇವೆ ಎಂದರು.

ಹರದನಹಳ್ಳಿ ಆಂಜನೇಯ ಸೇವಾ ಸೊಸೈಟಿಯಿಂದ ನಮ್ಮ ಕುಟುಂಬದ ರಾಜಕಾರಣ ಆರಂಭ ಆಯ್ತು. ಅಲ್ಲಿಂದ ಕೆಂಪುಕೋಟೆವರೆಗು ನಮ್ಮ ಕುಟುಂಬ ರಾಜಕಾರಣ ಮಾಡಿದ್ದೇವೆ. ಈಗಲೂ ಸಹ ದೊಡ್ಡ ಚುನಾವಣೆ ಇರಲಿ, ಸಣ್ಣ ಚುನಾವಣೆ ಇರಲಿ ನಮ್ಮ ಜವಬ್ದಾರಿ ನಿರ್ವಹಿಸುತ್ತೇವೆ. ಸೋಲು ಗೆಲುವು ಬೇರೆ ವಿಚಾರ. ಕಾರ್ಯಕರ್ತರಿಗೆ ಉತ್ಸಹ ತುಂಬಲು ನಾವು ಪ್ರತಿ ಚುನಾವಣೆಯಲ್ಲಿ ಭಾಗಿಯಾಗಿದ್ದೇನೆ. ಇದು ನಮ್ಮ ಕುಟುಂಬದ ಗುಣ. ಅದೆ ಕಾರಣದಿಂದ ಮೈಮುಲ್‌ ಚುನಾವಣೆಯಲ್ಲಿ ಭಾಗಿಯಾಗಿದ್ದೇವೆ.

ಇಲ್ಲಿ ಯಾರ ಪ್ರತಿಷ್ಠೆಯ ವಿರುದ್ದವು ನಾವು ಚುನಾವಣೆ ನಡೆಸುತ್ತಿಲ್ಲ. ಕಾರ್ಯಕರ್ತರಿಗೆ ಉತ್ಸಹ ತುಂಬು ಶಕ್ತಿ ಎಷ್ಟಿದೆ ಅಂತ ತೋರಿಸಲು ಈ ಚುನಾವಣೆಯಲ್ಲಿ ಭಾಗಿಯಾಗುತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.

ಮೈಮುಲ್‌ ಚುನಾವಣೆಯಲ್ಲಿ ನಾನು ನೇರವಾಗಿ ಭಾಗಿಯಾಗುತ್ತೇನೆ. ಮತ ಕೇಳಲು ನಾನು ಪಿರಿಯಾಪಟ್ಟಣ, ಎಚ….ಡಿ.ಕೋಟೆ, ಹುಣಸೂರಿಗೆ ಶನಿವಾರ ಭೇಟಿ ನೀಡುತ್ತೇನೆ. ಇಲ್ಲಿನ ವ್ಯವಸ್ಥೆ ಸರಿಪಡಿಸಲು ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಭಾಗಿಯಾಗುತ್ತಿದ್ದೇನೆ ಎಂದರು.

ಮೈಮುಲ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆ ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡಿದೆ. ನಮ್ಮ ಸಿಂಡಿಕೇಟ್ನಲ್ಲಿ ಕಾಂಗ್ರೆಸ್‌ ಸದಸ್ಯರು ಸಹ ಇದ್ದಾರೆ. ಇದಕ್ಕೆ ಸಿದ್ದರಾಮಯ್ಯನವರ ಸಮ್ಮತಿ ಇದೇಯೋ ಇಲ್ಲವೋ ಗೊತ್ತಿಲ್ಲ. ಬಹುಶ ಅವರಿಗೆ ಸಹಕಾರಿ ಕ್ಷೇತ್ರದ ಚುನಾವಣೆ ಬಗ್ಗೆ ನಿರಾಸಕ್ತಿ ಇರಬಹುದು. ಅವರೇನು ಈ ಚುನಾವಣೆಯಲ್ಲಿ ಇನ್ವಾಲ್‌ ಆಗಿಲ್ಲ. ಆದ್ರೆ ನಮ್ಮ ಸಿಂಡಿಕೇಟ್ನಲ್ಲಿ ಕಾಂಗ್ರೆಸ್‌ ಸದಸ್ಯರು ಇದ್ದಾರೆ ಎಂದರು.

ಶಾಸಕರಾದ ಸಾ.ರಾ. ಮಹೇಶ್‌, ಎಂ. ಅಶ್ವಿನ್‌ಕುಮಾರ್‌, ಭೋಜೇಗೌಡ, ರಮೇಶ್‌ಗೌಡ ಮೊದಲಾದವರು ಇದ್ದರು.

click me!