ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕು: ಎಚ್‌.ಡಿ.ದೇವೇಗೌಡ

By Govindaraj SFirst Published Jun 19, 2022, 8:22 AM IST
Highlights

ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ನಮಗೆ ವಿಶ್ವದಲ್ಲೇ ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ಆದರೆ ಇಂದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ. 

ಬೆಂಗಳೂರು (ಜೂ.19): ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ನಮಗೆ ವಿಶ್ವದಲ್ಲೇ ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ಆದರೆ ಇಂದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ. ಪಠ್ಯ ಪುಸ್ತಕ ಪರಿಷ್ಕರಣೆ ಸಂದರ್ಭದಲ್ಲಿ ಅವಶ್ಯಕ ವಿಷಯಗಳನ್ನು ತೆಗೆದುಹಾಕಿ ಅನಗತ್ಯ ವಿಷಯ ಸೇರ್ಪಡೆ ಮಾಡಲಾಗಿದೆ. ಇದನ್ನು ವಿರೋಧಿಸಲು ನಡೆಯುತ್ತಿರುವ ಈ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಭರವಸೆ ನೀಡಿದರು.

ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಶನಿವಾರ ಏರ್ಪಡಿಸಿದ್ದ ಬೃಹತ್‌ ಪ್ರತಿಭಟನಾ ಸಭೆಗೆ ನಗಾರಿ ಭಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆದುಕೊಂಡರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಆದರೆ ಆಶಯಗಳಿಗೆ ಧಕ್ಕೆ ಉಂಟಾದರೆ ಅದನ್ನು ವಿರೋಧಿಸ ಬೇಕಾಗುತ್ತದೆ. ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿರುವುದನ್ನು ನೋಡಿದರೆ ಮನಸ್ಸಿಗೆ ನೋವಾಗುತ್ತದೆ. ಇದರಲ್ಲಿ ರಾಜಕಾರಣ ಮಾಡುವುದಿಲ್ಲ. ನಿಮ್ಮ ಹೋರಾಟದಲ್ಲಿ ನಾನೂ ಜೊತೆಯಾಗಿರುತ್ತೇನೆ. ಹೋರಾಟಕ್ಕೆ ಸದಾ ನನ್ನ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದರು.

Latest Videos

ರಾಷ್ಟ್ರಪತಿ ಚುನಾವಣೆಗೆ ದೇವೇಗೌಡ್ರು ಸ್ಪರ್ಧಿಸುತ್ತಾರಾ? ಎಲ್ಲಾ ಗೊಂದಲಗಳಿಗೆ HDK ತೆರೆ

ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಪುಸ್ತಕ ಹರಿದು ಹಾಕಿದ್ದಾರೆ. ಪುಸ್ತಕ ಪರಿಷ್ಕರಣೆ ಮಾಡಿದವರ ಮೇಲೆ ಆವೇಶ ಉಂಟಾಗಿ ಹೀಗೆ ಮಾಡಿದ್ದಾರೆ. ಆದರೆ ನಮಗೆ ಗೋಕಾಕ್‌ ಚಳವಳಿ ಮಾದರಿ ಆಗಬೇಕು. ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕಾಣಿಸಬೇಕು ಎಂದು ಕರೆ ನೀಡಿದರು.

ವರದಿಗಾರನಿಗೆ ಅಟ್ಟಾಡಿಸಿ ಹೊಡೆದ ರಣಧೀರ ಪಡೆ: ಸಭೆಯ ವರದಿಗೆ ಆಗಮಿಸಿದ್ದ ವಾಹಿನಿಯೊಂದರ ಪ್ರತಿನಿಧಿಯೊಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸಿ, ಬಟ್ಟೆಹರಿದು ಹಾಕಿದ ಘಟನೆ ನಡೆದಿದೆ. ರಣಧೀರ ಪಡೆಗೆ ಸೇರಿದ ಕಾರ್ಯಕರ್ತರು, ಪ್ರತಿನಿಧಿಯನ್ನು ನೋಡಿದಾಕ್ಷಣ, ‘ನೀವು ಆರ್‌ಎಸ್‌ಎಸ್‌ ಚಾನೆಲ್‌ನವರು, ನೀನ್ಯಾಕೆ ಇಲ್ಲಿ ಬಂದಿದ್ದೀರಾ’ ಎಂದು ಆಕ್ರೋಶ ವ್ಯಕ್ತಪಡಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ತೇಜ ತಿಮ್ಮಪ್ಪ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಫ್ರೀಡಂ ಪಾರ್ಕ್ ತುಂಬೆಲ್ಲಾ ಓಡಾಡಿಸಿಕೊಂಡು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪರಿಷ್ಕೃತ ಪಠ್ಯ ಪುಸ್ತಕ ವಿತರಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಬೇಕು. ಇಲ್ಲದಿದ್ದರೆ ಸ್ವಾಮೀಜಿಗಳು, ಸಾಹಿತಿಗಳು, ರಾಜಕೀಯ ಮುಖಂಡರು ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ಕುಳಿತುಕೊಳ್ಳುತ್ತೇವೆ. ಪಠ್ಯ ಪುಸ್ತಕಕ್ಕೆ ಜನಿವಾರ ಹಾಕುವ ಕೆಲಸ ಮಾಡಬೇಡಿ.
-ಜ್ಞಾನಪ್ರಕಾಶ ಸ್ವಾಮೀಜಿ, ಮೈಸೂರು

ರಾಜ್ಯಸಭಾ ಚುನಾವಣೆ, ಪಟ್ಟು ಸಡಿಲಿಸದ ಸಿದ್ದರಾಮಮಯ್ಯ, ಮತದಾನ ಅನಿವಾರ್ಯ, ಜಿದ್ದಾಜಿದ್ದಿ

ಇದು ಸಾಂಕೇತಿಕ ಪ್ರತಿಭಟನೆಯ ಎಚ್ಚರಿಕೆಯ ಸಭೆ. ಮುಂದಿನ ದಿನಗಳಲ್ಲಿ ತಪ್ಪು ಸರಿ ಪಡಿಸದಿದ್ದರೆ ಸಮಿತಿ ಕರೆ ನೀಡುವ ಹೋರಾಟಕ್ಕೆ ಸ್ವಾಮೀಜಿಗಳು, ಸಾಹಿತಿಗಳು, ಚಿಂತಕರು ಬೀದಿಗಿಳಿದು ಹೋರಾಟ ನಡೆಸಿ ಬೆಂಬಲ ಸೂಚಿಸಲಿದ್ದಾರೆ.
-ನಂಜಾವಧೂತ ಸ್ವಾಮೀಜಿ

click me!