ಬನ್ನೇರುಘಟ್ಟ : 10 ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಬಂಧ

By Kannadaprabha NewsFirst Published Jan 17, 2020, 8:00 AM IST
Highlights

ಬನ್ನೇರುಘಟ್ಟನ್ಯಾಷನಲ್‌ ಪಾರ್ಕ್ ಸುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ. ಕರ್ನಾಟಕ ಹೈ ಕೋರ್ಟ್ ಈ ಆದೇಶ ನೀಡಿದೆ. 

ಬೆಂಗಳೂರು [ಜ.17]:  ನಗರದ ಬನ್ನೇರುಘಟ್ಟನ್ಯಾಷನಲ್‌ ಪಾರ್ಕ್ ಸುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಕೈಗೊಳ್ಳಬಾರದು ಎಂದು ಹೈಕೋರ್ಟ್‌ ಮಧ್ಯಂತರ ಆದೇಶ ಹೊರಡಿಸಿದೆ.

ಬನ್ನೇರುಘಟ್ಟಪ್ರಕೃತಿ ಸಂರಕ್ಷಣಾ ಟ್ರಸ್ಟ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ಆದರೆ, ಈ ಮಧ್ಯಂತರ ಆದೇಶ ಈಗಾಗಲೇ ಕೈಗೊಂಡಿರುವ ಅಭಿವೃದ್ಧಿ ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಅನ್ವಯಿಸುವುದಿಲ್ಲ ಎಂದು ನ್ಯಾಯಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.

ಬನ್ನೇರು ಘಟ್ಟ ಪ್ರವೇಶ ಶುಲ್ಕ ಹೆಚ್ಚಳ...

ಬನ್ನೇರುಘಟ್ಟನ್ಯಾಷನಲ್‌ ಪಾರ್ಕ್ನ 269 ಚದರ ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂಬುದಾಗಿ ಘೋಷಿಸಿ 2016ರ ಜೂನ್‌ 15ರಂದು ಕರಡು ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಅದು 2018ಕ್ಕೇ ಕೊನೆಗೊಂಡಿತ್ತು. ಬಳಿಕ ನಂತರ ಪಾರ್ಕ್ ಸುತ್ತಲಿನ ಪರಿಸರ ಸೂಕ್ಷ್ಮ ವಲಯವನ್ನು ಪ್ರದೇಶವನ್ನು 100 ಚದರ ಕಿ.ಮೀ ಕಡಿತಗೊಳಿಸಿ ಮತ್ತೊಂದು ಕರಡು ಅಧಿಸೂಚನೆ ಹೊರಡಿಸಲಾಗಿದೆ ಎಂದು ಅರ್ಜಿ ಸಲ್ಲಿಸಲಾಗಿದೆ.

ಹೊಸದಾಗಿ ಹೊರಡಿಸಿದ ಕರಡು ಅಧಿಸೂಚನೆಯಿಂದ ಬನ್ನೇರುಘಟ್ಟಪಾರ್ಕ್ ವ್ಯಾಪ್ತಿಯಲ್ಲಿರುವ ಅನೇಕ ಗ್ರಾಮಗಳು ಪರಿಸರ ಸೂಕ್ಷ್ಮ ವಲಯದಿಂದ ಹೊರಗುಳಿಯಲಿದ್ದು, ಅಭಿವೃದ್ಧಿ ಹಾಗೂ ವಾಣಿಜ್ಯ ಚಟುವಟಿಕೆಗಳೂ ಆರಂಭವಾಗಲಿವೆ. ಇದರಿಂದ ಸಾಕಷ್ಟುಅರಣ್ಯ ಪ್ರದೇಶವು ನಾಶಗೊಂಡು ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ. ಆದ್ದರಿಂದ 2016ರ ಜೂನ್‌ 15ರಂದು ಹೊರಡಿಸಿದ ಕರಡು ಅಧಿಸೂಚನೆಯನ್ನೇ ಅಂತಿಮ ಅಧಿಸೂಚನೆಯಾಗಿ ಘೋಷಣೆ ಮಾಡುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ.

click me!