ಗುಡ್ಡದ ದುರುಗಮ್ಮ ದೇವರ ಮೇಲಿನ ಹಕ್ಕಿಗಾಗಿ ಯಡಚಿ ಮತ್ತು ಕ್ಯಾತನಕೇರಿ ಗ್ರಾಮಸ್ಥರ ಹೊಡೆದಾಟ; 10 ಮಂದಿಗೆ ಗಾಯ!

Published : Feb 19, 2026, 09:01 PM IST
Haveri Durugamma Temple

ಸಾರಾಂಶ

ಹಾವೇರಿ ಜಿಲ್ಲೆಯಲ್ಲಿ 'ಗುಡ್ಡದ ದುರಗಮ್ಮ' ದೇವಸ್ಥಾನದ ಹಕ್ಕಿಗಾಗಿ ಹಿರೇ ಯಡಚಿ ಮತ್ತು ಕ್ಯಾತನಕೇರಿ ಗ್ರಾಮಗಳ ನಡುವೆ ಭೀಕರ ಸಂಘರ್ಷ ನಡೆದಿದೆ. ಹೊಸ ದೇವಸ್ಥಾನ ನಿರ್ಮಾಣದ ವಿಚಾರವಾಗಿ ನಡೆದ ಕಲ್ಲು ತೂರಾಟದಲ್ಲಿ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಹಲವು ವಾಹನಗಳು ಜಖಂಗೊಂಡಿವೆ.

ಹಾವೇರಿ (ಫೆ.19): ದೇವಸ್ಥಾನದ ಹಕ್ಕು ಮತ್ತು ಆಡಳಿತದ ವಿಚಾರವಾಗಿ ಎರಡು ಗ್ರಾಮಗಳ ನಡುವೆ ಮೊದಲಿನಿಂದಲೂ ಇದ್ದ ಕಿಡಿ ಈಗ ಜ್ವಾಲೆಯಾಗಿ ಸ್ಫೋಟಗೊಂಡಿದೆ. ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಹಿರೇ ಯಡಚಿ ಮತ್ತು ಕ್ಯಾತನಕೇರಿ ಗ್ರಾಮಸ್ಥರ ನಡುವೆ ಗುರುವಾರ ಭೀಕರ ಸಂಘರ್ಷ ನಡೆದಿದ್ದು, ಕಲ್ಲು ತೂರಾಟದ ಪರಿಣಾಮವಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈ ಮಾರಾಮಾರಿಯಲ್ಲಿ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಹಲವು ವಾಹನಗಳು ಪುಡಿಪುಡಿಯಾಗಿವೆ.

ಘಟನೆಯ ವಿವರ:

ಹಿರೇ ಯಡಚಿ ಹಾಗೂ ಕ್ಯಾತನಕೇರಿ ಗ್ರಾಮಗಳ ನಡುವೆ ಒಂದು ಗುಡ್ಡವಿದ್ದು, ಅಲ್ಲಿ ಪುರಾತನವಾದ 'ಗುಡ್ಡದ ದುರಗಮ್ಮ' ದೇವಸ್ಥಾನವಿದೆ. ಈ ದೇವಸ್ಥಾನದ ಮಾಲೀಕತ್ವ ಮತ್ತು ಪೂಜಾ ಕೈಂಕರ್ಯದ ವಿಚಾರವಾಗಿ ಎರಡೂ ಗ್ರಾಮಗಳ ನಡುವೆ ದಶಕಗಳಿಂದಲೂ ಶೀತಲ ಸಮರ ನಡೆಯುತ್ತಲೇ ಇತ್ತು. 'ದೇವಸ್ಥಾನ ನಮಗೆ ಸೇರಿದ್ದು' ಎಂದು ಎರಡೂ ಕಡೆಯವರು ಹಕ್ಕು ಸಾಧಿಸುತ್ತಿದ್ದರು. ಇತ್ತೀಚೆಗೆ ಹಿರೇ ಯಡಚಿ ಗ್ರಾಮಸ್ಥರು ಗುಡ್ಡದಲ್ಲಿರೋ ಹಳೆ ದೇವಸ್ಥಾನದ ಬಳಿಯೇ ಹೊಸದಾಗಿ ದೇವಸ್ಥಾನ ನಿರ್ಮಿಸಲು ಮುಂದಾಗಿದ್ದರು. ಅಲ್ಲದೆ, ಬರುವ ಮಾರ್ಚ್ 9 ರಿಂದ ಅದ್ಧೂರಿಯಾಗಿ ದುರಗಮ್ಮನ ಜಾತ್ರೆ ನಡೆಸಲು ನಿರ್ಧರಿಸಿದ್ದರು. ಈ ಜಾತ್ರೆಗಾಗಿ ಗುಡ್ಡದ ಮೇಲೆ ಮಂಟಪ ನಿರ್ಮಾಣ ಕಾರ್ಯ ಆರಂಭಿಸಿದ್ದರು.

ಸಂಘರ್ಷಕ್ಕೆ ಕಾರಣವಾದ 'ಅನುಮತಿ' ತಕರಾರು:

ಹಿರೇ ಯಡಚಿ ಗ್ರಾಮಸ್ಥರು ಮಂಟಪ ನಿರ್ಮಿಸುತ್ತಿರುವುದನ್ನು ಕಂಡು ಕೆಂಡಾಮಂಡಲವಾದ ಕ್ಯಾತನಕೇರಿ ಗ್ರಾಮಸ್ಥರು ಅಲ್ಲಿಗೆ ಬಂದು ತಕರಾರು ತೆಗೆದಿದ್ದಾರೆ. 'ನಮ್ಮ ಅನುಮತಿ ಪಡೆಯದೇ ದೇವಸ್ಥಾನ ಹೇಗೆ ಕಟ್ಟುತ್ತೀರಿ? ಇಲ್ಲಿ ಯಾವುದೇ ಕೆಲಸ ಮಾಡಬೇಕಾದರೂ ನಮ್ಮ ಪರ್ಮಿಷನ್ ಬೇಕು' ಎಂದು ಪಟ್ಟು ಹಿಡಿದಿದ್ದಾರೆ. ಈ ವಿಚಾರವಾಗಿ ಮಾತಿಗೆ ಮಾತು ಬೆಳೆದು, ವಾಗ್ವಾದ ಮುದ್ರೆ ಪಡೆದಿದೆ. ಕ್ಷಣಾರ್ಧದಲ್ಲಿ ಜಗಳ ವಿಕೋಪಕ್ಕೆ ತಿರುಗಿ, ಕ್ಯಾತನಕೇರಿ ಗ್ರಾಮಸ್ಥರು ಹಿರೇ ಯಡಚಿ ಜನರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ರೊಚ್ಚಿಗೆದ್ದ ಗುಂಪು ಅಲ್ಲಿ ನಿಲ್ಲಿಸಿದ್ದ ಬೈಕ್‌ಗಳ ಮೇಲೆ ಬೃಹತ್ ಕಲ್ಲುಗಳನ್ನು ಎತ್ತಿ ಹಾಕಿ ಜಖಂಗೊಳಿಸಿದೆ. ಘಟನೆಯಲ್ಲಿ ಒಂದು ಜೆಸಿಬಿ ಯಂತ್ರ ಹಾಗೂ 10ಕ್ಕೂ ಹೆಚ್ಚು ಬೈಕ್‌ಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ.

ಗಾಯಾಳುಗಳು ಮತ್ತು ಪೊಲೀಸರ ಕ್ರಮ:

ಕಲ್ಲು ತೂರಾಟದ ವೇಳೆ ಎರಡೂ ಕಡೆಯ ಸುಮಾರು 10ಕ್ಕೂ ಹೆಚ್ಚು ಜನರಿಗೆ ರಕ್ತದ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ರಟ್ಟಿಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಉದ್ವಿಗ್ನಗೊಂಡಿದ್ದ ಜನಸಮೂಹವನ್ನು ಚದುರಿಸಿದ ಪೊಲೀಸರು, ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಸದ್ಯ ಗುಡ್ಡದ ಪ್ರದೇಶ ಹಾಗೂ ಎರಡೂ ಗ್ರಾಮಗಳಲ್ಲಿ ಪೊಲೀಸ್ ಕಾವಲು ಹಾಕಲಾಗಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ. ದೇವಸ್ಥಾನದ ವಿವಾದಕ್ಕೆ ಸಂಬಂಧಿಸಿದಂತೆ ಶಾಂತಿ ಸಭೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ. ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಗಲಭೆಯಲ್ಲಿ ಭಾಗಿಯಾದವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

PREV
Read more Articles on
click me!

Recommended Stories

ಗದಗ ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಸಿಕ್ಕ ಬೆನ್ನಲ್ಲೇ ಹೆಚ್ಚಾಯ್ತು ದೇವಾಲಯ, ದೇವರ ಮೂರ್ತಿಗಳ ಧ್ವಂಸ!
ಚಿಕ್ಕಮಗಳೂರು ನೈತಿಕ ಪೊಲೀಸ್‌ಗಿರಿ: ಮುಸ್ಲಿಂ ಹುಡುಗಿ ಜೊತೆಗಿದ್ದ ಯುವಕನಿಗೆ ಹಲ್ಲೆ; ಕೇಳಿದ ತಾಯಿ ಮೇಲೂ ಹಲ್ಲೆ ಯತ್ನ!