
ಹಾವೇರಿ (ಮಾ.19): ಜಿಲ್ಲೆಯ ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 10ಕ್ಕೂ ಅಧಿಕ ಎಮ್ಮೆಗಳು ಸಜೀವವಾಗಿ ದಹನಗೊಂಡಿರುವ ಧಾರುಣ ಘಟನೆ ನಡೆದಿದೆ. ಗ್ರಾಮದ ರೈತ ಪರಮೇಶ ಜಾಡರ್ ಎಂಬುವರಿಗೆ ಸೇರಿದ ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿ ಕೊಟ್ಟಿಗೆ ಸಂಪೂರ್ಣ ಭಸ್ಮವಾಗಿದೆ.
ಬೆಂಕಿಯ ಕೆನ್ನಾಲಗೆಗೆ ಕೊಟ್ಟಿಗೆಯಲ್ಲಿದ್ದ ಸುಮಾರು 10 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಎಮ್ಮೆಗಳು ಮತ್ತು ಮೇವು ಸುಟ್ಟು ಕರಕಲಾಗಿವೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ಹರಸಾಹಸ ಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮೂಕ ಪ್ರಾಣಿಗಳು ಪ್ರಾಣಬಿಟ್ಟಿದ್ದವು.
ಕನವಳ್ಳಿ ಗ್ರಾಮದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಇದು ಐದನೇ ಬೆಂಕಿ ಅವಘಡವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಇದು ಕೇವಲ ಆಕಸ್ಮಿಕವಲ್ಲ, ಕಿಡಿಗೇಡಿಗಳ ಕೈವಾಡವಿರಬಹುದು ಎಂದು ಶಂಕಿಸಿರುವ ಗ್ರಾಮಸ್ಥರು, ಕೂಡಲೇ ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆಹಚ್ಚಬೇಕೆಂದು ಒತ್ತಾಯಿಸಿದ್ದಾರೆ. ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.