1948ರ ಮುಸ್ಲಿಂ ವಿವಾಹ ಆಮಂತ್ರಣ ಪತ್ರಿಕೆ ವೈರಲ್​: ಕನ್ನಡದಲ್ಲಿ ಏನು ಬರೆದಿದ್ದಾರೆ ನೋಡಿ

Published : Mar 19, 2026, 08:21 PM IST
Wedding Card

ಸಾರಾಂಶ

1948ರಲ್ಲಿ ಮುದ್ರಣಗೊಂಡ ಮುಸ್ಲಿಂ ಸಮುದಾಯದ ಮದುವೆ ಆಮಂತ್ರಣ ಪತ್ರಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 'ಗುರುಮಹಮ್ಮದ್ ಪ್ರಸನ್ನ' ಎಂದು ಆರಂಭವಾಗುವ ಈ ಪತ್ರಿಕೆಯಲ್ಲಿ ಬಳಸಲಾದ ಅಚ್ಚ ಕನ್ನಡ ಪದಗಳು ಮತ್ತು ಅಂದಿನ ಸಾಮರಸ್ಯದ ಕುರಿತು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಹಳೆಯ ಕಾಲದ ವಸ್ತುಗಳು ಸಿಕ್ಕಾಗ ಅದರಿಂದ ಆಗುವ ಆನಂದವೇ ಬೇರೆ. ಆಗಿನ ಕಾಲದಲ್ಲಿ ಎಷ್ಟೊಂದು ಚೆನ್ನಾಗಿತ್ತು ಎನ್ನುವ ಮಾತಂತೂ ಒಂದು ಬಾರಿಯಾದರೂ ಬಾಯಿಯಿಂದ ಹೊರಬರುತ್ತದೆ. ಅದರಲ್ಲಿಯೂ ಜಾತಿ, ಧರ್ಮದ ಭೇದಭಾವ ಅಂದು, ಇಂದು, ಎಂದೆಂದಿಗೂ ಇರುವುದು ನಿಜವಾದರೂ, ಇದೀಗ ಇವೆಲ್ಲಾ ರಾಜಕೀಯದಿಂದಾಗಿ ಬಾಂಧವ್ಯಗಳು ಚಿಂದಿ ಚಿಂದಿಯಾಗುತ್ತಿವೆ. ಎಲ್ಲವನ್ನೂ ವೋಟ್​ಬ್ಯಾಂಕ್​ಗಾಗಿ ಬಳಸಿಕೊಳ್ಳುವ ರಾಜಕೀಯ ಮುಖಂಡರಿಂದಾಗಿ ಹಿಂದೆಲ್ಲಾ ಒಟ್ಟಿಗೇ ಇದ್ದವರು ಈಗ ಜಾತಿ, ಧರ್ಮ ಎಂದು ಕಚ್ಚಾಡುವ ಹಾಗೆ ಆಗಿದೆ. ಇದರ ನಡುವೆಯೇ, ಇದೀಗ 1948ರ ಮುಸ್ಲಿಂ ಸಮುದಾಯದ ಆಮಂತ್ರಣ ಪತ್ರಿಕೆಯೊಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಇದಕ್ಕೆ ನೆಟ್ಟಿಗರು ಮನ ಸೋತಿದ್ದಾರೆ.

ಅಚ್ಚರಿ ತಂದ ಆಮಂತ್ರಣ ಪತ್ರಿಕೆ

ಕನ್ನಡದಲ್ಲಿ ಈ ಆಮಂತ್ರಣ ಪತ್ರಿಕೆ ಮುದ್ರಿಸಿರುವುದು ಬಹುತೇಕರಿಗೆ ಖುಷಿ ತಂದುಕೊಟ್ಟಿದೆ. ಏಕೆಂದರೆ, ಇಂದು ಕನ್ನಡದಲ್ಲಿ ಆಮಂತ್ರಣ ಪತ್ರಿಕೆ ಮುದ್ರಣ ಮಾಡುವವರು ಅಪರೂಪ ಆಗಿಬಿಟ್ಟಿದ್ದಾರೆ. ಕನ್ನಡಿಗರೇ ಕನ್ನಡದಲ್ಲಿ ಮುದ್ರಿಸದೇ ಇಂಗ್ಲಿಷ್​ ಮೊರೆ ಹೋಗುವುದು ಸಾಮಾನ್ಯವಾಗಿದೆ. ಅದೂ ಮುಸ್ಲಿಂ ಸಮುದಾಯದವರು ಹೀಗೆ ಕನ್ನಡದಲ್ಲಿ ಮುದ್ರಿಸಿರುವುದು ಅಚ್ಚರಿಯನ್ನು ತಂದಿದೆ. ಈ ಆಮಂತ್ರಣ ಪತ್ರಿಕೆ ಶುರುವಾಗುವುದೇ ಗುರುಮಹಮ್ಮದ್ ಪ್ರಸನ್ನ ಎನ್ನುವ ಮೂಲಕ. ಇದು ಸಕತ್​ ಇಂಟರೆಸ್ಟಿಂಗ್ ಎನ್ನಿಸುತ್ತಿದೆ ಎಂದು ಕಮೆಂಟ್​ಗಳಲ್ಲಿ ಹೇಳುತ್ತಿದ್ದಾರೆ.

ಪ್ರಿಯ ಮಹಾಶಯರೇ...

ವರ್ಕಾಡಿ, ಬಜಲಕರಿಯ ತಾ 28 /8/1948 ಎಂದು ಇದರಲ್ಲಿ ಮುದ್ರಿಸಲಾಗಿದ್ದು, ಕನ್ನಡದಲ್ಲಿ ಮದುವೆಗೆ ಆಮಂತ್ರಣ ಕೊಡಲಾಗಿದೆ. ಅದರಲ್ಲಿ, ಪ್ರಿಯ ಮಹಾಶಯರೇ, ಇದೇ ಹಿಜರಿ 1862ನೇ ರಬ್ಬಿಲಾವಲ್ ತಿಂಗಳ ಚಾಂದ್ 22 ಕ್ಕೆ 22 ಕ್ಕೆ ಸರಿಯಾದ ತಾರೀಕು 28-8-1948ನೇ ಆದಿತ್ಯವಾರ ರಾತ್ರಿ ಘಂಟೆ 8ಕ್ಕೆ ನನ್ನ ಪ್ರಥಮ ಪುತ್ರ ಚಿ। ಬಿ. ಪಕ್ರುದ್ದಿನ್ ಎಂಬ ಯುವಕನು ಕಣ್ಣಂದೂರು ಕಿಳಾರಿ ಹಮ್ಮದ್ ಕುಂಞ ಬ್ಯಾರಿಗಳ ಏಳನೇ ಪುತ್ರಿಯನ್ನು ನಿಖಾಹ ಯಾನೆ ವಿವಾಹ ಮಾಡಿಕೊಳ್ಳುವುದಾಗಿ ನಿಶ್ಚಯಿಸಿರುವುದರಿಂದ ಬಜಲಕರಿಯ ನಮ್ಮ ಮನೆಯಲ್ಲಿ ಆಗುನ ಈ ಮಂಗಳ ಕಾರ್ಯಕ್ಕೆ ತಾವು ತಮ್ಮ ಇಷ್ಟಮಿತ್ರರೊಡಗೂಡಿ ದಯಮಾಡಿ ಬಂದು, ಈ ಶುಭಕಾರ್ಯವನ್ನು ಚಂದಗಾಣಿಸಿಕೊಡಬೇಕಾಗಿ ಅಪೇಕ್ಷಿಸುವ ತಮ್ಮ ಕೃಪಾಭಿಲಾಷಿ ಬಜಲಕರಿಯ ಉಸ್ಮಯಿನ್. ಯಂ. ಅಬ್ದುರಹಿಮಾನ್ ರವರ ಸವಿನಯ ಆಮಂತ್ರಣ ಎಂದು ಬರೆಯಲಾಗಿದೆ.

ಗಮನ ಸೆಳೆದ ಬರಹ

ಕಾರ್ಯಕ್ರಮ: ತಾ: 28-8-1948ನೇ ಆದಿತ್ಯವಾರ ಹಗಲು ಘಂಟೆ 1 ರಿಂದ 7ರ ವರೆಗೆ ದಾವತ್ತು, ರಾತ್ರಿ 8ಕ್ಕೆ ನಿಖಾಹ. 10ಕ್ಕೆ ದಿಬ್ಬಣ ಹೊರಡುವುದು ಎಂದು ಬರೆದಿರುವುದು ಗಮನ ಸೆಳೆಯುತ್ತದೆ. ಇದಕ್ಕೆ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ಈಗಲೂ ಇದೇ ರೀತಿ ಕರ್ನಾಟಕದಲ್ಲಿರುವ ಜನರು ನಮ್ಮ ಭಾಷೆಯನ್ನು ಪ್ರೀತಿಸಿದರೆ ಎಷ್ಟು ಚೆಂದ ಎಂದು ಹಲವರು ಹೇಳುತ್ತಿದ್ದರೆ, ಈಗ ಕಾಲ ಬದಲಾಗಿ ಹೋಗಿದೆ, ಅಂದು ಎಷ್ಟು ಚೆನ್ನಾಗಿತ್ತು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. 78 ವರ್ಷಗಳ ಹಿಂದಿನ ಈ ಆಮಂತ್ರಣ ಪತ್ರಿಕೆಯಾಗಿದ್ದು, ಅವರ ಕುಟುಂಬಸ್ಥರು ಕೂಡ ಇದೇ ಸಂಪ್ರದಾಯ ಮುಂದುವರೆಸಿಕೊಂಡು ಹೋದರೆ ಎಷ್ಟು ಚೆನ್ನ ಎನ್ನುತ್ತಿದ್ದಾರೆ. devraj.sgowda79 ಎನ್ನುವವರು ಇದನ್ನು ಶೇರ್​ ಮಾಡಿದ್ದಾರೆ.

PREV
Read more Articles on
click me!

Recommended Stories

ಕರಾವಳಿಯಲ್ಲಿ ನಾಳೆ 'ಈದುಲ್ ಫಿತ್ರ್' ಸಂಭ್ರಮ: ಚಂದ್ರದರ್ಶನ ಹಿನ್ನೆಲೆ ಶುಕ್ರವಾರ ಈದ್ ಆಚರಣೆಗೆ ಖಾಝಿಗಳ ಘೋಷಣೆ
ದಾವಣಗೆರೆ ಮಾಜಿ ಸಂಸದ ಸಿದ್ದೇಶ್ವರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್; ಅಜಯ್‌ ಕುಮಾರ್ ಮನವೊಲಿಕೆ!