* ಎಲ್ಲೆಡೆ ಪ್ರಕರಣ ಹೆಚ್ಚುತ್ತಿದ್ದರೂ ಜಿಲ್ಲೆಯಲ್ಲಿ ಶೂನ್ಯಕ್ಕಿಳಿದ ಕೇಸ್
* ಇದುವರೆಗೆ 650 ಜನರು ಕೊರೋನಾಕ್ಕೆ ಬಲಿ
* ಚುರುಕಾಗಿ ನಡೆಯುತ್ತಿರುವ ವ್ಯಾಕ್ಸಿನೇಶನ್ ಅಭಿಯಾನ
ಹಾವೇರಿ(ಜ.08): ಎಲ್ಲೆಡೆ ಕೊರೋನಾ(Coronavirus) ಮೂರನೇ ಅಲೆ, ಒಮಿಕ್ರೋನ್(Omicron) ಪೈಪೋಟಿಯಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಜಿಲ್ಲೆಯಲ್ಲಿ ಸೋಂಕಿನ ಸಂಖ್ಯೆ ಶೂನ್ಯಕ್ಕಿಳಿದಿದೆ. ವೀಕೆಂಡ್ ಕರ್ಫ್ಯೂ(Weekend Curfew), ರಾತ್ರಿ ಕರ್ಫ್ಯೂ(Night Curfew) ನಿಯಮಗಳನ್ನು ಪಾಲಿಸುವ ಮೂಲಕ ಈಗಿರುವ ಸ್ಥಿತಿಯನ್ನು ಕಾಯ್ದುಕೊಳ್ಳುವ ದೊಡ್ಡ ಸವಾಲು ಜಿಲ್ಲೆಯ ಜನರ ಕೈಯಲ್ಲಿದೆ.
ದೇಶಾದ್ಯಂತ(India) ಕೊರೋನಾ ಸೋಂಕು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಬೆಂಗಳೂರು(Bengaluru) ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲೂ ಕೋವಿಡ್(Covid19) ಕೇಸ್ ಏರುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸೋಂಕು ಹಬ್ಬುವುದನ್ನು ನಿಯಂತ್ರಿಸಲು ಹಲವು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯ ಕರ್ಫ್ಯೂ ಜಾರಿ ಮಾಡಿದೆ. ಜಿಲ್ಲೆಯಲ್ಲೂ ಇವು ಜಾರಿಯಾಗಿವೆ. ಎಲ್ಲ ಆತಂಕದ ನಡುವೆಯೇ ಜಿಲ್ಲೆಯಲ್ಲಿ ಕೊರೋನಾ ಸಕ್ರಿಯ ಕೇಸ್ ಶೂನ್ಯಕ್ಕಿಳಿದಿರುವುದು ಸಮಾಧಾನಪಡುವ ಸಂಗತಿಯಾಗಿದೆ.
undefined
Coronavirus: ಕೋವಿಡ್ 3ನೇ ಅಲೆ ಎದುರಿಸಲು ಸಜ್ಜು: ಸಚಿವ ಬಿ.ಸಿ.ಪಾಟೀಲ್
ಕಳೆದ ನವೆಂಬರ್ ಎರಡನೇ ವಾರದಲ್ಲಿ ಜಿಲ್ಲೆಯಲ್ಲಿ ಸಕ್ರಿಯ ಕೇಸ್ ಶೂನ್ಯಕ್ಕಿಳಿದಿತ್ತು. ಆದರೆ, ಡಿಸೆಂಬರ್‌ನಲ್ಲಿ ಕೆಲ ಕೇಸ್‌ಗಳು ಬಂದಿದ್ದವು. ಅಲ್ಲಲ್ಲಿ ಒಂದೆರಡು ಪ್ರಕರಣ ಬಂದರೂ ನಿಯಂತ್ರಣದಲ್ಲೇ ಇತ್ತು. ಈಗ ಎಲ್ಲೆಡೆ ಸೋಂಕು ಹೆಚ್ಚುತ್ತಿದ್ದರೂ ಜಿಲ್ಲೆಯಲ್ಲಿ ಒಂದೂ ಕೊರೋನಾ ಕೇಸ್ ಇಲ್ಲ ಎನ್ನುವುದು ಗಮನಾರ್ಹ ಸಂಗತಿಯಾಗಿದೆ.
2020ರ ಮೇ 5ರಂದು ಸವಣೂರಿನಲ್ಲಿ ಮೊದಲ ಕೇಸ್ ಕಾಣಿಸಿಕೊಂಡು 18 ತಿಂಗಳ ಕಾಲ ಜನರನ್ನು ಹೈರಾಣಾಗಿಸಿತು. ಇದುವರೆಗೆ 22,215 ಜನರಿಗೆ ಸೋಂಕು ತಗುಲಿ, 650 ಜನರನ್ನು ಬಲಿ ತೆಗೆದುಕೊಂಡಿತು. ಜಿಲ್ಲೆಯ ಆರ್ಥಿಕತೆಯನ್ನೇ ಕೊರೋನಾ ಬುಡಮೇಲು ಮಾಡಿತ್ತು. ಒಂದು ಮತ್ತು ಎರಡನೇ ಅಲೆಯಿಂದ ಜಿಲ್ಲೆಯನ್ನು ತಲ್ಲಣಗೊಳಿಸಿತ್ತು. ಹಾನಗಲ್ಲ ಉಪಚುನಾವಣೆ(Hanagal Byelection), ಪರಿಷತ್ ಚುನಾವಣೆ(Vidhan Parishat Election), ನಗರ ಸ್ಥಳೀಯ ಸಂಸ್ಥೆ ಸೇರಿದಂತೆ ಸಾಲುಸಾಲು ಚುನಾವಣೆ, ವರ್ಷಾಂತ್ಯ ಸೇರಿದಂತೆ ಹಬ್ಬ ಹರಿದಿನಗಳಲ್ಲಿ ಜನರು ಗುಂಪು ಸೇರಿದ್ದರೂ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣದಲ್ಲಿ ಇರುವುದು ಸದ್ಯಕ್ಕೆ ನೆಮ್ಮದಿಯ ವಿಷಯವಾಗಿದೆ.
ರಾಣಿಬೆನ್ನೂರು ತಾಲೂಕಿನಲ್ಲಿ ಅತ್ಯಧಿಕ 5,359 ಜನರಿಗೆ ಕೊರೋನಾ ತಗಲಿತ್ತು. ಹಾವೇರಿ(Haveri) ತಾಲೂಕಿನಲ್ಲಿ 4,849 ಕೇಸ್ ದೃಢಪಟ್ಟಿದ್ದರೆ, ಬ್ಯಾಡಗಿ ತಾಲೂಕಿನಲ್ಲಿ 2061, ಹಾನಗಲ್ಲ ತಾಲೂಕಿನಲ್ಲಿ 2804 ಪ್ರಕರಣ ದೃಢಪಟ್ಟಿವೆ. ಹಿರೇಕೆರೂರು ತಾಲೂಕಿನಲ್ಲಿ 3063, ಸವಣೂರು ತಾಲೂಕಿನ 1307 ಜನರಿಗೆ, ಶಿಗ್ಗಾಂವಿ ತಾಲೂಕಿನ 2542 ಜನರಿಗೆ ಕೊರೋನಾ ಸೋಂಕು ತಗಲಿತ್ತು. ಇತರೆ 230 ಕೇಸ್ ದಾಖಲಾಗಿದ್ದವು.
650 ಜನರ ಸಾವು:
ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ 650 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮಕ್ಕಳು, ವೃದ್ಧರು, ಮಹಿಳೆಯರು, ಯುವಕರು ಸೇರಿದಂತೆ ಎಲ್ಲರನ್ನು ಕೊರೋನಾ ಬಿಟ್ಟಿರಲಿಲ್ಲ. ಕೊರೋನಾ ಸೋಂಕು ಬಂದರೆ ಸಾವು ನಿಶ್ಚಿತ ಎಂಬ ರೀತಿಯಲ್ಲಿ ಜನರು ಆತಂಕಗೊಂಡಿದ್ದರು. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಿದ ಸೂಕ್ತ ಚಿಕಿತ್ಸೆಯಿಂದ ಗುಣಮುಖರಾದವರ ಸಂಖ್ಯೆಯೂ ಹೆಚ್ಚಿದೆ. ಆದರೂ ಇನ್ನಿತರ ಜಿಲ್ಲೆಗಳಿಗೆ ಹೋಲಿಸಿದರೆ ಸಾವಿನ ಪ್ರಮಾಣ ಜಿಲ್ಲೆಯಲ್ಲಿ ಹೆಚ್ಚಿತ್ತು. ಇದು ಆತಂಕಕ್ಕೆ ಕಾರಣವಾಗಿತ್ತು. ಆಕ್ಸಿಜನ್(Oxygen) ಕೊರತೆ, ಸಕಾಲದಲ್ಲಿ ವೈದ್ಯಕೀಯ ಸೇವೆ ದೊರೆಯದೇ ಇರುವುದು, ಸೋಂಕು ತಗಲಿದರೂ ಆಸ್ಪತ್ರೆಗೆ ಬಾರದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಜನರು ಕೊರೋನಾದಿಂದ ತತ್ತರಿಸಿದ್ದರು. ಸಾವಿನ ಪ್ರಮಾಣ ಹೆಚ್ಚಾಗಲು ಕಾರಣ ಹುಡುಕಲೆಂದೇ ತಜ್ಞರ ಸಮಿತಿ ರಚಿಸಲಾಗಿತ್ತು. ತಜ್ಞರ ಸಮಿತಿ ವರದಿ ನೀಡಿತ್ತು. ಆದರೂ ಸಾವಿನ ಸಂಖ್ಯೆ ಏರುತ್ತಲೇ ಇತ್ತು. ಅಂತೂ ಈಗ ಸಾವಿನ ಸರಣಿಗೆ ಬ್ರೇಕ್ ಬಿದ್ದಂತಾಗಿದೆ.
ಜಿಲ್ಲೆಯಲ್ಲಿ ಹಾವೇರಿ ಜಿಲ್ಲಾಸ್ಪತ್ರೆಯಲ್ಲೇ 194 ಜನರು ಕೊರೋನಾ ಗುಣಮುಖರಾಗದೇ ಕೊನೆಯುಸಿರೆಳೆದಿದ್ದಾರೆ. ಬ್ಯಾಡಗಿ ತಾಲೂಕಿನಲ್ಲಿ 59, ಹಾನಗಲ್ಲ ತಾಲೂಕಿನಲ್ಲಿ 69, ರಾಣಿಬೆನ್ನೂರು 144, ಹಿರೇಕೆರೂರು 78, ಸವಣೂರು 42, ಶಿಗ್ಗಾಂ 57 ಹಾಗೂ ಇತರೆ 7 ಜನರು ಸೇರಿದಂತೆ 650 ಜನರು ಕೊರೋನಾಕ್ಕೆ ಬಲಿಯಾಗಿದ್ದಾರೆ.
Covid Crisis : ಆಘಾತಕಾರಿ ಅಂಶ: ಮಕ್ಕಳೇ ಕೊರೋನಾ 3ನೇ ಅಲೆಯ ಟಾರ್ಗೆಟ್?
ಎಚ್ಚರ ತಪ್ಪಿದರೆ ಅಪಾಯ:
ಜಿಲ್ಲೆ ಕೊರೋನಾ ಮುಕ್ತಗೊಂಡಿದ್ದರೂ ಎಚ್ಚರ ತಪ್ಪಿದರೆ ಅಪಾಯ ತಪ್ಪದು. ಈಗಾಗಲೇ ಎಲ್ಲೆಡೆ ಮೂರನೇ ಅಲೆ ಅಪ್ಪಳಿಸಿದೆ. ಇದು ಜಿಲ್ಲೆಯನ್ನೂ ಪ್ರವೇಶಿಸಲು ಹೆಚ್ಚೇನೂ ಸಮಯ ಬೇಕಿಲ್ಲ. ಆದರೆ, ಈ ಸಂದರ್ಭದಲ್ಲಿ ಸಾರ್ವಜನಿಕರು ಕೊರೋನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಆತಂಕದ ವಿಷಯವೆಂದರೆ ಜನರು ಮಾಸ್ಕ್, ಸಾಮಾಜಿಕ ಅಂತರವನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಕೊರೋನಾ ದೂರವಾಯಿತು ಎಂದು ಮಾಸ್ಕ್ ಧರಿಸುವುದನ್ನು ಜನರು ಕೈಬಿಟ್ಟಿದ್ದಾರೆ. ಆರ್ಥಿಕ ಚಟುವಟಿಕೆ ಸೇರಿದಂತೆ ಎಲ್ಲವೂ ಕೊರೋನಾ ಪೂರ್ವದ ದಿನಗಳಿಗೆ ಮರಳಿರುವುದರಿಂದ ಜನರ ಓಡಾಟ ಹೆಚ್ಚಿದೆ. ಅಕ್ಕಪಕ್ಕದ ಜಿಲ್ಲೆಗಳಿಗೆ ಪ್ರಯಾಣ ಮಾಡುವವರು ಗರಿಷ್ಠ ಎಚ್ಚರಿಕೆ ವಹಿಸಬೇಕಿದೆ. ಅದಕ್ಕಾಗಿ ಜಿಲ್ಲಾಡಳಿತ ಪರೀಕ್ಷೆಗಳನ್ನು ಹೆಚ್ಚಿಸಬೇಕಿದೆ.
ಜಿಲ್ಲೆಯಲ್ಲಿ ಸಕ್ರಿಯ ಕೇಸ್ ಶೂನ್ಯಕ್ಕಿಳಿದಿದೆ. ಆದರೆ, ಎಲ್ಲ ಕಡೆ ಕೇಸ್ ಹೆಚ್ಚಳವಾಗುತ್ತಿದೆ. ಕೊರೋನಾ ಟೆಸ್ಟ್ ಮಾಡುವುದನ್ನು ಹೆಚ್ಚಳ ಮಾಡಿದ್ದೇವೆ. ವ್ಯಾಕ್ಸಿನೇಶನ್ ಅಭಿಯಾನ ಚುರುಕಾಗಿ ನಡೆಯುತ್ತಿದೆ. 15ರಿಂದ 18 ವರ್ಷದ ಮಕ್ಕಳಿಗೂ ಲಸಿಕೆ(Vaccine) ನೀಡುವ ಕಾರ್ಯ ನಡೆಯುತ್ತಿದೆ. ವೀಕೆಂಡ್, ರಾತ್ರಿ ಕರ್ಫ್ಯೂ ಸೇರಿದಂತೆ ಎಲ್ಲ ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು ಅಂತ ಹಾವೇರಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.