
ಹಾಸನ (ಅ.05): ಜಿಲ್ಲೆಯಲ್ಲಿ ಆಡಳಿತಾತ್ಮಕವಾಗಿ ಇಬ್ಬರು ಹಿರಿಯ ಅಧಿಕಾರಿಗಳ ನಡುವೆ ಶೀತಲ ಸಮರ ಮುಂದುವರೆದಿದ್ದು, ದೇವಿಗೆರೆ ಕೆರೆಯಲ್ಲಿ ಗಣೇಶ ವಿಸರ್ಜನೆ ನಿಷೇಧಿಸಿದ್ದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶುಭನ್ವಿತಾ ಅವರಿಗೆ ಕಠಿಣ ‘ಕಾರಣ ಕೇಳಿ ನೋಟಿಸ್’ ಜಾರಿ ಮಾಡಿದ್ದಾರೆ.
ಪರಿಸರ ಸಂರಕ್ಷಣೆ ಮತ್ತು ಜಲಮೂಲಗಳ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಹಾಸನ ನಗರದ ದೇವಿಗೆರೆ ಕೆರೆ ಆವರಣದಲ್ಲಿ ಗಣೇಶ ಮತ್ತು ಗೌರಿ ಮೂರ್ತಿಗಳ ವಿಸರ್ಜನೆಗೆ ನಿಷೇಧ ಹೇರಿ ಜಿಲ್ಲಾಧಿಕಾರಿಗಳು ಅಕ್ಟೋಬರ್ 3 ರಂದು ಆದೇಶ ಹೊರಡಿಸಿದ್ದರು. ಈ ಆದೇಶದ ಬೆನ್ನಲ್ಲೇ ಕೆರೆಯ ಗೇಟ್‌ಗಳಿಗೆ ಬೀಗವನ್ನೂ ಹಾಕಲಾಗಿತ್ತು. ಆದರೂ, ಅಂದು ರಾತ್ರಿ 9 ಗಂಟೆಯ ನಂತರ ನಿಷೇಧವಿದ್ದರೂ ಸಹ ಪೆಂಡಾಲ್ ಗಣಪತಿಯನ್ನು ವಿಸರ್ಜನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿಗಳು, ಎಸ್‌ಪಿ ಅವರಿಗೆ ಜಾರಿ ಮಾಡಿರುವ ನೋಟಿಸ್‌ನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಆಯೋಜಕರ ವಿರುದ್ಧ ಯಾವುದೇ ಪ್ರಕರಣ ದಾಖಲಿಸದಿರುವುದು ಮತ್ತು ಸೂಕ್ತ ಕಾನೂನು ಕ್ರಮ ಜರುಗಿಸದಿರುವುದು ನಿಮ್ಮ ನಿರ್ಲಕ್ಷ್ಯಕ್ಕೆ ಸಾಕ್ಷಿ. ಸರ್ಕಾರಿ ನೌಕರರಾಗಿ ನಿಮ್ಮ ಈ ಬೇಜವಾಬ್ದಾರಿತನ ಹಾಗೂ ಉದ್ಧಟತನ ತರವಲ್ಲ" ಎಂದು ಕಿಡಿಕಾರಿದ್ದಾರೆ.
ನೋಟಿಸ್ ತಲುಪಿದ ತಕ್ಷಣ ಖುದ್ದು ಹಾಜರಾಗಿ ಲಿಖಿತ ಉತ್ತರ ನೀಡುವಂತೆ ಡಿಸಿ ಸೂಚಿಸಿದ್ದಾರೆ. ಒಂದು ವೇಳೆ ಉತ್ತರ ನೀಡಲು ವಿಫಲವಾದರೆ, ತಮ್ಮ ಬಳಿ ಹೇಳಿಕೊಳ್ಳಲು ಏನೂ ಇಲ್ಲ ಎಂದು ಭಾವಿಸಿ, ಎಸ್‌ಪಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಕ್ಷಮ ಪ್ರಾಧಿಕಾರಕ್ಕೆ (ಸರ್ಕಾರಕ್ಕೆ) ಶಿಫಾರಸು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯ ಇಬ್ಬರು ಉನ್ನತ ಅಧಿಕಾರಿಗಳ ಈ ಜಟಾಪಟಿ ಹಾಸನದಲ್ಲಿ ಈಗ ಸಾರ್ವಜನಿಕವಾಗಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.