
ಮಡಿಕೇರಿ: ಕಸ ವಿಂಗಡಿಸಿ ಹಾಕಿ ಎಂದಿದ್ದಕ್ಕೆ ಪೌರಕಾರ್ಮಿಕರಿಗೆ ನಿವೃತ್ತ ಅಧಿಕಾರಿ ಅವಮಾನ ಮಾಡಿರುವ ಆರೋಪ ಕೇಳಿ ಬಂದಿದೆ. ಹಸಿ ಕಸದೊಂದಿಗೆ ಒಣ ಕಸ ಹಾಕಬೇಡಿ ಎಂದಿದ್ದಕ್ಕೆ ಸಫಾಯಿ ಕರ್ಮಚಾರಿಗಳಿಗೆ ಅಧಿಕಾರಿ ನಿಂದನೆ ಮಾಡಿರುವ ವಿಡಿಯೋದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ವೈರಲ್ ಆಗಿದೆ.
ಮಡಿಕೇರಿಯ ಬಾಲಾಡಿ ಶ್ರೀನಿವಾಸ್ ಎಂಬ ನಿವೃತ್ತ ಅಧಿಕಾರಿಯ ಮನೆಯ ಬಳಿ ನಡೆದಿದೆ. ನಗರಸಭೆ ಸಿಬ್ಬಂದಿ ಕಸ ತೆಗೆದುಕೊಳ್ಳಲು ಬಂದಾಗ, ಅವರು ಹಸಿ ಕಸದ ಜೊತೆಗೆ ಒಣ ಕಸ ಮತ್ತು ಪ್ಲಾಸ್ಟಿಕ್ ಬೆರೆಸಿ ನೀಡಿದರು. ಇದನ್ನು ಬೇರ್ಪಡಿಸಿ ನೀಡಿದರೆ ಸಂಗ್ರಹ ಮತ್ತು ವಿಲೇವಾರಿ ಸುಲಭವಾಗುತ್ತದೆ ಎಂದು ಸಿಬ್ಬಂದಿ ತಿಳಿಸಿದರು.
ಆಗ ಶ್ರೀನಿವಾಸ್ ದರ್ಪದಿಂದ ಮಾತನಾಡಿದ್ದು, ನಾವು ಒಮ್ಮೆ ಕಸದ ಬುಟ್ಟಿಗೆ ಹಾಕಿದ ಕಸವನ್ನು ಮತ್ತೆ ಮುಟ್ಟುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಸಿಬ್ಬಂದಿ, ನಿಮ್ಮ ಕಸವನ್ನು ನಾವು ಹೇಗೆ ಕೈಯಲ್ಲಿ ಮುಟ್ಟಬೇಕು ಎಂದು ಕೇಳಿದ್ದಕ್ಕೆ, ಅವರು ಮಾಡಿರುವ ಕರ್ಮಕ್ಕೆ ಸಫಾಯಿ ಕರ್ಮಚಾರಿಗಳಾಗಿದ್ದಾರೆ. ನಾನು ಓದಿ ಗೆಜೆಟೆಡ್ ಅಧಿಕಾರಿಯಾಗಿ ಕೆಲಸ ಮಾಡಿ ನಿವೃತ್ತಿಯಾಗಿದ್ದೇನೆ ಎಂದು ಹೇಳುವ ಮೂಲಕ ಕಸವನ್ನು ತೆಗೆಯುವುದು ಅದನ್ನು ವಿಂಗಡಣೆ ಮಾಡುವುದು ಅವರ ಕರ್ಮ ಎಂದು ಪೌರಕಾರ್ಮಿಕರನ್ನು ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇನ್ನು, ಹೀಗೆ ಮಾಡಬೇಡಿ ಎಂದು ಹೇಳಿದ ನಗರಸಭೆ ವಾಹನದ ಚಾಲನ ಮೇಲೂ ಹಾರಾಡಿರುವ ನಿವೃತ್ತ ಅಧಿಕಾರಿ, ನೀನು ನಿನ್ನ ಕೆಲಸ ನೀನು ಮಾಡು, ಮೇಸ್ತ್ರಿ ಕೆಲಸ ಯಾಕೆ ಮಾಡ್ತೀಯಾ? ಕಸ ವಿಂಗಡಣೆ ಮಾಡುವವರು ಅದನ್ನು ವಿಂಗಡಣೆ ಮಾಡುತ್ತಾರೆ. ಅವರು ಮಾಡಿರುವ ಕರ್ಮಕ್ಕೆ ಅವರು ಸಫಾಯಿ ಕರ್ಮಚಾರಿಗಳಾಗಿದ್ದಾರೆ. ನಾನು ಓದಿ ಗೆಜೆಟೆಡ್ ಆಫೀಸರ್ ಆಗಿ ನಿವೃತನಾಗಿದ್ದೇನೆ ಎಂದು ದರ್ಪ ಮೇರೆದಿದ್ದಾರೆ.