
ತುಮಕೂರು (ಅ.05): ತುಮಕೂರು ತಾಲೂಕಿನ ನಾಗವಲ್ಲಿ ಸಮೀಪದ ಲಕ್ಕೇನಹಳ್ಳಿಯಲ್ಲಿ ಅಪರೂಪದ ವನ್ಯಜೀವಿ 'ಚಿಪ್ಪು ಹಂದಿ' (Pangolin) ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಅದನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಲಕ್ಕೇನಹಳ್ಳಿಯ ನಿವಾಸಿ ಮಮತಾ ಯೋಗೀಶ್ ಅವರ ದನದ ಕೊಟ್ಟಿಗೆಯಲ್ಲಿ ಚಿಪ್ಪು ಹಂದಿ ಕಾಣಿಸಿಕೊಂಡಿದೆ. ಕೊಟ್ಟಿಗೆಯಲ್ಲಿ ವಿಚಿತ್ರ ಪ್ರಾಣಿಯನ್ನು ಗಮನಿಸಿದ ಯೋಗೀಶ್ ಅವರು, ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ವನ್ಯಜೀವಿ ರಕ್ಷಕರು ಕಾರ್ಯಾಚರಣೆ ನಡೆಸಿದರು.
ಆರ್‌ಎಫ್‌ಒ (RFO) ಬಸವರಾಜು ಗೋಗೇರಿ ಅವರ ನೇತೃತ್ವದಲ್ಲಿ ನಡೆದ ಈ ರಕ್ಷಣಾ ಕಾರ್ಯಾಚರಣೆಯಲ್ಲಿ, ವಾರಂಗಲ್ ವನ್ಯಜೀವಿ ಹಾಗೂ ಉರಗ ರಕ್ಷಣೆ ಸಂಸ್ಥೆಯ ದಿಲೀಪ್ ಅವರು ಪ್ರಮುಖ ಪಾತ್ರ ವಹಿಸಿದರು. ಹಾನಿಯಾಗದಂತೆ ಚಿಪ್ಪು ಹಂದಿಯನ್ನು ರಕ್ಷಿಸಿದ ತಂಡ, ನಂತರ ಅದನ್ನು ದೇವರಾಯನದುರ್ಗದ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಡುಗಡೆ ಮಾಡಿದರು.
ಸಾಮಾನ್ಯವಾಗಿ ಈ ಭಾಗದಲ್ಲಿ ಚಿಪ್ಪು ಹಂದಿಗಳು ಕಾಣಿಸಿಕೊಳ್ಳುವುದು ತೀರಾ ಅಪರೂಪ. ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿರುವ 'ಚಿಪ್ಪು ಹಂದಿ'ಯು ಅರಣ್ಯದಿಂದ ದಾರಿ ತಪ್ಪಿ ಆಹಾರಕ್ಕಾಗಿ ನಾಡಿನತ್ತ ಬಂದಿರಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಯೋಗೀಶ್ ಅವರ ಸಮಯಪ್ರಜ್ಞೆಯಿಂದಾಗಿ ಅಪರೂಪದ ಪ್ರಾಣಿಯೊಂದು ಪ್ರಾಣಾಪಾಯದಿಂದ ಪಾರಾಗಿದೆ.