ಘಟನೆ ಬಗ್ಗೆ ಎಸ್ಪಿ ಮಾಹಿತಿ ಪಡೆದಿದ ಮೊಹಮ್ಮದ್ ಸುಜೀತಾ, ಎಸ್ಪಿ ಸ್ಥಳ ಪರಿಶೀಲನೆ ವೇಳೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸ್ಥಳದಲ್ಲಿದ್ದರು. ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಗುತ್ತಿಗೆದಾರ ಅಶ್ವಥ್.
ಹಾಸನ(ಅ.11): ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆಪ್ತ, ಗುತ್ತಿಗೆದಾರ ಅಶ್ವತ್ ಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಹಾಸನ ಎಸ್ಪಿ ಮೊಹಮ್ಮದ್ ಸುಜೀತಾ ಅವರು ತಡರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಬಗ್ಗೆ ಎಸ್ಪಿ ಮೊಹಮ್ಮದ್ ಸುಜೀತಾ ಅವರು ಮಾಹಿತಿ ಪಡೆದಿದ್ದಾರೆ. ಎಸ್ಪಿ ಸ್ಥಳ ಪರಿಶೀಲನೆ ವೇಳೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಸ್ಥಳದಲ್ಲಿದ್ದರು. ಘಟನೆಯ ಬಗ್ಗೆ ಗುತ್ತಿಗೆದಾರ ಅಶ್ವಥ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಶೇಷ ತಂಡಗಳನ್ನ ರಚನೆ ಮಾಡಿದ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಲಾಗುತ್ತಿದೆ.
ಎಚ್‌ಡಿ ರೇವಣ್ಣ ಆಪ್ತ, ಗುತ್ತಿಗೆದಾರನ ಕೊಲೆಗೆ ಯತ್ನ; ಕೂದಲೆಳೆ ಅಂತರದಲ್ಲಿ ಪಾರು!
ಈ ಸಂಬಂಧ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಾಲ್ವರು ದುಷ್ಕರ್ಮಿಗಳ ವಿರುದ್ಧ ದೂರು ದಾಖಲಾಗಿದೆ.
ಕೂದಲೆಳೆ ಅಂತರದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರ ಬಚಾವ್
ಹೊಳೆನರಸೀಪುರ: ಪ್ರಥಮ ದರ್ಜೆ ಗುತ್ತಿಗೆದಾರನ ಮೇಲೆ ದಾಳಿ ಮಾಡಿ ಕೊಲೆಗೆ ಯತ್ನಿಸಿರುವ ಘಟನೆ ಹಾಸನ ಜಿಲ್ಲೆ, ಹೊಳೆನರಸೀಪುರ ತಾಲೂಕಿನ, ಸೂರನಹಳ್ಳಿ ಗ್ರಾಮದ ಹಂಪ್ಸ್ ಬಳಿ ಮಂಗಳವಾರ ರಾತ್ರಿ ನಡೆದಿದೆ. ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಆಪ್ತರಾಗಿರುವ ಅಶ್ವಥ್ ನಾರಾಯಣಗೌಡ ಎಂಬುವವರು ದುಷ್ಕರ್ಮಿಗಳ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಸಂಜೆ ಹಾಸನದಿಂದ ಎಚ್.ಡಿ.ರೇವಣ್ಣ ಅವರ ಜೊತೆ ಹೊಳೆನರಸೀಪುರದ ಮನೆಗೆ ತೆರಳಿದ್ದರು. ಕೆಲಕಾಲ ರೇವಣ್ಣ ಅವರ ನಿವಾಸದಲ್ಲಿ ಚರ್ಚಿಸಿ ರಾತ್ರಿ 8.30 ರ ಸುಮಾರಿನಲ್ಲಿ ಚನ್ನರಾಯಪಟ್ಟಣದ ತಮ್ಮ ನಿವಾಸಕ್ಕೆ KA-53-MF-5555 ನಂಬರಿನ ಫಾರ್ಚೂನರ್ ಕಾರಿನಲ್ಲಿ ಹೊರಟಿದ್ದರು. ಅಶ್ವಥ್ ಮನೆಗೆ ಹೊರಟಿರುವ ಬಗ್ಗೆ ಮಾಹಿತಿ ಪಡೆದು ಸೂರನಹಳ್ಳಿ ಹಂಪ್ಸ್ ಬಳಿ ಕಾರಿನ ಮೇಲೆ ದುಷ್ಕರ್ಮಿಗಳು ದಿಢೀರ್ ಅಟ್ಯಾಕ್ ಮಾಡಿದ್ದರು.
ಮೊದಲು ಕಲ್ಲನ್ನು ಕಾರಿನ ಗ್ಲಾಸ್ ಮೇಲೆ ಎತ್ತಿಹಾಕಿ ನಂತರ ಮಾರಕಾಸ್ತ್ರಗಳಿಂದ ಕೊಲೆ ಮಾಡಲು ಮುಂದಾಗಿದ್ದಾರೆ. ತಂಡದಲ್ಲಿ ಐದಾರು ಮಂದಿ ಅಪರಿಚಿತರು ಇದ್ದರು ಎನ್ನಲಾಗಿದೆ. ಕೂಡಲೇ ಕಾರನ್ನು ರಿವರ್ಸ್ ತೆಗೆದು 150 ಕಿಲೋಮೀಟರ್ ವೇಗದಲ್ಲಿ ಮುಂದೆ ಚಲಿಸಿ ಅಶ್ವಥ್ ಎಸ್ಕೇಪ್ ಆಗಿದ್ದಾರೆ. ಮೂಡಲಹಿಪ್ಪೆ ಗ್ರಾಮದವರೆಗೂ ಅಶ್ವಥ್ ಅವರನ್ನು ಹಿಂಬಾಲಿಸಿದ ದುಷ್ಕರ್ಮಿಗಳು, ನಂತರ ಪರಾರಿಯಾಗಿದ್ದಾರೆ. ಚನ್ನರಾಯಪಟ್ಟಣ ಪೊಲೀಸ್ ಠಾಣೆಗೆ ಅಶ್ವಥ್ ದೂರು ನೀಡಲು ಹೊರಟಿದ್ದು, ರೇವಣ್ಣ ಅವರೂ ಅಲ್ಲಿಗೆ ದೌಡಾಯಿಸಿದ್ದರು.