ಹಾಸನಕ್ಕೆ ಹೋದ ಬೆಂಗಳೂರು ನಿವಾಸಿಯನ್ನೂ ಬಲಿಪಡೆದ ಹಾರ್ಟ್ ಅಟ್ಯಾಕ್; ಭಾನುವಾರ ಮತ್ತಿಬ್ಬರು ಸಾವು!

Published : Jul 06, 2025, 05:32 PM IST
Hassan Heart Attack Sunday

ಸಾರಾಂಶ

ಹಾಸನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿದ್ದು, ಇತ್ತೀಚೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಒಂದೂವರೆ ತಿಂಗಳಲ್ಲಿ 37ಕ್ಕೂ ಹೆಚ್ಚು ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಹಾಸನ (ಜು.06): ಹೃದಯಾಘಾತದಿಂದಾಗುವ ಸಾವಿನ ಸರಣಿ ಹಾಸನ ಜಿಲ್ಲೆಯ ಜನರಲ್ಲಿ ಆತಂಕ ಉಂಟುಮಾಡುತ್ತಿದೆ. ಇತ್ತೀಚೆಗೆ ಮತ್ತೆ ಒಂದು ದುಃಖಾಂತ ಸಂಭವಿಸಿದೆ. ಕಾರಿನಲ್ಲಿ ಪತ್ನಿ ಮತ್ತು ಪುತ್ರಿಯೊಂದಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡು, ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಬೆಂಗಳೂರಿನ ಜಯನಗರ ನಿವಾಸಿ ರಂಗನಾಥ್ (57) ಎಂದು ಗುರುತಿಸಲಾಗಿದೆ. ಅವರು ತಮ್ಮ ಪತ್ನಿ ಮತ್ತು ಪುತ್ರಿಯೊಂದಿಗೆ ಮಂಗಳೂರಿಗೆ ಪ್ರವಾಸಕ್ಕೆ ತೆರಳಿದ್ದು, ಟ್ರಿಪ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸಾಗುತ್ತಿದ್ದರು. ಈ ವೇಳೆ ಕಾರು ಚಾಲನೆ ಮಾಡುತ್ತಿದ್ದ ಅವರ ಪುತ್ರಿಯೊಂದಿಗೆ ಹಾಸನ ನಗರದ ಡಿಸಿ ಕಚೇರಿ ಬಳಿ ತಲುಪಿದಾಗ, ರಂಗನಾಥ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಪರಿಸ್ಥಿತಿಯನ್ನು ಗಮನಿಸಿದ ಪುತ್ರಿ ಕಾರು ನಿಲ್ಲಿಸಿ ನೆರವಿಗೆ ಯತ್ನಿಸಿದ್ದರೂ, ರಂಗನಾಥ್ ಅವರು ಇದೇ ಸಮಯದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಅಸ್ವಸ್ಥರಾಗಿದ್ದಾರೆ. ಬಳಿಕ ತಕ್ಷಣವೇ ಅವರನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಗಲೇ ಅವರು ಕೊನೆಯುಸಿರೆಳೆದಿದ್ದು, ವೈದ್ಯರು ರಂಗನಾಥ್ ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಈ ಘಟನೆಯೊಂದಿಗೆ ಹಾಸನ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸುತ್ತಿರುವ ಹೃದಯಾಘಾತದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಆರೋಗ್ಯವಂತ ವ್ಯಕ್ತಿಗಳಲ್ಲಿಯೂ ಹಠಾತ್ ಹೃದಯಾಘಾತ ಸಂಭವಿಸುತ್ತಿರುವುದು ತೀವ್ರ ಚಿಂತೆಗೂಡಿಸಿದೆ. ವೈದ್ಯಕೀಯ ತಜ್ಞರು ಈ ಕುರಿತು ಶೀಘ್ರವೇ ಸಾರ್ವಜನಿಕ ಅರಿವು ಮೂಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಘಟನೆಗಳು ಮುನ್ನೆಚ್ಚರಿಕಾ ಆರೋಗ್ಯ ತಪಾಸಣೆ ಮತ್ತು ತ್ವರಿತ ವೈದ್ಯಕೀಯ ಸಹಾಯದ ಅಗತ್ಯತೆಯನ್ನು ಮತ್ತೊಮ್ಮೆ ಗಮನಕ್ಕೆ ತರಿವೆ.

ಇದಕ್ಕು ಮುನ್ನ ಬೆಳಗ್ಗೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ, ಕೊಂಗಲಬೀಡು ಗ್ರಾಮದಲ್ಲಿ ಆನಂದ (44) ಎನ್ನುವವರು ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆನಂದ್ ಐಚನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾಗಿದ್ದರು. ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಎದೆನೋವು ಕಾಣಸಿಕೊಂಡಿದೆ. ಪತ್ನಿ ಬಳಿ ಎದೆನೋವು ಎಂದು ಹೇಳಿದ್ದಾರೆ. ಆಗ ಆಸ್ಪತ್ರೆಗೆ ಕರೆದೊಯ್ಯಲು ಆಟೋ ಕರೆತರುವಷ್ಟರಲ್ಲಿ ಆನಂದ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹೊಳೆನರಸೀಪುರ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರಿಗೆ ತೋರಿಸಿದ್ದಾರೆ. ಆದರೆ, ಆನಂದ್ ಅದಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಿನಲ್ಲಿ 37 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

PREV
Read more Articles on
click me!

Recommended Stories

ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಸೀಮಂತ ಸಂಭ್ರಮ; ಶಾಸ್ತ್ರಬದ್ಧ ಸಂಪ್ರದಾಯ ಆಚರಣೆ!
ಪ್ರತಿಭಾವಂತ ವಿದ್ಯಾರ್ಥಿನಿ ಪ್ರಿಯಾಂಕಾ ಇನ್ನಿಲ್ಲ; ಹೊಟ್ಟೆನೋವು ತಾಳಲಾರದೇ ಆತ್ಮ*ಹತ್ಯೆ!