Water Crisis: ಅನ್ನವಿದೆ, ಬೇಯಿಸಲು ನೀರಿಲ್ಲ! ಖಾಲಿ ಬಿಂದಿಗೆ ಹಿಡಿದು ರಸ್ತೆಗಿಳಿದ ಶಾಲಾ ಮಕ್ಕಳು!

Published : Sep 15, 2026, 08:26 PM IST
Chamarajanagara Water Crisis

ಸಾರಾಂಶ

ಬಿಸಿಯೂಟ ತಯಾರಿಸಲು ನೀರಿಲ್ಲದ ಕಾರಣ ಸೆಂಟ್ ಆಂಥೋನಿ ಶಾಲೆಯ ವಿದ್ಯಾರ್ಥಿಗಳು ಖಾಲಿ ಬಿಂದಿಗೆ ಹಿಡಿದು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಹನೂರು (ಚಾಮರಾಜನಗರ): ಶಾಲಾ ಆವರಣದಲ್ಲಿ ಪಾಠ ಕೇಳಿ, ಪುಸ್ತಕಗಳನ್ನು ಹಿಡಿದು ಭವಿಷ್ಯ ರೂಪಿಸಿಕೊಳ್ಳಬೇಕಿದ್ದ ಎಳೆಯ ಮಕ್ಕಳು, ಇಂದು ಕೈಯಲ್ಲಿ ಖಾಲಿ ಬಿಂದಿಗೆ ಹಾಗೂ ನೀರಿನ ಬಾಟಲಿಗಳನ್ನು ಹಿಡಿದು ರಸ್ತೆಗಿಳಿದು ಹೋರಾಟ ನಡೆಸಿದ ದಯನೀಯ ಘಟನೆಯೊಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸಂದನಪಾಳ್ಯ ಗ್ರಾಮದಲ್ಲಿ ವರದಿಯಾಗಿದೆ. ಗ್ರಾಮದ ಸೆಂಟ್ ಆಂಥೋನಿ ಶಾಲೆಯ ವಿದ್ಯಾರ್ಥಿಗಳು ಮೂಲಭೂತ ಸೌಕರ್ಯವಾದ ನೀರಿನ ಕೊರತೆಯಿಂದಾಗಿ ಬಿಸಿಯೂಟವೂ ಸಿಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸ್ಥಳೀಯ ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನ್ನವಿದ್ದರೂ ಅಡುಗೆಗೆ ನೀರಿಲ್ಲ!

ರಾಜ್ಯ ಸರ್ಕಾರವು ಶಾಲಾ ಮಕ್ಕಳಿಗೆ ಅಪೌಷ್ಟಿಕತೆ ನೀಗಿಸಲು ಮತ್ತು ಶಾಲಾ ಹಾಜರಾತಿ ಹೆಚ್ಚಿಸಲು ಬಿಸಿಯೂಟ ಯೋಜನೆಯಡಿ ಸಪ್ಲೈ ಮಾಡುತ್ತಿರುವ ಆಹಾರ ಧಾನ್ಯಗಳು, ಬೇಳೆ-ಕಾಳುಗಳು ಹಾಗೂ ರೇಷನ್ ಸಾಮಗ್ರಿಗಳು ಶಾಲೆಗೆ ಸರಿಯಾಗಿ ಪೂರೈಕೆಯಾಗುತ್ತಿವೆ. ಆದರೆ, ಈ ಆಹಾರ ಧಾನ್ಯಗಳನ್ನು ತೊಳೆಯಲು ಮತ್ತು ಅಡುಗೆ ತಯಾರಿಸಲು ಅಗತ್ಯವಿರುವ ಒಂದೇ ಒಂದು ಬಿಂದಿಗೆ ಶುದ್ಧ ನೀರು ಶಾಲೆಯಲ್ಲಿ ಲಭ್ಯವಿಲ್ಲ! ಪರಿಣಾಮವಾಗಿ, ಮಕ್ಕಳು ಮಧ್ಯಾಹ್ನದ ಹೊತ್ತಿಗೆ ಹಸಿವಿನಿಂದ ಕಂಗಾಲಾಗುವಂತಾಗಿದೆ. ದಿನವಿಡೀ ತರಗತಿಯಲ್ಲಿ ಕುಳಿತು ವ್ಯಾಸಂಗ ಮಾಡುವ ಮಕ್ಕಳಿಗೆ ಮಧ್ಯಾಹ್ನ ಸೌಟು-ಪಾತ್ರೆಗಳ ಶಬ್ದ ಕೇಳಬೇಕಿತ್ತೇ ವಿನಃ, ಅಡುಗೆ ಕೋಣೆಯಲ್ಲಿ ಖಾಲಿ ಪಾತ್ರೆಗಳು ಇರುವುದನ್ನು ಕಂಡು ಮಕ್ಕಳು ಆಕ್ರೋಶಗೊಂಡಿದ್ದಾರೆ.

ಖಾಲಿ ಬಿಂದಿಗೆ, ಬಾಟಲ್ ಹಿಡಿದು ಪ್ರತಿಭಟನೆ!

ಸ್ಥಳೀಯ ಗ್ರಾಮ ಪಂಚಾಯತಿ ಹಾಗೂ ಕುಡಿಯುವ ನೀರು ಪೂರೈಕೆ ಮಂಡಳಿಯ ಬೇಜವಾಬ್ದಾರಿತನದಿಂದ ಬೇಸತ್ತ ಸೆಂಟ್ ಆಂಥೋನಿ ಶಾಲೆಯ ನೂರಾರು ವಿದ್ಯಾರ್ಥಿಗಳು, ತಮ್ಮ ಶಾಲಾ ಸಮಸ್ತ್ರದಲ್ಲೇ ಕೈಯಲ್ಲಿ ಖಾಲಿ ಬಿಂದಿಗೆಗಳು ಮತ್ತು ಖಾಲಿ ನೀರಿನ ಬಾಟಲಿಗಳನ್ನು ಹಿಡಿದು ರಸ್ತೆಗೆ ಬಂದು ನಿಂತಿದ್ದಾರೆ. "ನಮಗೆ ನೀರು ಬೇಕು, ಅಡುಗೆ ಮಾಡಲು ನೀರು ಕೊಡಿ" ಎಂದು ಘೋಷಣೆಗಳನ್ನು ಕೂಗುತ್ತಾ ಅಧಿಕಾರಿಗಳ ಗಮನ ಸೆಳೆಯಲು ಪ್ರಯತ್ನಿಸಿದರು. ಪುಟ್ಟ ಮಗು ಒಂದೊಂದು ಖಾಲಿ ಬಿಂದಿಗೆಯನ್ನು ಹಿಡಿದು ನಿಂತಿದ್ದ ದೃಶ್ಯವು ಸ್ಥಳೀಯ ಹಿತೈಷಿಗಳು ಹಾಗೂ ಸಾರ್ವಜನಿಕರ ಮನಕಲಕುವಂತಿತ್ತು.

ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯ!

ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಈ ಕುರಿತು ಹಲವು ಬಾರಿ ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಮುಖವಾಗಿ ಕುಡಿಯುವ ನೀರಿನ ಪೈಪ್‌ಲೈನ್ ಹಾಗೂ ಬೋರ್‌ವೆಲ್ ಪಂಪ್‌ಗಳ ದುರಸ್ತಿಗೆ ಮನವಿ ಸಲ್ಲಿಸಿದರೂ ಅಧಿಕಾರಿಗಳು ಕ್ಯಾರೇ ಎಂದಿಲ್ಲ. "ಪ್ರತಿದಿನ ನಾವು ಬಿಸಿಯೂಟಕ್ಕಾಗಿ ಕಾಯುತ್ತೇವೆ, ಆದರೆ ನೀರಿನ ಕೊರತೆಯಿಂದಾಗಿ ಅಡುಗೆಯವರು ಅಡುಗೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ. ಮನೆಯಿಂದ ತರುವ ಅಲ್ಪಸ್ವಲ್ಪ ನೀರು ಕುಡಿಯಲು ಮಾತ್ರ ಸಾಲುತ್ತದೆ. ಮಧ್ಯಾಹ್ನ ಊಟವಿಲ್ಲದೆ ನಾವು ತರಗತಿಯಲ್ಲಿ ಕುಳಿತುಕೊಳ್ಳುವುದು ಹೇಗೆ?" ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಅಧಿಕಾರಿಗಳಿಗೆ ಎಚ್ಚರಿಕೆ!

ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕಾದ ಗ್ರಾಮ ಪಂಚಾಯತಿ (ಗ್ರಾ.ಪಂ) ಅಧಿಕಾರಿಗಳು ಸಂಪೂರ್ಣ ನಿದ್ರಾವಸ್ಥೆಯಲ್ಲಿದ್ದಾರೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಶಾಲಾ ಮಕ್ಕಳು ಬೀದಿಗೆ ಬಂದು ಪ್ರತಿಭಟನೆ ನಡೆಸುವ ಹಂತಕ್ಕೆ ತಲುಪಿದ್ದರೂ ಸಹ ಸಂಬಂಧಪಟ್ಟ ಮೇಲಧಿಕಾರಿಗಳು ತಕ್ಷಣಕ್ಕೆ ಸ್ಥಳಕ್ಕೆ ಬಾರದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕೂಡಲೇ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು ಹಾಗೂ ತಾಲೂಕು ಆಡಳಿತ ಮಧ್ಯಪ್ರವೇಶಿಸಿ ಸೆಂಟ್ ಆಂಥೋನಿ ಶಾಲೆಗೆ ತಕ್ಷಣದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಗ್ರಾಮಸ್ಥರು ಹಾಗೂ ಶಾಲಾ ಆಡಳಿತ ಮಂಡಳಿ ಜೊತೆಗೂಡಿ ಉಗ್ರ ಸ್ವರೂಪದ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರಿನಲ್ಲಿ ಸಡನ್ ಸುರಿದ ವಿಪರೀತ ಮಳೆ, ನೀರು ನಿಂತು ಅವಾಂತರ, ಕರ್ನಾಟಕದ 8 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಣೆ!
ಮಿಸ್ ಯೂನಿವರ್ಸ್ ಫೈನಲಿಸ್ಟ್, ಸ್ಪರ್ಧೆ ಬೆನ್ನಲ್ಲೇ ಕೆಲಸಕ್ಕೆ ಹಾಜರಾದ ಬೆಂಗಳೂರು ಗೂಗಲ್ ಎಂಜಿನೀಯರ್