
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ಮುಂದಿನ ಮೂರು ಗಂಟೆಗಳಲ್ಲಿ ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಒಳನಾಡಿನ ಒಟ್ಟು 8 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಹಲವು ಜಿಲ್ಲೆಗಳಿಗೆ 'ಎಲ್ಲೋ ಅಲರ್ಟ್' ಘೋಷಿಸಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ. ವಿಪರೀತ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ವ್ಯತ್ಯಯವಾಗುವ, ಭಾರಿ ಸಂಚಾರ ದಟ್ಟಣೆ ಉಂಟಾಗುವ ಹಾಗೂ ಬಲವಾದ ಗಾಳಿಗೆ ಮರದ ಕೊಂಬೆಗಳು ಬಿದ್ದು ಅನಾಹುತ ಸಂಭವಿಸುವ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರು, ವಾಹನ ಸವಾರರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ರಾಜಧಾನಿ ಬೆಂಗಳೂರಿನ ಹಲವೆಡೆ ಸಂಜೆ ದಿಢೀರನೆ ಸುರಿದ ಭಾರೀ ಮಳೆಯಿಂದಾಗಿ ನಗರದ ದೈನಂದಿನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ವಿಶೇಷವಾಗಿ ಹೆಬ್ಬಾಳ, ದೊಡ್ಡಬೊಮ್ಮಸಂದ್ರ, ವಿದ್ಯಾರಣ್ಯಪುರ, ಆರ್‌ಟಿ ನಗರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಮಳೆ ಅಬ್ಬರಿಸಿದೆ. ಬಿಇಎಲ್ (BEL) ರಸ್ತೆಯಲ್ಲಿ ಸುಮಾರು ಎರಡಡಿ ಎತ್ತರಕ್ಕೆ ಮಳೆ ನೀರು ನಿಂತಿದ್ದು, ಬೈಕ್ ಮತ್ತು ಆಟೋ ಚಾಲಕರು ರಸ್ತೆಯಲ್ಲಿ ಸಾಗಲು ಹರಸಾಹಸ ಪಟ್ಟರು. ಮೇಖ್ರಿ ಸರ್ಕಲ್ ಹಾಗೂ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತು ಭಾರಿ ಸಂಚಾರ ದಟ್ಟಣೆ ಉಂಟಾಯಿತು.
ಸಿಲಿಕಾನ್ ಸಿಟಿಯ ಧಾರಾಕಾರ ಮಳೆಯಿಂದಾಗಿ ನಗರದ ಹಲವು ಪ್ರಮುಖ ಅಂಡರ್‌ಪಾಸ್‌ಗಳು ನೀರು ತುಂಬಿ ಈಜುಕೊಳದಂತಾಗಿದ್ದವು. ಶಿವಾನಂದ ಸರ್ಕಲ್ ಅಂಡರ್‌ಪಾಸ್‌ನಲ್ಲಿ ಸುಮಾರು ನಾಲ್ಕು ಅಡಿ ಎತ್ತರಕ್ಕೆ ಮಳೆ ನೀರು ನಿಂತಿದ್ದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ನಡು ನೀರಿನಲ್ಲಿ ವಾಹನಗಳು ಕೆಟ್ಟು ನಿಲ್ಲುವ ಭಯದಿಂದ ಸವಾರರು ಪರ್ಯಾಯ ರಸ್ತೆಗಳನ್ನು ಹುಡುಕಿಕೊಂಡು ಪರದಾಡುವಂತಾಯಿತು.
ಮಳೆಯ ಆರ್ಭಟಕ್ಕೆ ನಗರದ ತಗ್ಗು ಪ್ರದೇಶಗಳ ನಿವಾಸಿಗಳು ತೀವ್ರ ಸಂಕಷ್ಟ ಎದುರಿಸುವಂತಾಯ್ತು. ಸುಲ್ತಾನ್ ಪಾಳ್ಯದ ಸುತ್ತಮುತ್ತಲಿನ ಹಲವು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳು ಹಾಗೂ ಧಾನ್ಯಗಳು ನೀರು ಪಾಲಾಗಿವೆ. ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಭಾರತಿ ನಗರ ವಾರ್ಡ್‌ನಲ್ಲಿ ರಾಜಕಾಲುವೆ ಭರ್ತಿಯಾಗಿ ಉಕ್ಕಿ ಹರಿದ ಪರಿಣಾಮ, ರಾಜಕಾಲುವೆಯ ಕಲುಷಿತ ನೀರು ನೇರವಾಗಿ ರಸ್ತೆ ಹಾಗೂ ಮನೆಗಳಿಗೆ ನುಗ್ಗಿ ಸಾರ್ವಜನಿಕರು ತೀವ್ರ ಸಂಕಷ್ಟ ಪಟ್ಟರು.