ಪ್ರಸನ್ನ ಶ್ರೀವಿರೂಪಾಕ್ಷೇಶ್ವರ ದೇಗುಲ ಎಂದು ಪ್ರಸಿದ್ಧಿ ಪಡೆದಿರುವ ನೆಲಸ್ತರದ ಶಿವಾಲಯ ದೇಗುಲದ ಮಂಟಪದ ಮೂರು ಕಂಬಗಳು ಮಳೆಗೆ ಉರುಳಿವೆ.
ಹೊಸಪೇಟೆ(ಆ.31): ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಹಂಪಿಯ ಅಕ್ಕ-ತಂಗಿ ಗುಡ್ಡದ ಬಳಿಯ ನೆಲಸ್ತರದ ಶಿವಾಲಯದ ಮಂಟಪ ಧರೆಗುರುಳಿದಿದೆ. ಪ್ರಸನ್ನ ಶ್ರೀವಿರೂಪಾಕ್ಷೇಶ್ವರ ದೇಗುಲ ಎಂದು ಪ್ರಸಿದ್ಧಿ ಪಡೆದಿರುವ ನೆಲಸ್ತರದ ಶಿವಾಲಯ ದೇಗುಲದ ಮಂಟಪದ ಮೂರು ಕಂಬಗಳು ಮಳೆಗೆ ಉರುಳಿವೆ. ಜತೆಗೆ ಮಣ್ಣಿನ ತಡೆಗೋಡೆಯೂ ಉರುಳಿದೆ. ಈ ದೇಗುಲದಲ್ಲಿ ಮಳೆ ನೀರು ನಿಂತಿರುವುದರಿಂದ ವೀಕ್ಷಿಸಲು ಸಾಧ್ಯವಾಗದೆ ಪ್ರವಾಸಿಗರು ಹಾಗೂ ಭಕ್ತರು ದೇಗುಲಕ್ಕೆ ಆಗಮಿಸಿ ಮರಳುವಂತಾಗಿದೆ. ಹಂಪಿಯ ಶ್ರೀಪ್ರಸನ್ನ ವಿರೂಪಾಕ್ಷೇಶ್ವರ ದೇವಾಲಯವನ್ನು ವಿಜಯನಗರದ ಆಳರಸರ ಕಾಲದಲ್ಲಿ ನಿರ್ಮಿಸಲಾಗಿದೆ. ಶ್ರೀಕೃಷ್ಣದೇವರಾಯ ಕಾಲದಲ್ಲೇ ಈ ದೇಗುಲದಲ್ಲಿ ಪೂಜೆ ಸಲ್ಲಿಸಲಾಗುತ್ತಿತ್ತು ಎಂದು ಶಾಸನವೊಂದು ಹೇಳುತ್ತದೆ.
ವರದಿ ಕೇಳಿದ ಪುರಾತತ್ವ ಇಲಾಖೆ:
ಹಂಪಿಯ ನೆಲಸ್ತರದ ಶಿವಾಲಯ ದೇಗುಲದ ಮಂಟಪ ಉರುಳಿರುವ ಬಗ್ಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಹಂಪಿ ವಲಯದ ಅಧಿಕಾರಿಗಳು, ಈ ಸ್ಮಾರಕ ನಿರ್ವಹಣೆ ಹೊಣೆ ಹೊತ್ತಿದ್ದ ಅಧಿಕಾರಿಗಳಿಂದ ನೈಜ ವರದಿ ನೀಡಲು ಸೂಚನೆ ನೀಡಿದ್ದಾರೆ. ಈ ವರದಿ ಬಳಿಕ ತಕ್ಷಣವೇ ಜೀರ್ಣೋದ್ಧಾರ ಕೈಗೊಳ್ಳಲು ಪುರಾತತ್ವ ಇಲಾಖೆ ಮುಂದಾಗಿದೆ.
2 ತಿಂಗಳಲ್ಲಿ ಮಳೆ ಅನಾಹುತಕ್ಕೆ 96 ಬಲಿ, 7,548 ಕೋಟಿ ನಷ್ಟ
ಹಂಪಿಯ ಸ್ಮಾರಕಗಳು ಪದೇ ಪದೆ ಮಳೆಗೆ ಉರುಳುತ್ತಿರುವುದರಿಂದ ಪುರಾತತ್ವ ಇಲಾಖೆ ಹಂಪಿಯಲ್ಲಿ ಶಿಥಿಲಾವಸ್ಥೆಗೆ ತಲುಪಿರುವ ಉಳಿದ ಸ್ಮಾರಕಗಳ ಮೇಲೆ ನಿಗಾ ಇಡಲು ಸೂಚಿಸಿದೆ. ಜತೆಗೆ ಶಿಥಿಲಗೊಂಡಿರುವ ಸ್ಮಾರಕಗಳ ಬಗ್ಗೆ ವರದಿ ನೀಡಿ, ಜೀರ್ಣೋದ್ಧಾರ ಕೈಗೊಳ್ಳಲು ಮುಂದಾಗಿದೆ.
ಹಂಪಿಯ ಸ್ಮಾರಕಗಳು ಮೇಲಿಂದ ಮೇಲೆ ಶಿಥಿಲಗೊಳ್ಳುತ್ತಿದ್ದು, ಸಂಬಂಧಿಸಿದ ಇಲಾಖೆ ಗಮನಹರಿಸಲಿ ಎಂಬುದು ಸ್ಥಳೀಯರ ಆಗ್ರಹವಾಗಿದೆ. ಈ ಹಿಂದೆ ವರಾಹ ದೇಗುಲ, ಕುದುರೆಗೊಂಬೆ ಮಂಟಪ, ವಿಷ್ಣು ಮಂಟಪ, ಶ್ರೀಕೃಷ್ಣ ಬಜಾರ್‌ನಲ್ಲಿ ಮಂಟಪ, ಕಮಲ ಮಹಲ್‌ನ ಸುತ್ತಗೋಡೆ, ಕೋಟೆಗೋಡೆ ಸೇರಿದಂತೆ ವಿವಿಧ ಸ್ಮಾರಕಗಳು ಮಳೆಗೆ ಉರುಳಿದ್ದವು. ಭಾರತೀಯ ಪುರಾತತ್ವ ಇಲಾಖೆ ಜೀರ್ಣೋದ್ಧಾರ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಹಂಪಿಯ ನೆಲಸ್ತರದ ಶಿವಾಲಯ ದೇಗುಲದ ಮಂಟಪ ಮಳೆಗೆ ಉರುಳಿದೆ. ಈ ಬಗ್ಗೆ ನೈಜ ವರದಿ ನೀಡಲು ಸ್ಮಾರಕದ ನಿರ್ವಹಣೆ ಹೊಣೆ ಹೊತ್ತಿರುವ ಅಧಿಕಾರಿಗೆ ಸೂಚಿಸಲಾಗಿದೆ. ಶೀಘ್ರವೇ ಈ ಮಂಟಪದ ಜೀರ್ಣೋದ್ಧಾರ ಕೈಗೊಳ್ಳಲಾಗುವುದು. ಜತೆಗೆ ಹಂಪಿಯಲ್ಲಿ ಶಿಥಿಲಗೊಂಡಿರುವ ಉಳಿದ ಸ್ಮಾರಕಗಳನ್ನು ಗುರುತಿಸಲಾಗುವುದು ಅಂತ ಹಂಪಿ ವಲಯ ಪುರಾತತ್ವ ಅಧೀಕ್ಷಕ ನಿಖಿಲ್ ದಾಸ ತಿಳಿಸಿದ್ದಾರೆ.