ಬಿಬಿಎಂಪಿ: ಶೇ.50 ಕಮಿಷನ್‌ ಆರೋಪ ಬೆನ್ನಲ್ಲೇ ಗುತ್ತಿಗೆದಾರರಿಗೆ ಹಣ..!

By Kannadaprabha News  |  First Published Aug 31, 2022, 6:57 AM IST

ಹಣ ಬಿಡುಗಡೆಗೆ ಟಾಸ್ಕ್‌ ನೀಡಿದ್ದ ಮುಖ್ಯ ಆಯುಕ್ತ ತುಷಾರ್‌, ಇದರ ಬೆನ್ನಲ್ಲೇ 182 ಕೋಟಿ ಪಾವತಿ, ಬಿಬಿಎಂಪಿ 8 ವಲಯ ಆಯುಕ್ತರಿಂದಲೇ ನೇರವಾಗಿ ಹಣ ಬಿಡುಗಡೆ


ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಆ.31):  ಬಿಬಿಎಂಪಿಯ ಕಾಮಗಾರಿಯ ಹಣ ಪಡೆಯಲು ಗುತ್ತಿಗೆದಾರರಿಂದ ಅಧಿಕಾರಿಗಳು ವಸೂಲಿ ಮಾಡುವ ಕಮಿಷನ್‌ ಶೇ.40ರಿಂದ 50ರಷ್ಟು ಹೆಚ್ಚಾಗಿದೆ ಎಂದು ಆರೋಪ ಗುತ್ತಿಗೆದಾರರಿಂದ ಕೇಳಿ ಬಂದ ಬೆನ್ನಲೇ ಬರೋಬ್ಬರಿ .182 ಕೋಟಿ ಬಿಡುಗಡೆ! ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘವು ಕಳೆದ ಆಗಸ್ಟ್‌ 23ರಂದು ಪಾಲಿಕೆಯ ಹೊಸ-ಹೊಸ ಆದೇಶದಿಂದ ಕಮಿಷನ್‌ ಪ್ರಮಾಣ ಶೇ.50ಕ್ಕೆ ತಲುಪಿದೆ. ಕಡತಗಳನ್ನು ಮಂಡಿಸುವ ಕಚೇರಿಗಳ (ಟೇಬಲ್ಸ್‌) ಸಂಖ್ಯೆ ಹೆಚ್ಚಾಗಿದೆ. ಕಳೆದ 22 ತಿಂಗಳ ಬಿಲ್‌ ಪಾವತಿ ಬಾಕಿ ಇದೆ ಎಂದು ಗಂಭೀರ ಆರೋಪ ಮಾಡಿತ್ತು. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರ ಆಕ್ರೋಶವನ್ನು ಶಮನಗೊಳಿಸುವ ಪ್ರಯತ್ನ ಮಾಡಿರುವ ಬಿಬಿಎಂಪಿಯು ‘2020ರ ಆಗಸ್ಟ್‌ ಮತ್ತು ಸೆಪ್ಟಂಬರ್‌’ ತಿಂಗಳ ಕಾಮಗಾರಿಯ ಬಿಲ್‌ ಬಿಡುಗಡೆ ಮಾಡಿದೆ.

Tap to resize

Latest Videos

ಈ ಹಿಂದೆ 2020ರ ಜುಲೈವರೆಗೆ ಪೂರ್ಣಗೊಂಡ ಕಾಮಗಾರಿಯ ಬಿಲ್‌ ಪಾವತಿ ಮಾಡಲಾಗಿತ್ತು. ವಿವಿಧ ಕಾರಣ ನೀಡಿ ಕಳೆದ ಮೂರು ತಿಂಗಳಿಂದ ಬಿಲ್‌ ಪಾವತಿ ಮಾಡಿರಲಿಲ್ಲ. ಇದೀಗ ಎಂಟು ವಲಯದಲ್ಲಿ 2020ರ ಆಗಸ್ಟ್‌ ಮತ್ತು ಸೆಪ್ಟಂಬರ್‌ನಲ್ಲಿ ಪೂರ್ಣಗೊಂಡ ಸುಮಾರು 500ಕ್ಕೂ ಅಧಿಕ ಕಾಮಗಾರಿಯ ಬಿಲ್‌ ಬಿಡುಗಡೆ ಮಾಡಲಾಗಿದೆ.

ಗಣೇಶೋತ್ಸವಕ್ಕೆ ಭೂಗತ ಕೇಬಲ್‌ ಅಳವಡಿಸಿ: ಬೆಸ್ಕಾಂ ಸ್ಪಷ್ಟ ಸೂಚನೆ

ವಲಯ ಆಯುಕ್ತರಿಗೆ ಟಾಸ್ಕ್‌

ಈವರೆಗೆ ಎಲ್ಲ ಬಿಲ್‌ಗಳನ್ನು ಬಿಬಿಎಂಪಿ ಕೇಂದ್ರ ಕಚೇರಿಯಿಂದ ಹಾಗೂ ಮುಖ್ಯ ಆಯುಕ್ತರ ಮೂಲಕವೇ ಬಿಡುಗಡೆ ಆಗುತ್ತಿತ್ತು. ಇದೀಗ ವಲಯ ಆಯುಕ್ತರಿಗೆ ಹೆಚ್ಚಿನ ಜವಾಬ್ದಾರಿ ಹಾಗೂ ಅಧಿಕಾರ ವಿಕೇಂದ್ರಿಕರಣ ಮಾಡಲಾಗಿದೆ. ಇದೇ ಮೊದಲ ಬಾರಿಗೆ ವಲಯ ಮಟ್ಟದಲ್ಲಿ ಬಿಲ್‌ ಪಾವತಿ ವ್ಯವಸ್ಥೆ ಜಾರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ವಲಯ ಆಯುಕ್ತರು ಹಣ ಬಿಡುಗಡೆ ಕ್ರಮ ಕೈಗೊಂಡಿದ್ದಾರೆ. ಈ ನಡುವೆ ಪಾಲಿಕೆಯ ಎಂಟು ವಲಯದ ವಲಯ ಆಯುಕ್ತರಿಗೆ ಸೋಮವಾರ ಸಂಜೆ ಒಳಗಾಗಿ ಬಿಲ್‌ ಪಾವತಿ ಮಾಡಬೇಕೆಂದು ಮುಖ್ಯ ಆಯುಕ್ತರು ಟಾಸ್ಕ್‌ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಎಲ್ಲ ವಲಯ ಆಯುಕ್ತರು ಬಿಲ್‌ ಪಾವತಿ ಕಾರ್ಯ ಪೂರ್ಣಗೊಳಿಸಿದ್ದಾರೆ.

ಗುತ್ತಿಗೆದಾರರ ಕಮಿಷನ್‌ ಆರೋಪದಿಂದ ಹಣ ಬಿಡುಗಡೆ ಮಾಡಿಲ್ಲ. ವಲಯ ಕಚೇರಿಯಿಂದ ಬಿಲ್‌ ಪಾವತಿ ವ್ಯವಸ್ಥೆ ಜಾರಿಗೊಳಿಸಿದ್ದರಿಂದ ಹಣ ತಡವಾಗಿತ್ತು. ತಾಂತ್ರಿಕ ಸಮಸ್ಯೆ ನಿವಾರಣೆ ಮಾಡಿಕೊಂಡು ಎರಡು ತಿಂಗಳ ಬಿಲ್‌ ಪಾವತಿ ಆಗಿದೆ. ಅದೇ ರೀತಿ ಮುಂದಿನ ಸೆಪ್ಟಂಬರ್‌ ಮತ್ತೆರಡು ತಿಂಗಳ ಬಿಲ್‌ ಪಾವತಿ ಮಾಡಲಾಗುತ್ತದೆ. ಇನ್ನು ಬಿಲ್‌ ಪಾವತಿ ಅವಧಿಯನ್ನು 24 ತಿಂಗಳಿಂದ 18 ತಿಂಗಳಿಗೆ ಇಳಿಸುವ ಗುರಿ ಹಾಕಿಕೊಳ್ಳಲಾಗಿದೆ ಅಂತ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.  

ಬಿಬಿಎಂಪಿಯ ಚುನಾವಣೆಗಾಗಿ ಕಾಂಗ್ರೆಸ್‌ನ ವಿಷನ್‌ ಡಾಕ್ಯೂಮೆಂಟ್‌ ರಚನೆಗೆ ನಿರ್ಧಾರ

2,500 ಕೋಟಿ ಬಿಲ್‌ ಬಾಕಿ

ಬಿಬಿಎಂಪಿಯ ಅನುದಾನದಲ್ಲಿ ಕೈಗೊಂಡ ಕಾಮಗಾರಿಯ ಬಿಲ್‌ 2020ರ ಸೆಪ್ಟಂಬರ್‌ವರೆಗೆ ಪಾವತಿ ಆಗಿದೆ. 2020ರ ಅಕ್ಟೋಬರ್‌ನಿಂದ 2022ರ ಅಗಸ್ಟ್‌ ಅಂತ್ಯದವರೆಗೆ ಪೂರ್ಣಗೊಂಡ ಸುಮಾರು .2,500 ಕೋಟಿ ಮೊತ್ತದ ಕಾಮಗಾರಿಯ ಬಿಲ್‌ ಪಾವತಿ ಬಾಕಿ ಇದೆ. ಗುತ್ತಿಗೆದಾರರ ಜೇಷ್ಠತೆ ನಿಯಮ ಅನುಸರಿಸಿ ಪಾಲಿಕೆಯ ವರಮಾನದ ಲಭ್ಯತೆಗೆ ಅನುಗುಣವಾಗಿ ಬಿಲ್‌ ಪಾವತಿಸಲಾಗುವುದು ಎಂದು ಮುಖ್ಯಲೆಕ್ಕಾಧಿಕಾರಿ ಎಸ್‌.ಕೆ.ರಾಜು ತಿಳಿಸಿದ್ದಾರೆ.

2020ರ ಆಗಸ್ಟ್‌-ಸೆಪ್ಟಂಬರ್‌ ಬಿಲ್‌ ಪಾವತಿ ವಿವರ

ವಲಯ ಬಿಡುಗಡೆ ಮೊತ್ತ (ಕೋಟಿ)

ಕೇಂದ್ರ 11.11
ಪೂರ್ವ 26.94
ಪಶ್ಚಿಮ 42.48
ದಕ್ಷಿಣ 23.67
ಆರ್‌ಆರ್‌ ನಗರ 3.22
ಬೊಮ್ಮನಹಳ್ಳಿ 16.70
ದಾಸರಹಳ್ಳಿ 11.34
ಯಲಹಂಕ 33.97
ಮಹದೇವಪುರ 12.44
ಒಟ್ಟು 181.87
 

click me!