ತುಂಗಭದ್ರಾ ಡ್ಯಾಂನಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ: ಹಂಪಿ ಸ್ಮಾರಕಗಳು ಜಲಾವೃತ

Published : Jul 16, 2022, 10:03 AM IST
ತುಂಗಭದ್ರಾ ಡ್ಯಾಂನಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ: ಹಂಪಿ ಸ್ಮಾರಕಗಳು ಜಲಾವೃತ

ಸಾರಾಂಶ

ತುಂಗಭದ್ರಾ ಜಲಾಶಯ ಅವಧಿಗೆ ಮುನ್ನವೇ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ನದಿಗೆ ನೀರು ಹರಿಸಲಾಗಿದೆ. ಜಲಾಶಯದ 33 ಕ್ರಸ್ಟ್‌ ಗೇಟ್‌ಗಳ ಪೈಕಿ 30 ಗೇಟ್‌ಗಳ ಮೂಲಕ ಭಾರಿ ಪ್ರಮಾಣದ ನೀರು ನದಿಗೆ ಬಿಟ್ಟಿರುವುದರಿಂದ ಹಂಪಿಯಲ್ಲಿ ನದಿ ತುಂಬಿ ಹರಿಯುತ್ತಿದೆ.

ಹೊಸಪೇಟೆ(ಜು.16):  ತುಂಗಭದ್ರಾ ಜಲಾಶಯದ ಒಳ ಹರಿವು 1,18,561 ಕ್ಯುಸೆಕ್‌ಗೆ ಏರಿದ್ದು, ಡ್ಯಾಂನ 30 ಕ್ರಸ್ಟ್‌ಗೇಟ್‌ಗಳ ಮೂಲಕ 1, 48,561 ಕ್ಯುಸೆಕ್‌ ನೀರು ಶುಕ್ರವಾರ ನದಿಗೆ ಹರಿಬಿಡಲಾಗಿದೆ. ಹಂಪಿಯ ಕೋದಂಡರಾಮ ದೇಗುಲ, ಚಕ್ರತೀರ್ಥದ ಬಳಿಯ ಸ್ಮಾರಕಗಳು ಹಾಗೂ ಪುರಂದರದಾಸರ ಮಂಟಪ, ಕರ್ಮಮಂಟಪಗಳು ಸೇರಿದಂತೆ ವಿವಿಧ ಮಂಟಪಗಳು ಜಲಾವೃತವಾಗಿವೆ. ತುಂಗಭದ್ರಾ ಜಲಾಶಯ ಅವಧಿಗೆ ಮುನ್ನವೇ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ನದಿಗೆ ನೀರು ಹರಿಸಲಾಗಿದೆ. ಜಲಾಶಯದ 33 ಕ್ರಸ್ಟ್‌ ಗೇಟ್‌ಗಳ ಪೈಕಿ 30 ಗೇಟ್‌ಗಳ ಮೂಲಕ ಭಾರಿ ಪ್ರಮಾಣದ ನೀರು ನದಿಗೆ ಬಿಟ್ಟಿರುವುದರಿಂದ ಹಂಪಿಯಲ್ಲಿ ನದಿ ತುಂಬಿ ಹರಿಯುತ್ತಿದೆ.

ಕಂಪಭೂಪ ಮಾರ್ಗ ಬಂದ್‌:

ಹಂಪಿಯ ಕಂಪಭೂಪ ಮಾರ್ಗ ಬಂದ್‌ ಆಗಿದ್ದು, ಹಂಪಿಯ ಧಾರ್ಮಿಕ ವಿಧಿವಿಧಾನ ನೆರವೇರಿಸುವ ಮಂಟಪ, ಕೋದಂಡ ರಾಮದೇವರ ಗುಡಿ, ಪುರಂದರದಾಸರ ಮಂಟಪ, ಕಾಲು ಸೇತುವೆ, ಕೋಟಿಲಿಂಗ, ಕರ್ಮಮಂಟಪ ಸೇರಿದಂತೆ ವಿವಿಧ ಸ್ಮಾರಕಗಳು ಜಲಾವೃತವಾಗಿವೆ. ಹಂಪಿಯ ಸೀತೆ ಸೆರಗು ಬಳಿ ಧಾರಾಕಾರವಾಗಿ ಮಳೆ ಹರಿಯುತ್ತಿದೆ.

ಉತ್ತರ ಕನ್ನಡ: ಕದ್ರಾ ಡ್ಯಾಂ ಪ್ರದೇಶದಲ್ಲಿ ನೆರೆ ಆತಂಕ

ಹಂಪಿ ಭಾಗದಲ್ಲಿ ತುಂಗಭದ್ರಾ ನದಿ ಜೋರಾಗಿ ಹರಿಯುತ್ತಿರುವುದರಿಂದ ಬೋಟ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಕೊಪ್ಪಳದ ಆನೆಗೊಂದಿ ಹಾಗೂ ಹಂಪಿ ನಡುವೆ ಸಂಚರಿಸುತ್ತಿದ್ದ ಬೋಟ್‌ಗಳನ್ನು ನಿಲ್ಲಿಸಲಾಗಿದ್ದು, ಮೀನುಗಾರರು ತೆಪ್ಪಹಾಕದಂತೆ ನಿರ್ಬಂಧಿಸಲಾಗಿದೆ.

ಚಕ್ರತೀರ್ಥ ಹಾಗೂ ಶ್ರೀವಿರೂಪಾಕ್ಷೇಶ್ವರ ದೇಗುಲದ ಭಾಗದಲ್ಲಿ ಪ್ರವಾಸಿಗರು ಹಾಗೂ ಭಕ್ತರು ತೆರಳದಂತೆ ಪೊಲೀಸರು ನಿಗಾವಹಿಸಿದ್ದಾರೆ.ಭಾರಿ ಪ್ರಮಾಣದ ನೀರು ಹರಿಬಿಟ್ಟಿರುವುದರಿಂದ ಮುನ್ನೆಚ್ಚರಿಕೆ ಕ್ರಮವಹಿಸಲು ಹಾಗೂ ಕಾಳಜಿ ಕೇಂದ್ರಗಳನ್ನು ತೆರೆಯಲು ಈಗಾಗಲೇ ವಿಜಯನಗರ, ಬಳ್ಳಾರಿ ಜಿಲ್ಲಾಡಳಿತಗಳು ಕ್ರಮವಹಿಸಿವೆ.

ಸಿಂಗಟಾಲೂರು ಬ್ಯಾರೇಜಿಂದ 89,000 ಕ್ಯುಸೆಕ್‌ ನೀರು ಬಿಡುಗಡೆ: ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಶುರು

3ನೇ ದಿನವೂ ಕಂಪ್ಲಿ-ಗಂಗಾವತಿ ಸೇತುವೆಯಲ್ಲಿ ಸಂಚಾರ ಸ್ಥಗಿತ

ಕಂಪ್ಲಿ:  ತುಂಗಭದ್ರಾ ಜಲಾಶಯದಿಂದ 1.40 ಲಕ್ಷ ಕ್ಯುಸೆಕ್‌ ನೀರು ಬಿಡುಗಡೆಗೊಳಿಸಿದ್ದು, ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದಾಗಿ 3ನೇ ದಿನವೂ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಂಡಿದೆ. ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಎಲೆಗಳು ಸಿಕ್ಕಿಹಾಕಿಕೊಂಡು ಸೇತುವೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ. ಇದರಿಂದಾಗಿ ಕೊಪ್ಪಳ, ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕದ ಭಾಗಗಳಿಗೆ ಸಂಪರ್ಕ ಕಡಿತಗೊಂಡಿದ್ದು ಕೂಲಿ ಕಾರ್ಮಿಕರು, ರೈತರು, ವ್ಯಾಪಾರಿಗಳು, ವಿದ್ಯಾರ್ಥಿಗಳು ಗಂಗಾವತಿಗೆ ತೆರಳಲು ತೆರಳಲು ಸಮಸ್ಯೆಯಾಗಿದೆ.

ನದಿಪಾತ್ರದ ಜಮೀನುಗಳಲ್ಲಿನ ಬಾಳೆ, ಕಬ್ಬು, ಬತ್ತ ಸೇರಿ ಅಪಾರ ಬೆಳೆ ಹಾಗೂ ಜಮೀನುಗಳ ಬಳಿಯ ರೈತರ ಪಂಪ್‌ಸೆಟ್‌ಗಳು ಜಲಾವೃತವಾಗಿವೆ. ಗಂಡುಗಲಿ ಕುಮಾರರಾಮನ ಮಹಾದ್ವಾರದ ಬಳಿ ನೀರು ನುಗ್ಗಿದ್ದು ಸಂಚಾರ ವ್ಯತ್ಯಯವಾಗಿದೆ. ಅಲ್ಲದೇ ಕೋಟೆಯ ಹೊಳೆ ಆಂಜನೇಯ ದೇವಸ್ಥಾನ, ವೆಂಕಟರಮಣ ದೇವಸ್ಥಾನಗಳಲ್ಲಿ ನೀರು ಹರಿದಿದ್ದು, ದೇವಸ್ಥಾನಗಳು ಜಲಾವೃತಗೊಂಡಿವೆ. ಪಟ್ಟಣ ಸೇರಿದಂತೆ ವಿವಿಧೆಡೆಗಳಿಂದ ಅನೇಕ ಸಂಖ್ಯೆಯಲ್ಲಿ ಜನರು ನದಿ ವೀಕ್ಷಿಸಲಿಕ್ಕೆ ಬರುತ್ತಿದ್ದಾರೆ. ಇನ್ನು ಸ್ಥಳೀಯ ಮೀನುಗಾರರು ತೆಪ್ಪಗಳ ಮೂಲಕ ಜನರಿಗೆ ನದಿ ವೀಕ್ಷಣೆಗೆ ಕರೆದೊಯುತ್ತಿದ್ದಾರೆ.

PREV
Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC