ಗೂಂಡಾ ವರ್ತನೆ ಖಂಡಿಸಿ ನವೆಂಬರ್ 11 ರಂದು ಬಂದ್ ಗೆ ಕರೆ ನೀಡಲಾಗಿದೆ
ಬಳ್ಳಾರಿ (ನ.10): ಬಿಜೆಪಿ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರಿಗೆ ರಕ್ಷಣೆ ಇಲ್ಲ ಎಂದು ದೂರಿರುವ ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಭೀಮಾನಾಯ್ಕ ಅವರು, ಕಾಂಗ್ರೆಸ್ ನಾಯಕರಿಗೆ ರಕ್ಷಣೆ ನೀಡುವಂತೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೋಮವಾರ ಮನವಿ ಮಾಡಿದ್ದಾರೆ.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶಾಸಕರು, ಹಗರಿಬೊಮ್ಮನಹಳ್ಳಿಯಲ್ಲಿ ಇತ್ತೀಚೆಗೆ ಜರುಗಿದ ಪುರಸಭೆ ಚುನಾವಣೆಯಲ್ಲಿ ಬಿಜೆಪಿಯ ಮಾಜಿ ಶಾಸಕ ನೇಮಿರಾಜ ನಾಯ್ಕ ಅವರ ಕುಮ್ಮಕ್ಕಿನಿಂದ ಬಿಜೆಪಿಯವರು ಚುನಾವಣೆ ವೇಳೆ ಗಲಾಟೆ ಮಾಡಿಸಲು ಮುಂದಾದರು. ನನ್ನ ವಿರುದ್ಧ ಗಲಾಟೆಗೆ ಪ್ರಚೋದನೆ ನೀಡಿದರು. ಪೊಲೀಸ್ ವ್ಯವಸ್ಥೆಯ ವೈಫಲ್ಯದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿರುವೆ ಎಂದರು.
ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ದರ್ಪ: ತೊಡೆ ತಟ್ಟಿ, ತೋಳೇರಿಸಿ ಜಗಳಕ್ಕೆ ಬಂದ ಕೈ MLA ...
ಪುರಸಭೆ ಚುನಾವಣೆ ವೇಳೆ ನಡೆದ ಗಲಾಟೆಯಲ್ಲಿ ನಾನು ತೋಳು ತಟ್ಟಿದ್ದು ನಿಜ. ನಾನೊಬ್ಬ ಶಾಸಕನಾಗಿದ್ದು ನನ್ನನ್ನೇ ಹೊಡೆಯಲು ಬಂದರೆ ಸುಮ್ಮನಿರಬೇಕೇ? ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ ಎಂದ ಮಾತ್ರಕ್ಕೆ ಕಾಂಗ್ರೆಸ್ ಶಾಸಕರಿಗೆ ರಕ್ಷಣೆ ಇಲ್ಲವೇ ಎಂದು ಪ್ರಶ್ನಿಸಿದರು.
11 ರಂದು ಹಗರಿಬೊಮ್ಮನಹಳ್ಳಿ ಬಂದ್‌ಗೆ ಕರೆ: ಶಾಸಕ ಭೀಮಾನಾಯ್ಕ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಗೂಂಡಾವರ್ತನೆ ಪ್ರದರ್ಶಿಸಿದ್ದು, ಇದು ಖಂಡನೀಯ ಎಂದು ಹೊಸಪೇಟೆ, ಹೂವಿನಹಡಗಲಿ, ಹರಪನಹಳ್ಳಿ, ಸಂಡೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ನ. 11ರಂದು ಹಗರಿಬೊಮ್ಮನಹಳ್ಳಿ ಪಟ್ಟಣ ಬಂದ್‌ಗೆ ಮಾಜಿ ಶಾಸಕ ಕೆ.ನೇಮಿರಾಜ್‌ನಾಯ್ಕ ಕರೆ ನೀಡಿದ್ದಾರೆ.