ದಾವಣಗೆರೆ (ಡಿ.24) : ಹೂವು ಬೆಳೆದ ರೈತರು, ಹೂವು ಮಾರಾಟಗಾರರಿಗೆ ಚಾಕು ತೋರಿಸಿ, ದೌರ್ಜನ್ಯ ನಡೆಸಿ ಹಣ ಕಿತ್ತುಕೊಂಡು ಹೋಗುತ್ತಿರುವ ಕೆಲ ಪುಡಾರಿಗಳು, ರೌಡಿಗಳನ್ನು ಮಟ್ಟಹಾಕುವಂತೆ ಒತ್ತಾಯಿಸಿ ರೈತರು ನಗರದ ತಾಲೂಕು ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಭಾರತ ಕಾಲನಿಯ ಕೃಷಿ ಮಾರುಕಟ್ಟೆಸಮಿತಿ ಆವರಣದ ಕೃಷಿ ಇಲಾಖೆ ಹಿಂಭಾಗದ ಹೂವಿನ ಮಾರುಕಟ್ಟೆಪ್ರದೇಶದಲ್ಲಿ ನಿತ್ಯವೂ ರೈತರು ತಾವು ಬೆಳೆದ ಹೂವುಗಳನ್ನ ಮಾರಾಟಕ್ಕೆ ತಂದರೆ, ಮಾರಾಟಗಾರರು ಖರೀದಿಸುತ್ತಾರೆ. ಇಂತಹ ಜನರಿಗೆ ಕೆಲ ಪುಡಿ ರೌಡಿಗಳು, ಪುಡಾರಿಗಳು ಚಾಕು ತೋರಿಸಿ, ಹಲ್ಲೆ ಮಾಡಿ, ಬೆದರಿಸಿ, ಹೆದರಿಸಿ, ದೌರ್ಜನ್ಯ ಎಸಗಿ, ಹಣ ಕಿತ್ತುಕೊಳ್ಳುತ್ತಿರುವವರನ್ನು ಹಿಡಿದು, ಕಾನೂನು ಕ್ರಮ ಜರುಗಿಸಲು ಘೋಷಣೆ ಕೂಗಿದರು.
2.5 ಕೋಟಿ ವಸೂಲಿ ಮಾಡಿ ರೈಲು ಎಣಿಸುವ ಕೆಲಸ ನೀಡಿದ ವಂಚಕರು...!
ಇದೇ ವೇಳೆ ಮಾತನಾಡಿದ ರೈತರು, ವ್ಯಾಪಾರಸ್ಥರು, ಭಾರತ ಕಾಲನಿಯ ಕೃಷಿ ಇಲಾಖೆ ಹಿಂಭಾಗದ ಹೂವಿನ ಮಾರುಕಟ್ಟೆಗೆ ರೈತರು ತಾವು ಬೆಳೆದ ಹೂವುಗಳನ್ನು ಮಾರಾಟಕ್ಕೆ ತರುತ್ತಾರೆ. ಹೀಗೆ ಬಂದ ರೈತರು, ಹೂವಿನ ವ್ಯಾಪಾರಸ್ಥರ ಮೇಲೆ ಕೆಲ ಕಿಡಿಗೇಡಿಗಳು ದೌರ್ಜನ್ಯ ಎಸಗಿ, ಹಣ ಕಿತ್ತುಕೊಳ್ಳುತ್ತಿದ್ದಾರೆ. ಹೂವಿನ ಮಾರುಕಟ್ಟೆಯಲ್ಲಿ ರೈತರು, ವ್ಯಾಪಾರಸ್ಥರಿಗೆ ರಕ್ಷಣೆಯೇ ಇಲ್ಲ ಎಂದು ದೂರಿದರು.
ನಿತ್ಯವೂ ಇಂತಹ ಪುಡಿ, ಮರಿ ರೌಡಿಗಳ ಗೂಂಡಾಗಿರಿಯಿಂದಾಗಿ ಬೇಸತ್ತಿದ್ದೇವೆ. ಇದೇ ಕಾರಣಕ್ಕೆ ಹೂವಿನ ಮಾರುಕಟ್ಟೆಯಿಂದ ತಹಸೀಲ್ದಾರ್ ಕಚೇರಿ ಬಳಿ ಬಂದು, ರಸ್ತೆ ತಡೆ ಮಾಡಿ ಪ್ರತಿಭಟಿಸುತ್ತಿದ್ದೇವೆ. ನಮಗೆ ಸೂಕ್ತ ರಕ್ಷಣೆ, ಭದ್ರತೆ ಕಲ್ಪಿಸುವ ಜೊತೆಗೆ ರೌಡಿಗಳಿಂದ ಆಗುತ್ತಿರುವ ಕಿರುಕುಳ ತಪ್ಪಿಸಬೇಕು ಎಂಬುದಾಗಿ ಹೂವು ಬೆಳೆಗಾರ ರೈತರು, ಹೂವಿನ ವ್ಯಾಪಾರಸ್ಥರು ಪಟ್ಟು ಹಿಡಿದರು. ಸ್ಥಳಕ್ಕೆ ವೃತ್ತ ನಿರೀಕ್ಷಕ ಗಜೇಂದ್ರಪ್ಪ, ಆರ್‌ಎಂಸಿ ಯಾರ್ಡ್ ಹಾಗೂ ಕೆಟಿಜೆ ನಗರದ ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿ ಧಾವಿಸಿ, ರೈತರು, ಹೂವಿನ ಮಾರಾಟಗಾರರ ಮನವೊಲಿಸಿ, ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.
ಹಫ್ತಾ ವಸೂಲಿಗೆ ಅಂಗಡಿ ಮಾಲಿಕನ ಮೇಲೆ ಮಚ್ಚು ಬೀಸಿದ್ದವ ಸೆರೆ
ಪೊಲೀಸರ ಭರವಸೆ ಬಳಿಕ ರೈತರ ಪಟ್ಟು ಸಡಿಲು
ಹೂವಿನ ಮಾರುಕಟ್ಟೆಯನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ರೌಡಿಗಳನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳದ ಹೊರತು, ತಾವು ಸ್ಥಳ ಬಿಟ್ಟು ಕದಲುವುದಿಲ್ಲ. ಹೋರಾಟದಿಂದ ಹಿಂದೆ ಸರಿಯುವುದಿಲ್ಲವೆಂದು ರೈತರು ಪಟ್ಟು ಹಿಡಿದರು. ನಂತರ ಪೊಲೀಸ್ ಅಧಿಕಾರಿಗಳು ಹೂವಿನ ಮಾರುಕಟ್ಟೆಗೆ ಪೊಲೀಸ್ ಗಸ್ತು ಕಲ್ಪಿಸುವ ಜೊತೆಗೆ ಅಂತಹ ಕಿಡಿಗೇಡಿಗಳ ಉಪಟಳದಿಂದ ಮುಕ್ತಿ ಕೊಡಿಸುವುದಾಗಿ ಭರವಸೆ ನೀಡಿದ ನಂತರವಷ್ಟೇ ರೈತರು ಪಟ್ಟು ಸಡಿಲಿಸಿದರು.