Bengaluru: ಬೂಸ್ಟರ್‌ ಡೋಸ್‌ಗೆ ಹೆಚ್ಚಿದ ಬೇಡಿಕೆ: ಕೋವಿಶೀಲ್ಡ್‌ಗಾಗಿ ಕೇಂದ್ರಕ್ಕೆ ಮನವಿ

By Govindaraj S  |  First Published Dec 24, 2022, 8:42 AM IST

ಕೊರೋನಾ ಸೋಂಕು ಮತ್ತೆ ಹರಡುವ ಭೀತಿಯ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೂಸ್ಟರ್‌ ಡೋಸ್‌ ನೀಡಲು ಸಕಾಲಕ್ಕೆ ಲಸಿಕೆ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು. 


ಬೆಂಗಳೂರು (ಡಿ.24): ಕೊರೋನಾ ಸೋಂಕು ಮತ್ತೆ ಹರಡುವ ಭೀತಿಯ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಬೂಸ್ಟರ್‌ ಡೋಸ್‌ ನೀಡಲು ಸಕಾಲಕ್ಕೆ ಲಸಿಕೆ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೂಸ್ಟರ್‌ ಡೋಸ್‌ಗೆ ಬೇಡಿಕೆ ಬರುತ್ತಿದೆ. ಪ್ರಮುಖವಾಗಿ ಕೋವಿಶೀಲ್ಡ್‌ ಲಸಿಕೆ ಹೆಚ್ಚಿನ ಮಂದಿಗೆ ನೀಡಬೇಕಾಗಿದೆ. ಪ್ರಸ್ತುತ ಬೆಂಗಳೂರು ನಗರದಲ್ಲಿ 9ರಿಂದ 10 ಲಕ್ಷ ಮಂದಿ ಕೋವ್ಯಾಕ್ಸಿನ್‌ ಪಡೆದಿದ್ದಾರೆ. 

ಉಳಿದ ಬಹುತೇಕರು ಎರಡು ಡೋಸ್‌ ಕೋವಿಶೀಲ್ಡ್‌ ಪಡೆದಿರುವುದರಿಂದ ಈ ಲಸಿಕೆಗೆ ಬೇಡಿಕೆ ಬರುತ್ತಿದೆ. ಕೋವಿಶೀಲ್ಡ್‌ ಕೊರತೆ ಇದೆ. ಹೀಗಾಗಿ, ಕೋವಿಶೀಲ್ಡ್‌ ಲಸಿಕೆಯನ್ನು ಪೂರೈಕೆ ಮಾಡುವಂತೆ ಸರ್ಕಾರಕ್ಕೆ ಕೋರಲಾಗಿದೆ ಎಂದರು. ಕೋವಿಶೀಲ್ಡ್‌ ಪಡೆದವರಲ್ಲಿ ಬೂಸ್ಟರ್‌ ಡೋಸ್‌ಗೆ ಅರ್ಹವಾಗಿರುವವರ ಲೆಕ್ಕ ಪಾಲಿಕೆಯಲ್ಲಿ ಇದೆ. ಪ್ರಸ್ತುತ 60ರ ಮೇಲ್ಪಟ್ಟವರಿಗೆ ಮಾತ್ರ ಬೂಸ್ಟರ್‌ ಡೋಸ್‌ ನೀಡಲಾಗುತ್ತಿದೆ. ಎರಡು ಡೋಸ್‌ ಪಡೆದಿರುವ ಇತರೆ ವಯಸ್ಸಿನವರೂ ಮುಂಜಾಗ್ರತೆಯಾಗಿ ಬೂಸ್ಟರ್‌ ಡೋಸ್‌ ಪಡೆದುಕೊಳ್ಳಬೇಕು ಎಂದರು.

Tap to resize

Latest Videos

undefined

Bengaluru: ಖಾಸಗಿ ಶಾಲೆಗಳಲ್ಲಿ ಕೊರೋನಾ ಮಾರ್ಗಸೂಚಿ ಪಾಲನೆಗೆ ಸೂಚನೆ

ಎಷ್ಟು ಮಂದಿ ಎರಡು ಡೋಸ್‌ ಲಸಿಕೆ ಪಡೆದಿದ್ದಾರೆ ಎಂಬ ಮಾಹಿತಿ ಬಿಬಿಎಂಪಿಯಲ್ಲಿ ಇರುವುದರಿಂದ ಮೂರನೇ ಡೋಸ್‌ ಪಡೆಯಲು ಅವರನ್ನು ಸಂಪರ್ಕಿಸಲಾಗುವುದು ಎಂದರು. ಬಿಬಿಎಂಪಿಯಲ್ಲಿ ಕೋವ್ಯಾಕ್ಸಿನ್‌ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿದ್ದು, ಜನವರಿ ವೇಳೆಗೆ ಅದರ ಅವಧಿ ಮುಗಿಯಲಿದೆ. ಅದನ್ನು ವಾಪಸ್‌ ಕಳಿಸುತ್ತೇವೆ ಎಂದು ಹೇಳಿದ ಅವರು, ಹೊಸದಾಗಿ ಕೋವ್ಯಾಕ್ಸಿನ್‌ ಹಾಗೂ ಕೋವಿಶೀಲ್ಡ್‌ ಲಸಿಕೆಯನ್ನು ಪೂರೈಕೆ ಮಾಡಿದಲ್ಲಿ ಎಲ್ಲ ಆಸ್ಪತ್ರೆಗಳಲ್ಲಿ ಬೂಸ್ಟರ್‌ ಡೋಸ್‌ ನೀಡಲು ಸಹಕಾರಿಯಾಗಲಿದೆ ಎಂದರು.

ಕೋವಿಡ್‌ ಎದುರಿಸಲು ಡಿ.27ರಂದು ತಾಲೀಮು: ಸಚಿವ ಸುಧಾಕರ್‌

ಆಸ್ಪತ್ರೆಗಳಿಗೆ ಸಂಖ್ಯೆ ಹೆಚ್ಚಳ, ಪಾಸಿಟಿವಿಟಿ ಯಥಾಸ್ಥಿತಿ: ನಗರದಲ್ಲಿ ಪಾಸಿಟಿವಿಟಿ ಪ್ರಮಾಣ ಹೆಚ್ಚಾಗಿಲ್ಲ, ಆದರೆ, ಆಸ್ಪತ್ರೆಗಳಿಗೆ ಭೇಟಿ ನೀಡುವವರ ಸಂಖ್ಯೆ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ರೋಗ ಲಕ್ಷಣಗಳು ಬಹಳ ಪ್ರಾಥಮಿಕ ಹಂತದಲ್ಲಿದೆ. ಯಾವ ರೀತಿಯ ಔಷಧಿ ನೀಡಬೇಕು ಎಂಬ ಬಗ್ಗೆ ಕೂಡ ಚರ್ಚೆ ನಡೆಸಲಾಗಿದ್ದು, ಕಳೆದ ಮೂರು ಅಲೆಯಲ್ಲಿ ಮಾಡಿರುವ ವ್ಯವಸ್ಥೆಯನ್ನೇ ಹಂತ ಹಂತವಾಗಿ ಪರಿಸ್ಥಿತಿಗೆ ತಕ್ಕ ಹಾಗೆ ಮುಂದುವರೆಸಲಾಗುವುದು ಎಂದು ತಿಳಿಸಿದರು. ಖಾಸಗಿ ಆಸ್ಪತ್ರೆ, ಮೆಡಿಕಲ್‌ ಕಾಲೇಜುಗಳ ಜೊತೆ ಸಭೆ ನಡೆಸಲಾಗಿದ್ದು, ಐಸಿಯು ಹಾಸಿಗೆಗಳ ವ್ಯವಸ್ಥೆ ಹಾಗೂ ಆಕ್ಸಿಜನ್‌ ಘಟಕಗಳ ನಿರ್ಮಾಣ ಎಲ್ಲೆಲ್ಲಿ ಆಗಿತ್ತು ಅವುಗಳ ಇಂದಿನ ಪರಿಸ್ಥಿತಿ ಹೇಗಿದೆ ಎಲ್ಲವನ್ನು ಚರ್ಚೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

click me!