ನಾಡು, ನುಡಿ ಅಭಿಮಾನದಿಂದ ಮಾತ್ರ ನಾವುಗಳು ಒಂದಾಗಿ ಉಳಿಯಲು ಸಾಧ್ಯ.ಅಭಿಮಾನ ಕಳೆದುಕೊಂಡಾಗ ನಮ್ಮತನದ ಅಸ್ತಿತ್ವವೂ ಹೋಗಿ ನಾವು ಕೂಡ ಇದ್ದು ಇಲ್ಲದ ಜೀವಂತ ಶವಗಳಂತಾಗಿ ಬಿಡುತ್ತೇವೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ಕ್ಕಮಗಳೂರು (ಡಿ.24) : ನಾಡು, ನುಡಿ ಅಭಿಮಾನದಿಂದ ಮಾತ್ರ ನಾವುಗಳು ಒಂದಾಗಿ ಉಳಿಯಲು ಸಾಧ್ಯ.ಅಭಿಮಾನ ಕಳೆದುಕೊಂಡಾಗ ನಮ್ಮತನದ ಅಸ್ತಿತ್ವವೂ ಹೋಗಿ ನಾವು ಕೂಡ ಇದ್ದು ಇಲ್ಲದ ಜೀವಂತ ಶವಗಳಂತಾಗಿ ಬಿಡುತ್ತೇವೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ಹಾವೇರಿಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶುಕ್ರವಾರ ನಗರಕ್ಕೆ ಆಗಮಿಸಿದ ಕನ್ನಡ ರಥದ ಮೆರವಣಿಗೆಗೆ ಪುಷ್ಪಾರ್ಚನೆ ಮಾಡಿ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಇಟಲಿ ಕಾಂಗ್ರೆಸ್ ನಾಯಿ ಭಾರತ ಪರ ಬೊಗಳಿಲ್ಲ, ಚೀನಾ- ಪಾಕ್ ಪರ ಬೊಗಳುತ್ತೆ: ಸಿ.ಟಿ.ರವಿ
ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ನಮ್ಮ ಮಾತೃಭಾಷೆ ಕನ್ನಡ. ನಾವೆಂದಿಗೂ ದುರಭಿಮಾನಿಗಳಾಗಲಿಲ್ಲ. ಅಭಿಮಾನದಿಂದ ಬೇರೆಯವರು ಕೂಡ ಕನ್ನಡದ ಬಗ್ಗೆ ಆಸಕ್ತಿ ತಳೆಯುವಂತೆ ಮಾಡಿದವರು. ಕನ್ನಡಕ್ಕೆ ಕೊಟ್ಟಆದ್ಯತೆಯನ್ನು ಸಹೋದರ ಭಾಷೆಗಳಿಗೂ ಕೊಟ್ಟಿರುವುದು ನಮ್ಮ ವಿಶಾಲ ಭಾವನೆಗೆ ಹಿಡಿದ ಕೈಗನ್ನಡಿ. ಅದನ್ನು ಯಾರೂ ದುರುಪಯೋಗ ಪಡಿಸಿಕೊಳ್ಳಬಾರದು ಎಂದರು.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಅದು ನಮ್ಮ ಮನ ಮತ್ತು ಮನೆಗಳಲ್ಲಿ ಮತ್ತೆ ಮತ್ತೆ ವಿಜೃಂಭಿಸಲಿ. ಹಾವೇರಿಯಲ್ಲಿ ನಡೆಯುವ ಸಮ್ಮೇಳನ ಯುಗಾನುಕೂಲ ಆಗಿರುವ ಸಂದರ್ಭದ ಸಾಕ್ಷಿಯಾಗಿ ಇಂದಿನ ಕಾಲಘಟ್ಟದಲ್ಲಿ ಕನ್ನಡವನ್ನು ಹೇಗೆ ಉಳಿಸಿಕೊಳ್ಳಬೇಕೆಂಬುದಕ್ಕೆ ಚಿಂತನ ಮಂಥನದ ಮೂಲಕ ತಾಯಿ ಭಾರತಿಯ ಮಗಳಾಗಿರುವ ಕನ್ನಡತಾಯಿ ಭುವನೇಶ್ವರಿ ಭುವನದ ಉದ್ದಗಲಕ್ಕೆ ತನ್ನ ಪ್ರಭಾವ ಪಸರಿಸುವಂತೆ ಆ ಕನ್ನಡ ಸಾಹಿತ್ಯ ಜಾತ್ರೆ ಯಶಸ್ವಿಯಾಗಲಿ ಎಂದರು.
ಜ.6ರಿಂದ 8 ರವರೆಗೆ ನಡೆಯಲಿರುವ ಸಮ್ಮೇಳನದ ಹಿನ್ನೆಲೆಯಲ್ಲಿ ಕನ್ನಡದ ತೇರನ್ನು ಊರೂ ಊರಿಗೆ ಕೊಂಡೊಯ್ದು ಮನೆ ಮತ್ತು ಮನಗಳಲ್ಲಿ ಪ್ರತಿಷ್ಠಾಪಿಸಲು ತಾಯಿ ಭುವನೇಶ್ವರಿ ರಥ ಚಿಕ್ಕಮಗಳೂರಿಗೆ ಬಂದಾಗ ಕಾಫಿನಾಡಿನ ಜನರು ಆನಂದದಿಂದ ಸ್ವಾಗತಿಸಿದ್ದೀರಿ ಎಂದು ಹೇಳಿದರು.
ಚಿಕ್ಕಮಗಳೂರಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕೆಂದು ಸಾಹಿತ್ಯಾಸಕ್ತರು ಅಪೇಕ್ಷಿಸಿದ್ದೀರಿ. ಈ ಸಂಬಂಧ ಎರಡು ಕಡೆ ನಿರ್ಣಯ ಆಗಬೇಕಿದೆ. ಸಾಹಿತ್ಯ ಸಮ್ಮೇಳನದ ಕಾರ್ಯಕಾರಿ ಸಮಿತಿ ವೇದಿಕೆಯಲ್ಲಿ ನಿರ್ಣಯ ಮಾಡಿಸುವುದು ಕಸಾಪಗೆ ಬಿಟ್ಟಿದ್ದು. ಸರ್ಕಾರದ ಕಡೆಯಿಂದ ಅದಕ್ಕೆ ಪೂರಕವಾದ ಸಹಕಾರ ನೀಡುವುದು ನಮ್ಮ ಜವಾಬ್ದಾರಿ. ಓರ್ವ ಆತಿಥೇಯರಾಗಿ ಅತಿಥಿಗಳನ್ನು ದೇವರಂತೆ ನೋಡಿಕೊಂಡು ಅವರಿಗೆ ಇಲ್ಲಿ ಕನ್ನಡದ ಕಂಪನ್ನು ಮತ್ತೆ ವಿಜೃಂಭಿಸುವಂತೆ ಮಾಡಲು ಸದಾಕಾಲ ನಾವು ಮುನ್ನೆಲೆಯಲ್ಲಿರುತ್ತೇವೆ ಎಂದರು.
ಚಿಕ್ಕಮಗಳೂರು ಉಪವಿಭಾಗಾಧಿಕಾರಿ ರಾಜೇಶ್, ವಕೀಲ ಎಸ್.ಎಸ್. ವೆಂಕಟೇಶ್, ಮಂಜುನಾಥ ಕಾಮತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಡಾ. ಸಿ.ರಮೇಶ್, ತಾಲೂಕು ಅಧ್ಯಕ್ಷ ಸೋಮಶೇಖರ್, ಇಮ್ರಾನ್ ಅಹಮದ್ ಬೇಗ್, ರೂಪಾ ನಾಯಕ್, ರವಿ ದಳವಾಯಿ, ಗಿರಿಧರ್ ಯತೀಶ್, ಕಾಂತರಾಜ್, ಅರವಿಂದ್ ದೀಕ್ಷಿತ್ ಇದ್ದರು.
ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಚಿಕ್ಕಮಗಳೂರು ಗಡಿ ಭಾಗ ಹಲ್ಮಿಡಿಯಲ್ಲಿ ಸಾಹಿತ್ಯ ರಥವನ್ನು ಸ್ವಾಗತಿಸಿದ್ದು ನಗರದಲ್ಲಿ ಮೆರವಣಿಗೆ ನಂತರ ಸಖರಾಯಪಟ್ಟಣ, ಕಡೂರು, ಬೀರೂರು, ತರೀಕೆರೆ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಸಂಜೆ ಭದ್ರಾವತಿಯಲ್ಲಿ ಬೀಳ್ಕೊಡಲಾಗುವುದು ಎಂದರು.
ನಗರದ ತಾಲೂಕು ಕಚೇರಿಯಿಂದ ಮಹಿಳೆಯರ ಪೂರ್ಣಕುಂಭ ಸ್ವಾಗತದೊಂದಿಗೆ ಹೊರಟ ಮೆರವಣಿಗೆಯಲ್ಲಿ ವೀರಗಾಸೆ ನೃತ್ಯ, ತಮಟೆವಾದ್ಯ, ವಿವಿಧ ಸಾಂಸ್ಕೃತಿಕ ಕಲಾ ತಂಡಗಳು, ವಿದ್ಯಾರ್ಥಿಗಳು, ಶಿಕ್ಷಕರು, ಸಾಹಿತಿಗಳು ಭಾಗವಹಿಸಿ ಮೆರಗು ನೀಡಿದರು.
Chikkamagaluru: ನಗರಾಭಿವೃದ್ಧಿಗೆ 60 ಕೋಟಿ ವಿಶೇಷ ಅನುದಾನ ಬಿಡುಗಡೆ: ಶಾಸಕ ಸಿ.ಟಿ.ರವಿ
ಪತ್ರಕರ್ತ ಸ.ಗಿರಿಜಾಶಂಕರ ಮಾತನಾಡಿ, ಹಾವೇರಿಯಲ್ಲಿ ನಡೆಯುವ ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನ ಬಹಳ ವಿಜೃಂಭಣೆಯಿಂದ ನಡೆಯುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಹಾಗಾಗಿ ಶಾಸಕ ಸಿ.ಟಿ.ರವಿ, ಕಸಾಪ ಅಧ್ಯಕ್ಷ ನಾಡೋಜ ಮಹೇಶ್‌ಜೋಷಿ ಯವರಲ್ಲಿ ಒಂದು ಮನವಿ ಎಂದರೆ ಮುಂದಿನ ಅಖಿಲ ಭಾರತ ಸಮ್ಮೇಳನವನ್ನು ಚಿಕ್ಕಮಗಳೂರು ನಗರದಲ್ಲಿ ನಡೆಸಲು ಅವಕಾಶ ಮಾಡಿಕೊಡಿ. ಪುತಿನಾ ಅವರು ಅಧ್ಯಕ್ಷರಾಗಿದ್ದಾಗ ಚಿಕ್ಕಮಗಳೂರಿನಲ್ಲಿ ನಡೆದಂತಹ ಸಮ್ಮೇಳನ ಬಿಟ್ಟರೆ ಮತ್ತೆ ಸಾಹಿತ್ಯ ಜಾತ್ರೆ ನಡೆಸಲು ಸಾಧ್ಯವಾಗಿಲ್ಲ ಹಾಗಾಗಿ ನಗರದಲ್ಲಿ ಬೃಹತ್ ಹಾಗೂ ಭವ್ಯವಾದ ಸಮ್ಮೇಳನ ನಡೆಸಿ ಕನ್ನಡ ಶಕ್ತಿಯನ್ನು ಮತ್ತಷ್ಟುಜಾಗೃತ ಗೊಳಿಸಲು ನಾವೆಲ್ಲಾ ಸೇರಬೇಕು. ಮುಂದೆ ನಡೆಯುವ ಜಿಲ್ಲಾ ಕಸಾಪ ಸಭೆಯಲ್ಲಿ ಅಧ್ಯಕ್ಷ ಸೂರಿ ಶ್ರೀನಿವಾಸ್ ಅವರು ಈ ವಿಚಾರವನ್ನು ಮಂಡಿಸಿ ಇಲ್ಲಿ ಕ್ರಿಯಾಶೀಲವಾದ ಸಾಹಿತ್ಯಾಭಿಮಾನಿಗಳ, ಶಾಸಕರ ಬಳಗವಿದ್ದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವ ಶಕ್ತಿ ಇದೆ ಎಂದು ಹೇಳಿದರು.