
ಮೈಸೂರು(ಡಿ.28): ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಹೋರಾಟ ಯಾರಿಗೂ ಪ್ರತಿಷ್ಠೆಯಲ್ಲ, ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲ ಕೂಡ ಇದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುರುಬ ಸಮುದಾಯ ಎಸ್ಟಿಗೆ ಸೇರಿಸುವ ಹೋರಾಟಕ್ಕೆ ಈಗಾಗಲೇ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದೇನೆ. ಅವರು ನಮ್ಮ ಜೊತೆಗೆ ಇದ್ದಾರೆ. ಸಮುದಾಯವನ್ನು ಎಸ್ಟಿಗೆ ಸೇರಿಸುವ ವಿಚಾರದಲ್ಲಿ ಎಲ್ಲಾ ಸಂಘಟನೆ, ಪಕ್ಷಗಳ ಬೆಂಬಲ ಕೇಳಿದ್ದೇವೆ. ಅದರಲ್ಲಿ ಆರ್‌ಎಸ್‌ಎಸ್ ಕೂಡ ಇದೆ ಎಂದರು.
ವಿಶ್ವನಾಥ್ ಪೆದ್ದನೋ, ಜಾಣನೋ ಗೊತ್ತಿಲ್ಲ: ಸಿದ್ದು
ದೇಶದಲ್ಲಿ ಆರ್‌ಎಸ್‌ಎಸ್ ಸಂಘಟನೆಯನ್ನು ನಿಷೇಧಿಸಿದ್ದಾರಾ? ಆರ್‌ಎಸ್‌ಎಸ್ ಮೈಲಿಗೆ ಎಂದುಕೊಳ್ಳುವುದು ಏಕೆ? ಆರ್‌ಎಸ್‌ಎಸ್, ಯೂತ್ ಕಾಂಗ್ರೆಸ್, ಯುವ ಜೆಡಿಎಸ್, ಯುವ ಮೋರ್ಚಾದ ಪದಾಧಿಕಾರಿಗಳು ಸೇರಿ ಎಲ್ಲರ ಬೆಂಬಲ ಬೇಕಿದೆ. ಆದರೆ, ಬರೀ ಆರ್‌ಎಸ್‌ಎಸ್ ಕುರಿತು ಮಾತನಾಡುವುದು ಸರಿಯಲ್ಲ ಎಂದರು.
ರಾಜ್ಯ ಸರ್ಕಾರ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಪ್ರಸ್ತಾವನೆಯಲ್ಲಿಟ್ಟು ಶಿಫಾರಸು ಮಾಡಬೇಕು. ಕೇಂದ್ರ ಸರ್ಕಾರ ಇಡೀ ಸಮುದಾಯವನ್ನು ಪ.ಪಂಗಡಕ್ಕೆ ಸೇರಿಸಬೇಕು. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ, ಜನತಂತ್ರ ವ್ಯವಸ್ಥೆಯಲ್ಲಿ ಜನರ ಒತ್ತಡ ಇಲ್ಲದೇ ಹೋದರೆ ಏನೂ ಸಿಗುವುದಿಲ್ಲ. ಹೀಗಾಗಿ ಹೋರಾಟ ಅನಿವಾರ್ಯ ಎಂದು ತಿಳಿಸಿದರು.