ಕೊಪ್ಪಳ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅದು ಯಾವ ಅರ್ಥದಲ್ಲಿ ಕೊಪ್ಪಳ ರೈತರ ಬಗ್ಗೆ ಮಾತನಾಡಿದ್ದರೋ ಗೊತ್ತಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಜನ ಅತಿರೇಕದಿಂದ ವರ್ತಿಸಿದ್ದಾರೆ. ಈ ಕೆಟ್ಟ ಪದಗಳ ಬಾಣದಿಂದ ತತ್ತರಿಸಿ ಹೋಗಿರುವ ಜೆಡಿಎಸ್ ಮುಖಂಡರು ಸೈಬರ್ ಅಪರಾಧ ವಿಭಾಗದ ಪೊಲೀಸರಿಗೆ ದೂರು ಸಹ ನೀಡಿದ್ದಾರೆ.
ಕೊಪ್ಪಳ[ಜು.31] ಕೊಪ್ಪಳ ರೈತ ಮುಖಂಡರ ಪ್ರತಿಭಟನೆ ಕುರಿತು ಸಿಎಂ ಕುಮಾರಸ್ವಾಮಿ ನೀಡಿದ್ದ ಹೇಳಿಕೆ ಇದೀಗ ಪ್ರತ್ಯೇಕ ರಾಜ್ಯದ ಕೂಗಿನವರೆಗೆ ಬಂದು ನಿಂತಿದೆ. ಒಂದು ಕಡೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬಾವುಟದ ಅನಾವರಣಕ್ಕೂ ಹೋರಾಟಗಾರರು ಮುಂದಾಗಿದ್ದಾರೆ. ಆದರೆ ಕುಮಾರಸ್ವಾಮಿ ಹೇಳಿಕೆ ಖಂಡಿಸಿ ಸೋಶಿಯಲ್ ಮೀಡಿಯಾದಲ್ಲಿ ನಡೆದ ಮತ್ತು ನಡೆಯುತ್ತಿರುವ ಚರ್ಚೆ ಹದ್ದು ಮೀರಿದ್ದು ಅಸಭ್ಯ ಪೋಸ್ಟ್ ಗಳು ರಾರಾಜಿಸುತ್ತಿವೆ.
ಕುಮಾರಸ್ವಾಮಿ ಚಾರಿತ್ರ್ಯ ಹರಣ ಮಾಡುವಂತಹ ಪೋಸ್ಟ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟವರ ವಿರುದ್ಧ ಕೊಪ್ಪಳದ ಜೆಡಿಎಸ್ ಮುಖಂಡರು ದೂರು ದಾಖಲಿಸಿದ್ದಾರೆ. ಸಿಎಂ ಕುಮಾರಸ್ವಾಮಿ ವಿರುದ್ಧ ಅಸಭ್ಯ ಪೋಸ್ಟ್ ಹಾಕಿದವರ ವಿರುದ್ಧ ದೂರು ನೀಡಲಾಗಿದೆ. ಕೊಪ್ಪಳದ ಜೆಡಿಎಸ್ ಮುಖಂಡ ವೀರೇಶ ಮಹಾಂತಯ್ಯನಮಠ ದೂರು ನೀಡಿದ್ದು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ: ಯಾಕೆ ಬೇಕು? ಯಾಕೆ ಬೇಡ?
ಕುಮಾರಸ್ವಾಮಿ ಅವರನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿರುವ ಸೋಶಿಯಲ್ ಮೀಡಿಯಾ ವೀರರು.. ನೀವು ಮೋದಿ ಬಳಿ ತೆರಳಿ ಸಾಲ ಮನ್ನಾ ಮಾಡಿ ಎಂದು ಕೇಳುತ್ತೀರಾ? ನೀವೇನು ಮೋದಿಗೆ ಓಟ್ ಹಾಕಿದ್ದೀರಾ? ಕೊಪ್ಪಳ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವ ಬದಲು ಇಲ್ಲಿನ ಬಿಜೆಪಿ ಅಭ್ಯರ್ಥಿಗಳಿಂದಲೇ ಕಿಕ್ ಬ್ಯಾಕ್ ಪಡೆದುಕೊಂಡಿದ್ದೀರಿ,, ನಿಮಗೆ ಎಲ್ಲಿ ನೈತಿಕತೆ ಇದೆ,, ಮತ್ತೆ ಮತ್ತೆ ಮಾತು ತಪ್ಪುತ್ತಿದ್ದೀರಿ.. ಎಂದು ಮುಂತಾದ ಪೋಸ್ಟ್ ಗಳನ್ನು ಮಾಡಿದ್ದಾರೆ. ಕೆಲವೊಂದು ಕಡೆ ಅವಾಚ್ಯ ಶಬ್ದಗಳಿಂದಲೂ ನಿಂದಿಸಿದ್ದಾರೆ.