ನೀವೆಲ್ಲಾ ಮನೆಗೆ ಹೋಗಬಹುದು : ಶಾಸಕ ಜಿ.ಟಿ. ದೇವೇಗೌಡ ಎಚ್ಚರಿಕೆ

Kannadaprabha News   | Asianet News
Published : Jul 28, 2021, 09:19 AM ISTUpdated : Jul 28, 2021, 09:46 AM IST
ನೀವೆಲ್ಲಾ ಮನೆಗೆ ಹೋಗಬಹುದು :  ಶಾಸಕ ಜಿ.ಟಿ. ದೇವೇಗೌಡ ಎಚ್ಚರಿಕೆ

ಸಾರಾಂಶ

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಎಚ್ಚರಿಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಜಿಟಿ ದೇವೇಗೌಡ ಯಾರಾದರೂ ಸಮಸ್ಯೆ ಹೇಳಿಕೊಂಡು ಬಂದರೆ ಸುಮ್ಮನೆ ಬಿಡಲ್ಲ

 ಮೈಸೂರು (ಜು.28):  ಕೆಲಸ ಮಾಡಲು ಆಗದ ಅಧಿಕಾರಿಗಳು ಮನೆಗೆ ಹೋಗಬಹುದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಮಂಗಳವಾರ ನಡೆದ ಮೈಸೂರು ತಾಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಪಂ ಪಿಡಿಒ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕೊರೋನಾ ಮೊದಲ ಅಲೆ ಮತ್ತು ಎರಡನೇ ಅಲೆ ಹಿನ್ನಲೆಯಲ್ಲಿ ಕ್ಷೇತ್ರದ ಹಳ್ಳಿಗಳಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಈಗ ಪರಿಸ್ಥಿತಿ ಸುಧಾರಿಸಿದೆ. ಗ್ರಾಪಂ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿರಬೇಕು. ಹಳ್ಳಿಗಳಿಗೆ ಭೇಟಿ ನೀಡಿದಾಗ ಯಾರಾದರೂ ಸಮಸ್ಯೆ ಹೇಳಿಕೊಂಡು ಬಂದರೆ ಸುಮ್ಮನೆ ಬಿಡಲ್ಲ ಎಂದು ಹೇಳಿದರು.

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ಯಾಕೆ? ಕಾರಣ ಕೊಟ್ಟ ಮಧು ಬಂಗಾರಪ್ಪ!

ಯಾವುದೇ ಗ್ರಾಮವು ಅಭಿವೃದ್ಧಿಯಾಗಲೂ ಗ್ರಾಮ ಪಂಚಾಯತಿ ಪಾತ್ರ ಹೆಚ್ಚಾಗಿರುತ್ತದೆ. ಈ ನಿಟ್ಟಿನಲ್ಲಿ ಅಲ್ಲಿನ ಸ್ಥಳೀಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಪ್ರತಿ ಗ್ರಾಮಗಳಲ್ಲೂ ಕುಡಿಯುವ ನೀರು, ಬೀದಿ ದೀಪದ ವ್ಯವಸ್ಥೆ, ಚರಂಡಿ ಸೌಲಭ್ಯ, ಅಂಗನವಾಡಿ, ಶಾಲೆ ಅಭಿವೃದ್ಧಿ, ಸ್ವಚ್ಛತೆ ಸೇರಿದಂತೆ ಅನೇಕ ಸೌಲಭ್ಯ ಸಮರ್ಪಕವಾಗಿ ಒದಗಿಸಬೇಕು ಎಂದು ಅವರು ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಆಯಾ ಗ್ರಾಮದ ಸರ್ಕಾರಿ ಜಾಗವುಜನರಿಗೆ ಉಪಯೋಗವಾಗುವಂತೆ ಕ್ರಮವಹಿಸಿ. ನಿವೇಶನ ಹಾಗೂ ವಸತಿರಹಿತ ಬಡವರಿಗೆ ವಾಸಿಸಲು ಅನುಕೂಲವಾಗುವಂತೆ ಕ್ರಮವಹಿಸಿ. ಗ್ರಾಮೀಣ ಭಾಗದ ಜನರ ಮೂಲ ಸೌಕರ್ಯಕ್ಕೆ ಹೆಚ್ಚಿನ ಗಮನಹರಿಸಿ ಎಂದು ಅವರು ಹೇಳಿದರು.

ಪಿಡಿಒ ಅಮಾನತುಗೊಳಿಸಿ:  ಈ ವೇಳೆ ಧನಗಳ್ಳಿ ಗ್ರಾಪಂ ಪಿಡಿಒ ಗೋಪಾಲಕೃಷ್ಣ ವಿರುದ್ಧ ಗ್ರಾಪಂ ಅಧ್ಯಕ್ಷೆ ಮಹಾಲಕ್ಷ್ಮಿ, ಉಪಾಧ್ಯಕ್ಷೆ ಲೀಲಾವತಿ ಅವರು ಹಲವು ಆರೋಪ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಗೋಪಾಲಕೃಷ್ಣ ಅವರು, ಕೊರೋನಾ ಇದ್ದುದ್ದರಿಂದ ಸಭೆ ನಡೆಸಿ ಮಾಹಿತಿ ನೀಡಿರಲಿಲ್ಲ ಎಂದು ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು.

ಇದಕ್ಕೆ ಕುಪಿತಗೊಂಡ ಶಾಸಕ ಜಿ.ಟಿ. ದೇವೇಗೌಡ ಅವರು, ಪಿಡಿಒ ಗೋಪಾಲಕೃಷ್ಣ ಅವರನ್ನು ತರಾಟೆ ತೆಗೆದುಕೊಂಡರು. ಏನು ತಿಳಿಯದ ಹೆಣ್ಣು ಮಕ್ಕಳು ಎಂದು ಈ ರೀತಿ ನಡೆದು ಕೊಳ್ಳುವುದೇ? ಕೂಡಲೇ ಇಂತಹ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ತಾಪಂ ಆಡಳಿತಾಧಿಕಾರಿಗೆ ಸೂಚಿಸಿದರು.

ಮೀಟರ್‌ ಅಳವಡಿಸಲು ಬಿಡುತ್ತಿಲ್ಲ:  ಜಲ ಜೀವನ್‌ ಮಿಷನ್‌ ಯೋಜನೆಯಲ್ಲಿ ಪ್ರತಿ ಮನೆಗೂ ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಸಲಾಗಿತ್ತು. ಆದರೆ, ಮನೆಗೆ ಮೀಟರ್‌ ಅಳವಡಿಸಲು ಬೀಡುತ್ತಿಲ್ಲ ಎಂದು ಆನಂದೂರು ಗ್ರಾಪಂ ಪಿಡಿಒ ಮಂಜುಳಾ ತಿಳಿಸಿದರು. ಈ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಯೋಜನೆಯ ಕಾಮಗಾರಿಯಿಂದ ಆಗಿರುವ ಲೋಪದೋಷಗಳನ್ನು ಸರಿಪಡಿಸಿ, ಸಮರ್ಪಕವಾಗಿ ಕಾಮಗಾರಿ ನಡೆಸುವಂತೆ ಗುತ್ತಿಗೆಗಾರಿಗೆ ಸೂಚನೆ ನೀಡಬೇಕು ಎಂದು ಶಾಸಕರು ಹೇಳಿದರು.

ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಎಂಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಹಾಗೂ ಅಪೆಕ್ಸ್‌ ಉಪಾಧ್ಯಕ್ಷ ಜಿ.ಡಿ. ಹರೀಶ್‌ಗೌಡ, ಜಿಪಂ ಸಿಇಒ ಎ.ಎಂ. ಯೋಗೀಶ್‌, ತಾಪಂ ಆಡಳಿತಾಧಿಕಾರಿ ಪ್ರೇಮ್‌ಕುಮಾರ್‌, ತಹಸೀಲ್ದಾರ್‌ ರಕ್ಷಿತ್‌ ಇದ್ದರು.

PREV
click me!

Recommended Stories

ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌