ಹುಬ್ಬಳ್ಳಿ (ಜು.28): ಶಿವಮೊಗ್ಗ ಜಿಲ್ಲೆಯ ಪ್ರಭಾವಿ ಯುವ ರಾಜಕಾರಣಿ ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಅವರ ಕಾಂಗ್ರೆಸ್ ಸೇರ್ಪಡೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ.
ಹುಬ್ಬಳ್ಳಿಯಲ್ಲಿ ಜು.30ರಂದು ನಡೆಯಲಿರುವ ಕಾಂಗ್ರೆಸ್ ಸಭೆಯಲ್ಲಿ ಅವರು ಪಕ್ಷ ಸೇರಲಿದ್ದಾರೆ. ಅಂದು ಬೆಳಗ್ಗೆ 9 ಗಂಟೆಗೆ ಪಕ್ಷದ ವಿಭಾಗಮಟ್ಟದ ಸಭೆ ನಡೆಯಲಿದ್ದು, ಈ ವೇಳೆ ಮಧು ಬಂಗಾರಪ್ಪ ಜತೆ ಅವರ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ಯಾಕೆ? ಕಾರಣ ಕೊಟ್ಟ ಮಧು ಬಂಗಾರಪ್ಪ!
ಗೋಕುಲ ಗಾರ್ಡನ್‌ನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ಲೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ. ಈ ಹಿಂದೆ ಶಿವಮೊಗ್ಗದಲ್ಲೇ ಬೃಹತ್ ಸಮಾವೇಶ ನಡೆಸಿ ಕಾಂಗ್ರೆಸ್ ಸೇರುವ ಉದ್ದೇಶವಿತ್ತು. ಆದರೆ ಕೋವಿಡ್ ಅಡ್ಡಿಯಾಗಿತ್ತು.
ಒಬಿಸಿ ಘಟಕದ ಅಧ್ಯಕ್ಷ ಸ್ಥಾನ : ಯುವಕರನ್ನು ಜೆಡಿಎಸ್‌ಗೆ ಸೆಳೆಯುವ ಮೂಲಕ ಶಿವಮೊಗ್ಗದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಮಧು ಬಂಗಾರಪ್ಪ ಅವರಿಗೆ ಕಾಂಗ್ರೆಸ್‌ನಲ್ಲಿ ಪ್ರಮುಖ ಜವಾಬ್ದಾರಿ ನೀಡಲು ಮುಖಂಡರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈಡಿಗ ಸಮುದಾಯಕ್ಕೆ ಸೇರಿದವರಾದ ಅವರಿಗೆ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆ.