Bengaluru: ಮಳೆಯ ನಡುವೆಯೂ ಅದ್ಧೂರಿ ಹೂವಿನ ಕರಗ

Published : Apr 17, 2022, 06:54 AM IST
Bengaluru: ಮಳೆಯ ನಡುವೆಯೂ ಅದ್ಧೂರಿ ಹೂವಿನ ಕರಗ

ಸಾರಾಂಶ

*  2 ವರ್ಷದ ಬಳಿಕ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆದ ಕರಗ *  ಭಾರಿ ಮಳೆಯ ನಡುವೆಯೂ ಧಾರ್ಮಿಕ ಕಾರ್ಯ *  ಮಹಾರಥದಲ್ಲಿ ಅರ್ಜುನ, ದ್ರೌಪದಿದೇವಿಯ ಉತ್ಸವ ಮೂರ್ತಿ ಮೆರವಣೆಗೆ  

ಬೆಂಗಳೂರು(ಏ.17):  ಎರಡು ವರ್ಷದ ಬಳಿಕ ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ(Bengaluru Karaga  Mahotsava) ಮಳೆರಾಯನ(Rain) ಅಡ್ಡಿಯ ನಡುವೆಯೂ ವಿಜೃಂಭಣೆಯಿಂದ ಜರುಗಿತು. ಶನಿವಾರ ತಡ ರಾತ್ರಿ ಧರ್ಮರಾಯ ದೇವಸ್ಥಾನದಿಂದ ಹೊರಟ ಹೂವಿನ ಕರಗಕ್ಕೆ ಅಪಾರ ಸಂಖ್ಯೆ ಭಕ್ತ ಸಮೂಹ ಸಾಕ್ಷಿ​ಯಾಯಿತು. ಕಳೆದ ಎರಡು ವರ್ಷ ಕೊರೋನಾ(Coronavirus) ಸೋಂಕಿನಿಂದ ಭೀತಿ ಹಿನ್ನೆಲೆಯಲ್ಲಿ ಧರ್ಮರಾಯ ಸ್ವಾಮಿ ದೇವಸ್ಥಾನದ ಆವರಣಕ್ಕೆ ಸೀಮಿತವಾಗಿದ್ದ ಕರಗ ಮಹೋತ್ಸವ ಈ ಬಾರಿ ಅದ್ಧೂರಿಯಿಂದ ಲಕ್ಷಾಂತರ ಭಕ್ತರ(Devotees) ಸಮ್ಮುಖದಲ್ಲಿ ನಡೆಯಿತು.

ಶನಿವಾರ ಸಂಜೆ ಸುರಿದ ಭಾರೀ ಮಳೆಯ ನಡುವೆಯೂ ದೇವಾಲಯದಲ್ಲಿ(Temple) ಧಾರ್ಮಿಕ ವಿಧಿ ವಿಧಾನಗಳು ಸಾಂಗವಾಗಿ ನಡೆದವು. ತಡರಾತ್ರಿ ಹೂ ಹಾಗೂ ತಳಿರು ತೋರ​ಣ​ದಿಂದ ಸಿಂಗಾ​ರ​ಗೊಂಡಿದ್ದ ಮಹಾ​ರ​ಥ​ದಲ್ಲಿ ಅರ್ಜುನ ಹಾಗೂ ದ್ರೌಪ​ದಿ​ದೇ​ವಿಯ ಉತ್ಸವ ಮೂರ್ತಿ​ಗ​ಳನ್ನು ಹಾಗೂ ಮುತ್ಯಾ​ಲಮ್ಮ ದೇವಿ​ಯನ್ನು ಹೊತ್ತ ರಥದೊಂದಿಗೆ ಉತ್ಸವ ಮೂರ್ತಿ​ಗಳು ಸಾಗಿದವು.

ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ: ದೇವಿಯ ದರ್ಶನ ಪಡೆಯಲು ಭಕ್ತರ ಕಾತುರ

ಶಕ್ತಿ ದೇವತೆ, ದ್ರೌಪದಿ ಕರಗ ಎಂಬ ಪ್ರಸಿದ್ಧಿಯ ಉತ್ಸವದಲ್ಲಿ ಕುಂಭದಲ್ಲಿ ದುರ್ಗೆಯನ್ನು ಆವಾಹಿಸಿ, ಪೂಜಿಸಿ, ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಮಧ್ಯರಾತ್ರಿ ವೇಳೆಗೆ ಹಳದಿ ಸೀರೆ, ಬಳೆ ತೊಟ್ಟಿದ್ದ ಶ್ರೀ ಧರ್ಮರಾಯ ದೇವಸ್ಥಾನದ ಅರ್ಚಕ ಜ್ಞಾನೇಂದ್ರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರ​ವೇ​ರಿ​ಸಿ​ ಮಲ್ಲಿಗೆ ಹೂವಿ​ನಿಂದ ಅಲಂಕೃ​ತ​ವಾ​ಗಿದ್ದ ಕರಗ ಹೊತ್ತು ದೇವಾ​ಲ​ಯ​ದಿಂದ ಹೊರ ಬಂದರು.

ದೇವ​ಸ್ಥಾ​ನಕ್ಕೆ ಮೂರು ಸುತ್ತು ಪ್ರದ​ಕ್ಷಿಣೆ ಹಾಕಿ, ಸಮೀ​ಪದ ಶಕ್ತಿ ಗಣ​ಪತಿ ಮತ್ತು ಮುತ್ಯಾ​ಲಮ್ಮದೇವಿ ದೇವ​ಸ್ಥಾ​ನ​ದ​ಲ್ಲಿ ಪೂಜೆ ಸ್ವೀಕ​ರಿ​ಸಿದರು. ಬಳಿಕ ನೂರಾರು ವೀರ ಕುಮಾ​ರರು ಹಾಗೂ ಸಹ​ಸ್ರಾರು ಭಕ್ತರ ನಡುವೆ ದರ್ಶನ ನೀಡುತ್ತ ನಗರ ಪ್ರದ​ಕ್ಷಿ​ಣೆಗೆ ಸಾಗಿದರು. ಕೈಯಲ್ಲಿ ಕತ್ತಿ ಹಿಡಿದಿದ್ದ ವೀರಕುಮಾರರು ಕರಗ ರಕ್ಷಣೆಗಾಗಿ ಹಿಂದೆ ಸಾಗಿದರು.

ಈ ವೇಳೆ ದರ್ಶ​ನ​ಕ್ಕಾಗಿ ಕಾಯು​ತ್ತಿದ್ದ ಭಕ್ತರು ದೇವರ ಮೇಲೆ ಹೂವಿನ ಮಳೆಗ​ರೆ​ದರು. ‘ಗೋ​ವಿಂದ ಗೋವಿಂದ’ ಎಂದು ನಾಮಸ್ಮರಣೆ ಮಾಡಿದರು. ಉತ್ಸ​ವ​ದಲ್ಲಿ ರಾಜ​ಕೀಯ ಮುಖಂಡರು, ಪಾಲಿಕೆ ಮಾಜಿ ಸದ​ಸ್ಯರು ಸೇರಿ​ ನಾನಾ ಕ್ಷೇತ್ರದ ಗಣ್ಯರು ಪಾಲ್ಗೊಂಡು ಕರಗ ದರ್ಶನ ಪಡೆದರು. ಮಳೆಯನ್ನೂ ಲೆಕ್ಕಿಸದೆ ಭಕ್ತರು ಕರಗದ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ಭಕ್ತಿ ಮೆರೆದರು. ಇನ್ನು ಕರಗ ಸಾಗಲು ದಾರಿಯುದ್ದಕ್ಕೂ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.

ನಗರದಲ್ಲಿ ಪಲ್ಲಕ್ಕಿ ಉತ್ಸವ

ಕರಗ ಶಕ್ತ್ರೋತ್ಸವ ಹಿನ್ನೆಲೆಯಲ್ಲಿ ಶನಿವಾರ ನಗರದ ನಾನಾ ಭಾಗಗಳಿಂದ ಪಲ್ಲಕ್ಕಿ ಉತ್ಸವ ಆರಂಭವಾಯಿತು. ಅಣ್ಣಮ್ಮ ದೇವಿ ಸೇರಿದಂತೆ ನಗರದ ಸುತ್ತಮುತ್ತಲ ದೇವಾಲಯಗಳಿಂದ ಉತ್ಸವ ಮೂರ್ತಿಗಳನ್ನು ಹೊತ್ತ ನೂರಾರು ರಥಗಳು ಕರಗ ಹೊರಡುವ ವೇಳೆಗೆ ಮಾರುಕಟ್ಟೆ ಪ್ರದೇಶ ತಲುಪಿದವು. ಕರಗವನ್ನು ಕಣ್ತುಂಬಿಕೊಳ್ಳಲು ಮುಂಜಾನೆಯಿಂದಲೇ ನಗರ ಸೇರಿದಂತೆ ನಾನಾ ಭಾಗಗಳಿಂದ ಲಕ್ಷಾಂತರ ಜನ ದೇವಸ್ಥಾನ ತಲುಪಿದ್ದರು. ಮಧ್ಯಾಹ್ನದಿಂದಲೇ ಪಲ್ಲಕ್ಕಿ ಉತ್ಸವ ಇದ್ದಿದ್ದರಿಂದ ಉತ್ಸವವು ಸಾಗುವ ದಾರಿಯುದ್ದಕ್ಕೂ ನೀರಡಿಕೆಯನ್ನು ತಣಿಸಲು ಪ್ರಮುಖ ಬೀದಿಗಳಲ್ಲಿ ಅರವಂಟಿಗೆಗಳನ್ನು ಸ್ಥಾಪಿಸಲಾಗಿತ್ತು. ಇದರ ಜತೆಗೆ ಅಲ್ಲಲ್ಲಿ ಮಜ್ಜಿಗೆ, ಪಾನಕ, ರಸಾಯನ ಮತ್ತು ಕೋಸಂಬರಿಯ ವಿತರಣೆ ಮಾಡಲಾಗುತ್ತಿತ್ತು. ಕೆಲವೆಡೆ ಅನ್ನದಾನವೂ ಇತ್ತು.

ವಿಜೃಂಭಣೆಯಿಂದ ನಡೆದ ಹಸಿ ಕರಗ ಉತ್ಸವ

ದಿನವಿಡಿ ಧಾರ್ಮಿಕ ಆಚರಣೆ

ಶನಿವಾರ ಮುಂಜಾನೆ ಅರ್ಚಕರು ಹಾಗೂ ವೀರಕುಮಾರರು ಎಂದಿನಂತೆ ಧರ್ಮರಾಯ ದೇವಸ್ಥಾನದಿಂದ ಕರಗದ ಕುಂಟೆಗೆ ಸಾಗಿ ಗಂಗೆ ಪೂಜೆ ಮಾಡಿ, ಅಲ್ಲಿಂದ ಸಂಪಂಗಿ ಕೆರೆಯ ಶಕ್ತಿ ಪೀಠದಲ್ಲಿ ಪೂಜೆ ಸಲ್ಲಿಸಿ ದೇವಸ್ಥಾನಕ್ಕೆ ಹಿಂದಿರುಗಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ದೇವಾಲಯದ ಮುಂದೆ ಹರಕೆ ಹೊತ್ತ ಭಕ್ತರು ರಾಶಿಗಟ್ಟಲೆ ಕರ್ಪೂರ ಉರಿಸಿದರು. ಮಧ್ಯಾಹ್ನ 3ಕ್ಕೆ ದೇವಾಲಯದಲ್ಲಿ(Temple) ಬಳೆತೊಡಿಸುವ ಶಾಸ್ತ್ರ ನೆರವೇರಿತು. ನಂತರ ಅರ್ಜುನ ಮತ್ತು ದ್ರೌಪದಿ ದೇವಿಗೆ ವಿವಾಹ ಶಾಸ್ತ್ರ ಮಾಡಲಾಯಿತು. ಸಂಜೆ ಶಾಂತಿ ಹೋಮ, ಗಣ ಹೋಮ ನಡೆಯಿತು. ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಲ್ಲಿ ಕರಗ ಉತ್ಸವ ಜರುಗಿತು.

ಕರಗ ಉತ್ಸವಕ್ಕೆ ಮಳೆ ಅಡ್ಡಿ

ಕಳೆದ ಎರಡು ವರ್ಷ ಕೊರೋನಾ ಸೋಂಕಿನಿಂದ ಕರಗ ಉತ್ಸವ ಕಣ್ತುಂಬಿಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಶನಿವಾರ ಸಂಜೆ ಸುರಿದ ಧಾರಾಕಾರ ಮಳೆ ಭಕ್ತರು ಆಗಮನಕ್ಕೆ ಸ್ವಲ್ಪಮಟ್ಟಿಗೆ ಕಡಿವಾಣ ಹಾಕಿತ್ತು.
 

PREV
Read more Articles on
click me!

Recommended Stories

ವಿಶ್ವ ಕನ್ನಡ ಹಬ್ಬ' ಹೆಸರಿನಲ್ಲಿ ಕೋಟಿ ಕೋಟಿ ವಂಚನೆ ಆರೋಪ: ಮಹಿಳೆಯರಿಗೆ ಪದವಿ ಆಮಿಷ; ಸರ್ಕಾರದ ₹40 ಲಕ್ಷ ದುರ್ಬಳಕೆ!
ವಿಭೂತಿಗಳಲ್ಲೇ ಐಕ್ಯರಾದ ಭಾರತದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ! ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ