ವಿವಾದಾತ್ಮಕ ಪೊಸ್ಟ್‌: ಹುಬ್ಬಳ್ಳಿಯಲ್ಲಿ ಗಲಾಟೆ, ಪರಿಸ್ಥಿತಿ ಉದ್ವಿಗ್ನ

By Girish Goudar  |  First Published Apr 17, 2022, 4:12 AM IST

*  144 ಸೆಕ್ಷನ್‌ ಜಾರಿಯಾಗಿದ್ದು, ದ್ವೇಷಮಯ ವಾತಾವರಣ ನಿರ್ಮಾಣ
*  ವಾಹನಗಳಿಗೆ ಕಲ್ಲು ತೂರಾಟ 
*  ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆಗೆ ರಾತ್ರಿ ಮುತ್ತಿಗೆ 


ಹುಬ್ಬಳ್ಳಿ(ಏ.17):  ಫೇಸ್‌ಬುಕ್‌ನಲ್ಲಿ(Facebook) ವಿವಾದಾತ್ಮಕ ಪೋಸ್ಟ್‌ ಹಾಕಿರುವ ವಿಚಾರವಾಗಿ ಹಳೆ ಹುಬ್ಬಳ್ಳಿ ಪ್ರದೇಶದಲ್ಲಿ ಶನಿವಾರ ರಾತ್ರಿ ತೀವ್ರ ಹಿಂಸಾಚಾರ ಸಂಭವಿಸಿದೆ. ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿದ ಉದ್ರಿಕ್ತರ ಗುಂಪು, ಬಸ್ಸು ಹಾಗೂ ಮತ್ತಿತರ ವಾಹನಗಳಿಗೆ ಕಲ್ಲು ತೂರಾಟ ನಡೆಸಿದೆ. ಘಟನೆಯಲ್ಲಿ ಇನ್‌ಸ್ಪೆಕ್ಟರ್‌ ಸೇರಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ನಗರದಲ್ಲಿ 144 ಸೆಕ್ಷನ್‌ ಜಾರಿಯಾಗಿದ್ದು, ದ್ವೇಷಮಯ ವಾತಾವರಣ ಉಂಟಾಗಿದೆ.

ರಾಜ್ಯದಲ್ಲಿ(Karnataka) ಕಳೆದ ಮೂರು ತಿಂಗಳಿಂದ ಕೋಮು ದ್ವೇಷದ ಗಲಾಟೆ(Communal Violance) ನಡೆಯುತ್ತಿದ್ದರೂ ಶಾಂತವಾಗಿದ್ದ ಹುಬ್ಬಳ್ಳಿ(Hubballi) ಶನಿವಾರ ರಾತ್ರಿ ಇದೇ ಕಾರಣಕ್ಕೆ ಪ್ರಕ್ಷುಬ್ಧವಾಗಿದೆ. ತಡರಾತ್ರಿ 1ಗಂಟೆವರೆಗೂ ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆಯ ಹಿಂಬಾಗದ ಪ್ರದೇಶದಲ್ಲಿ ಮುಸಲ್ಮಾನರು(Muslim) ಕಲ್ಲುತೂರಾಟ ಪ್ರತಿಭಟನೆ ಮುಂದುವರಿಸಿದ್ದರು. ಒಂದು ಹಂತಕ್ಕೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದರೂ ನಗರ ಬೂದಿ ಮುಚ್ಚಿದ ಕೆಂಡವಾಗಿದೆ.

Tap to resize

Latest Videos

ಹುಬ್ಬಳ್ಳಿಯಲ್ಲಿ ಅರ್ಥಪೂರ್ಣ ಹನುಮಾನ್ ಜಯಂತಿ ಆಚರಣೆ

ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯ ಎದುರು ಕಾರವಾರ ರಸ್ತೆಯಲ್ಲಿ ಕಂಡ ಕಂಡ ವಾಹನಗಳಿಗೆ ಉದ್ರಿಕ್ತ ಜನರ ಗುಂಪು ಕಲ್ಲು ತೂರಾಟ ಮಾಡಿದರು. ಘಟನೆ ನಿಯಂತ್ರಣಕ್ಕಾಗಿ ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆಗೆ ಬರುತ್ತಿದ್ದ ಪೂರ್ವ ಸಂಚಾರಿ ಇನ್‌ಸ್ಪೆಕ್ಟರ್‌ ಕಾಡದೇವರಮಠ, ಕಾನ್‌ಸ್ಟೇಬಲ್‌ ಗುರುಪಾದಪ್ಪ ಸ್ವಾದಿ ಅವರ ಮೇಲೆ ಕಲ್ಲು ತೂರಾಟವಾಯಿತು. ಇಬ್ಬರೂ ಗಾಯಗೊಂಡಿದ್ದಾರೆ. ಕಾಡದೇವರಮಠ ಅವರನ್ನು ಸುಚಿರಾಯು ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲದೆ ಪೊಲೀಸ್‌ ಜೀಪನ್ನು ಅಡ್ಡಗೆಡವಿ ಧ್ವಂಸಗೊಳಿಸಿದ್ದಾರೆ. ಪ್ರತಿಭಟನೆ ವೇಳೆ ಮುಸ್ಲಿಂ ಮುಖಂಡ ಅಲ್ತಾಫ್‌ ಹಳ್ಳೂರ ಕೂಡ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಷ್ಟಕ್ಕೆ ನಿಲ್ಲದೆ, ದಿಡ್ಡಿ ಓಣಿಯ ಗುರವ ಆಸ್ಪತ್ರೆಯೊಳಗೆ ನುಗ್ಗಿದ ಗುಂಪು ಅದನ್ನು ಸಹ ಧ್ವಂಸಗೊಳಿಸಿದೆ ಎನ್ನಲಾಗಿದೆ. ಕಲ್ಲು ತೂರಾಟದಲ್ಲಿ ಮೂರು ಪೊಲೀಸ್‌(Police) ಜೀಪು, 10 ಸ್ಕೂಟರ್‌, ಬಸ್ಸು ಕಾರು ಸೇರಿ ಹಲವು ವಾಹನಗಳು ಜಖಂಗೊಂಡವು. ಪೊಲೀಸ್‌ ಠಾಣೆ, ಸನಿಹದ ಹಿಂದೂ ದೇಗುಲದ(Hindu Temple) ಮೇಲೆಯೂ ಕಲ್ಲು ಎಸೆಯಲಾಗಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು(Police) ಗುಂಪು ಚದುರಿಸಲು ಮುಂದಾದರು. ಪರಿಸ್ಥಿತಿ ನಿಯಂತ್ರಣಕ್ಕಾಗಿ ಲಾಠಿ ಪ್ರಹಾರ ನಡೆಸಿದರು. ಅದಕ್ಕೂ ಬಗ್ಗದಿದ್ದಾಗ ಅಶ್ರುವಾಯು ಸಿಡಿಸಿದರು. ಆಗ ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆ ಎದುರಿದ್ದ ಒಂದಿಷ್ಟುಉದ್ರಿಕ್ತರು ಹಿಂಬಾಗಕ್ಕೆ ಓಡಿಹೋಗಿದ್ದಾರೆ. ಕಾರವಾರ ರಸ್ತೆಯನ್ನು ಬಂದ್‌ ಮಾಡಿ ಸಂಚಾರ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಯಿತು. ಮುಂದುವರಿದು ಇಡಿ ನಗರಾದ್ಯಂತ ಪೊಲೀಸ್‌ ವಾಹನದ ಮೂಲಕ ಗಸ್ತು ತಿರುಗಿ 144 ಸೆಕ್ಷನ್‌ ಜಾರಿಯಾಗಿದ್ದು ಯಾವುದೆ ಕಾರಣಕ್ಕೂ ಅನಗತ್ಯ ಓಡಾಟ ಮಾಡದಂತೆ, ಒಬ್ಬರೇ ತಿರುಗಾಡದಂತೆ ಎಚ್ಚರಿಕೆ ನೀಡಿದರು.

ತಡಕೋಡದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ, ಗ್ರಾಮೀಣ ಜನರ ಸಮಸ್ಯೆಗಳಿಗೆ ಜಿಲ್ಲಾಡಳಿತದ ಸ್ಪಂದನೆ

ಪೊಲೀಸ್‌ ಆಯುಕ್ತ ಲಾಭುರಾಮ, ಡಿಸಿಪಿ ಸಾಹಿಲ್‌ ಬಾಗ್ಲಾ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಹೆಚ್ಚಿನ ಪೊಲೀಸ್‌ ಪಡೆಯೊಂದಿಗೆ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಮುಸಲ್ಮಾನ ಮುಖಂಡರನ್ನು ಕರೆದು ಸಮಾಧಾನ ಪಡಿಸಲು ಯತ್ನಿಸುತ್ತಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

ಆಗಿದ್ದೇನು?

ಹಳೆ ಹುಬ್ಬಳ್ಳಿಯ ನೇಕಾರ ನಗರ ಭಾಗದವನು ಎನ್ನಲಾದ ಯುವಕ ಇಸ್ಲಾಂ ಧರ್ಮದ ಮಸೀದದಿ ಮೇಲೆ ಕೇಸರಿ ಧ್ವಜ ಹಾರಿಸಿದ, ತಲೆ ಕೆಟ್ಟರೆ ಅಲ್ಲೂ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಫೋಟೋ ಎಡಿಟ್‌ ಮಾಡಿ ವಿವಾದಾತ್ಮಕ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾನೆ. ವಿಷಯ ತಿಳಿದ ಮುಸಲ್ಮಾನರು ಆತನನ್ನು ಬಂಧಿಸುವಂತೆ ಹಳೆ ಹುಬ್ಬಳ್ಳಿ ಪೊಲೀಸರಿಗೆ ತಿಳಿಸಿದ್ದಾರೆ. ಯುವಕನನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ಆದರೆ ಅಷ್ಟರಲ್ಲಿ ಈ ಸಂಗತಿ ಬಹಿರಂಗವಾಗಿದೆ. ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆಗೆ ರಾತ್ರಿ ಮುತ್ತಿಗೆ ಹಾಕಿತು. ಯುವಕನನ್ನು ಬಂಧಿಸಬೇಕು, ವಶಕ್ಕೆ ನೀಡಬೇಕೆಂದು ಆಗ್ರಹಿಸಿತು. ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ಹಳೇ ಹುಬ್ಬಳ್ಳಿ, ಹಾಗೂ ಇನ್ನಿತರ ಪ್ರದೇಶಕ್ಕೆ ಪ್ರತಿಭಟನೆ ವ್ಯಾಪಿಸಿತು.
 

click me!