ಪ್ರವಾಹದಿಂದಾಗಿ ಉಂಟಾಗಿರುವ ಬೆಳೆ ಹಾನಿಗೂ ಸರ್ಕಾರದಿಂದ ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ಜಮಖಂಡಿ (ಆ.04): ಪ್ರವಾಹದಿಂದಾಗಿ ಉಂಟಾಗಿರುವ ಬೆಳೆ ಹಾನಿಗೂ ಸರ್ಕಾರದಿಂದ ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು. ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಉಂಟಾಗಿರುವ ಬೆಳೆಹಾನಿ, ಮನೆಗಳ ಹಾನಿ ಮತ್ತು ಆಸ್ತಿ-ಪಾಸ್ತಿ ಹಾನಿ ಕುರಿತು ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ಪರಿಹಾರ ಘೋಷಿಸಲಾಗುವುದು ಎಂದರು.
ರೈತರ ಕಷ್ಟಗಳಿಗೆ ಸ್ಪಂದಿಸಲು ಸರ್ಕಾರ ಬದ್ಧವಾಗಿದೆ. ಪ್ರವಾಹ ಪರಿಸ್ಥಿತಿ ಮುಗಿದ ಮೇಲೆ ಸರ್ವೆ ಕಾರ್ಯ ನಡೆಸಲಾಗುವುದು ಮತ್ತು ಹಾನಿಗೊಳಗಾದ ಪ್ರದೇಶಗಳ ಸಮಗ್ರಮಾಹಿತಿ ಆಧರಿಸಿ ಪರಿಹಾರ ನೀಡಲಾಗುವುದು. ತಾಲೂಕಿನ 23 ಗ್ರಾಮಗಳಲ್ಲಿ ನೋಡಲ್ ಅಧಿಕಾರಿಗಳನ್ನು ನಿಯಮಿಸಲಾಗಿದೆ. ಅವಶ್ಯಕತೆಗೆ ಅನುಗುಣವಾಗಿ ಜಾನುವಾರುಗಳಿಗೆ ಮೇವು ವಿತರಿಸಲಾಗುತ್ತಿದೆ. ಇನ್ನೂ ಕೆಲಗ್ರಾಮಗಳಲ್ಲಿ ಮೇವಿನ ಬೇಡಿಕೆ ಹೆಚ್ಚಾಗಿದ್ದು ಆಲಗೂರು, ಮುತ್ತೂರು ಮುಂತಾದ ಕಡೆಗಳಲ್ಲಿ ಹೆಚ್ಚು ಮೇವು ನೀಡುವಂತೆ ರೈತರು ಮನವಿ ಮಾಡಿದ್ದು ರೈತರ ಬೇಡಿಕೆಗೆ ಅನುಗುಣವಾಗಿ ಕ್ರಮ ಜರುಗಿಸಲು ಸೂಚಿಸಿದ್ದೇನೆ ಎಂದರು.
ತಾಲೂಕು ಆಡಳಿತದಿಂದ ಕಾಳಜಿ ಕೇಂದ್ರಗಳನ್ನು 23 ಗ್ರಾಮಗಳಲ್ಲಿಯೂ ಪ್ರಾರಂಭಿಸಲಾಗಿದೆ. ರೈತರು ಕೇಂದ್ರಗಳಿಗೆ ಬಂದರೆ ಮೇವು ಮತ್ತು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುವುದು. ಪ್ರವಾಹ ಹೆಚ್ಚಾಗದಂತೆ ಕ್ರಮ ಜರುಗಿಸಲಾಗಿದ್ದು,ಆಲಮಟ್ಟಿ ಜಲಾಶಯ ದಿಂದ 3.5 ಲಕ್ಷ ಕ್ಯುಸೆಕ್ ನೀರು ಹರಿ ಬಿಡಲಾಗುತ್ತದೆ. ಸರ್ಕಾರ ಪ್ರವಾಹ ಪರಿಸ್ಥಿಯ ಮೇಲೆ ನಿಗಾ ವಹಿಸಿದ್ದು ಅಗತ್ಯ ಕ್ರಮ ಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
ಯಾವ ಪುರುಷಾರ್ಥಕ್ಕೆ ಬಿಜೆಪಿ-ಜೆಡಿಎಸ್‌ನಿಂದ ಪಾದಯಾತ್ರೆ?: ಸಚಿವ ಎಚ್.ಕೆ.ಪಾಟೀಲ್
ಜಿಲ್ಲಾಧಿಕಾರಿ ಜಾನಕಿ.ಕೆ.ಎಂ. ಜಿಪಂ ಸಿಇಓ ಶಶಿಧರ ಕುರೇರ್, ಎಸಿ ಶ್ವೇತಾ ಬೀಡಿಕರ, ತಹಸೀಲ್ದಾರ್ ಸದಾಶಿವ ಮುಕ್ಕೊಜಿ, ಮಾಜಿ ಶಾಸಕ ಆನಂದ ನ್ಯಾಮಗೌಡ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವರ್ಧಮಾನ ನ್ಯಾಮಗೌಡ, ಅಭಯ ಕುಮಾರ ನಾಂದ್ರೇಕರ, ರಾಜು ಪರಮಗೊಂಡ, ಅಣ್ಣಪ್ಪ ಪರಮಗೊಂಡ, ಸಚಿನ ಖಿದ್ರಾಪೂರ ಸೇರಿದಂತೆ ಪಕ್ಷದ ಕಾರ್ಯಕರ್ತರು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.