ಡಿಜಿಟಲ್ ನತ್ತ ಅಂಗನವಾಡಿ ಕೇಂದ್ರಗಳು, ಕಾರ್ಯಕರ್ತೆಯರಿಗೆ ಬಂತು ಸ್ಮಾರ್ಟ್‌ ಫೋನ್‌

By Web Desk  |  First Published Sep 20, 2019, 11:14 AM IST

ಅಂಗನವಾಡಿ ಕಾರ್ಯಕರ್ತೆಯರಿಗೆ ಬಂತು ಸ್ಮಾರ್ಟ್‌ ಫೋನ್‌| ಕಾರ್ಯ ಚಟುವಟಿಕೆ ಗಣಕೀರಣಗೊಳಿಸುವ ಉದ್ದೇಶದಿಂದ ಸ್ಮಾರ್ಟ್‌ ಫೋನ್‌ ವಿತರಣೆಗೆ ಮುಂದಾದ  ಸರ್ಕಾರ| ಜಿಲ್ಲೆಯಲ್ಲಿ 871 ಮಂದಿ ಅರ್ಹ ಕಾರ್ಯಕರ್ತೆಯರಿಗೆ ವಿತರಣೆ| ಅಂಗನವಾಡಿ ಕಾರ್ಯಕರ್ತೆಯರ ಹಾಜರಾತಿ ಕೂಡ ಇದರಲ್ಲಿ ದಾಖಲಿಸಲು ಸಹಕಾರಿ| 


* ವಿಘ್ನೇಶ್ ಭೂತನಕಾಡು

ಮಡಿಕೇರಿ:(ಸೆ.20) ಅಂಗನವಾಡಿ ಕೇಂದ್ರಗಳ ದೈನಂದಿನ ಕಾರ್ಯ ಚಟುವಟಿಕೆಗಳನ್ನು ಗಣಕೀಕೃತಗೊಳಿಸುವ ಉದ್ದೇಶದಿಂದ ಅಂಗನವಾಡಿ ಕಾರ್ಯಕರ್ತರಿಗೆ ಸರ್ಕಾರ ಸ್ಮಾರ್ಟ್‌ ಫೋನ್‌ ವಿತರಿಸಲು ನಿರ್ಧರಿಸಿದ್ದು, ಕೊಡಗು ಜಿಲ್ಲೆಯ 871 ಅಂಗನವಾಡಿ ಕಾರ್ಯಕರ್ತೆಯರಿಗೆ ಈ ಯೋಜನೆ ಲಭ್ಯವಾಗಲಿದೆ ಎಂದು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಅರುಂಧತಿ ಅವರು ಹೇಳಿದರು. 

Tap to resize

Latest Videos


ಈ ಬಗ್ಗೆ ಮಾಹಿತಿ ನೀಡಿದ ಅವರು, ಕೇಂದ್ರ ಸರ್ಕಾರ ಪೋಷಣೆ ಅಭಿಯಾನ ಯೋಜನೆಯಡಿಯಲ್ಲಿ ಅಂಗನವಾಡಿ ಕೇಂದ್ರಗಳನ್ನು ಆನ್‌ಲೈನ್‌ ವ್ಯಾಪ್ತಿಗೆ ತರಲು ಯೋಜನೆ ಸಿದ್ಧಪಡಿಸಿದೆ. ಇದಕ್ಕಾಗಿ ಸ್ನೇಹಾ ಆ್ಯಪ್‌ ರೂಪಿಸಿದೆ. ಅಂಗನವಾಡಿ ಕಾರ್ಯಕರ್ತೆಯರು ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್‌), ಮಾತೃಪೂರ್ಣಸ ಮಾತೃವಂದನ, ಮಾತೃಶ್ರೀ, ಭಾಗ್ಯಲಕ್ಷ್ಮೇ ಯೋಜನೆ ಸೇರಿದಂತೆ ಕೇಂದ್ರದ ಪ್ರತಿನಿತ್ಯದ ಆಗುಹೋಗುಗಳ ಕುರಿತು ಸುಮಾರು 40 ಬಗೆಯ ಕಡತಗಳನ್ನು ನಿರ್ವಹಣೆ ಮಾಡಬಹುದಾಗಿದೆ. ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್‌ ತಲುಪಿದ್ದು, ಜಿಲ್ಲೆಯ ಕಾರ್ಯಕರ್ತರಿಗೆ ಇನ್ನಷ್ಟೇ ದೊರಕಲಿದೆ ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಾರ್ಯಕರ್ತರ ಮತ್ತು ಅಧಿಕಾರಿಗಳ ಕಾರ್ಯ ಒತ್ತಡ ತಗ್ಗಿಸಲು ಹಾಗೂ ಅಂಗನವಾಡಿ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲು ಇಲಾಖೆಯು ಅಂಗನವಾಡಿಗಳನ್ನು ಆನ್‌ಲೈನ್‌ ವ್ಯಾಪ್ತಿಗೆ ತರಲು ಮುಂದಾಗಿದೆ. ಕಾರ್ಯಕರ್ತೆಯರು ಸ್ಮಾರ್ಟ್‌ಫೋನ್‌ ಮೂಲಕ ದಾಖಲಿಸುವ ಪ್ರತಿ ವಿವರವೂ ಇಲಾಖೆಯ ಕೇಂದ್ರ ಕಚೇರಿಯ ಸರ್ವರ್‌ನಲ್ಲಿ ಅಡಕವಾಗುತ್ತದೆ. ಈ ದತ್ತಾಂಶವನ್ನು ರಾಜ್ಯ, ಜಿಲ್ಲಾ ಮಟ್ಟದ ಅಧಿಕಾರಿಗಳು ಕುಳಿತಲ್ಲೇ ಪರಾಮರ್ಶಿಸಬಹುದು ಎಂದರು.

ಟ್ಯಾಬ್‌ ವಿತರಣೆ:

ಅಧಿಕಾರಿಗಳು ಹಾಗೂ ಮೇಲ್ವಿಚಾರಕರಿಗೆ ಸ್ನೇಹಾ ಆ್ಯಪ್‌ ಬಳಕೆಗೆ ಪ್ರತ್ಯೇಕ ಯೂಸರ್‌ ನೇಮ್‌ ಮತ್ತು ಪಾಸ್‌ವರ್ಡ್‌ ನೀಡಲಾಗುತ್ತದೆ. ಈಗಾಗಲೇ ಮೇಲ್ವಿಚಾರಕರಿಗೆ ಟ್ಯಾಬ್‌ ವಿತರಿಸಲಾಗಿದ್ದು, ಅವರು ಟ್ಯಾಬ್‌ ಮೂಲಕವೇ ಮಕ್ಕಳ ಆಧಾರ್‌ ಸಂಖ್ಯೆ ಜೋಡಣೆ ಹಾಗೂ ಅಂಗನವಾಡಿಗಳನ್ನು ಜಿಪಿಎಸ್‌ ಜಾಲಕ್ಕೆ ಸಂಪರ್ಕಿಸುವ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೊಡಗು ಜಿಲ್ಲೆಯಲ್ಲಿ 871 ಅಂಗನವಾಡಿಗಳಿದ್ದು, ಎಲ್ಲ ಕಾರ್ಯಕರ್ತರಿಗೂ ಸ್ಮಾರ್ಟ್‌ ಫೋನ್‌ ವಿತರಿಸಲಾಗುತ್ತದೆ. ಮಡಿಕೇರಿ ತಾಲೂಕಿನಲ್ಲಿ 251, ವಿರಾಜಪೇಟೆ ತಾಲೂಕಿನಲ್ಲಿ 335, ಸೋಮವಾರಪೇಟೆ ತಾಲೂಕಿನಲ್ಲಿ 284 ಕಾರ್ಯಕರ್ತೆಯರಿದ್ದು, ಇವರಿಗೆ ಸ್ಮಾರ್ಟ್‌ ಫೋನ್‌ ದೊರಕಲಿದೆ. ಮೊಬೈಲ್‌ ಜತೆಗೆ ಸಿಮ್‌ ಕಾರ್ಡ್‌ ಸಹ ನೀಡಲಿದ್ದು, ಇಂಟರ್‌ನೆಟ್‌ ಸೇವಾ ವೆಚ್ಚವನ್ನು ಇಲಾಖೆಯೇ ಭರಿಸಲಿದೆ ಎಂದು ತಿಳಿಸಿದರು. 

ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿನ ಅಪೌಷ್ಟಿಕತೆ ನಿವಾರಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಪೋಷಣ ಅಭಿಯಾನ ಮಾಸಾಚರಣೆ ಹಮ್ಮಿಕೊಂಡಿದ್ದು, ಆರು ವರ್ಷದ ಮಕ್ಕಳಲ್ಲಿ ಉಂಟಾಗುವ ಕುಂಠಿತ ಬೆಳವಣಿಗೆಯನ್ನು ತಡೆಯುವುದು, ಮಕ್ಕಳಿನ ಅಪೌಷ್ಟಿಕತೆ ತಡೆಯುವುದು, ಚಿಕ್ಕ ಮಕ್ಕಳಲ್ಲಿ ಉಂಟಾಗುವ ರಕ್ತಹೀನತೆ ಕಡಿಮೆ ಮಾಡುವುದು, 15-49 ವರ್ಷದೊಳಗಿನ ಮಹಿಳೆಯರಲ್ಲಿ ಉಂಟಾಗುವ ರಕ್ತಹೀನತೆ ಕಡಿಮೆ ಮಾಡುವುದು, ಕಡಿಮೆ ತೂಕದ ಮಕ್ಕಳ ಜನನ ನಿಯಂತ್ರಿಸುವುದು ಪೋಷಣ ಅಭಿಯಾನದ ಕಾರ್ಯಕ್ರಮವಾಗಿದೆ.

ವಿವಿಧ ಮಾಹಿತಿ ದಾಖಲಿಸಿಕೊಳ್ಳಲು ಸಹಕಾರಿ

ಗರ್ಭಿಣಿ ಮತ್ತು ಬಾಣಂತಿಯರಿಗೆ ಅರಿವು ಮೂಡಿಸುವುದು. ಗರ್ಭಿಣಿ ಮತ್ತು ಬಾಣಂತಿಯರ ತೂಕ, ಗರ್ಭಿಣಿ ಮತ್ತು ಬಾಣಂತಿಯರಿಗೆ ತೆಗೆದುಕೊಳ್ಳಬೇಕಾದ ಪೌಷ್ಟಿಕ ಆಹಾರದ ಬಗ್ಗೆ ತಿಳಿವಳಿಕೆ ನೀಡುವುದು. ಗರ್ಭಿಣಿ ಮತ್ತು ಬಾಣಂತಿಯರಿಗೆ ಟಿ.ಟಿ ಚುಚ್ಚುಮದ್ದು ನೀಡಲು ಕ್ರಮ ಕೈಗೊಳ್ಳುವುದು, ಗರ್ಭಿಣಿ ಮತ್ತು ಬಾಣಂತಿಯರಿಗೆ ಇರುವಂತಹ ಯೋಜನೆಗಳಾದ ಮಾತೃಪೂರ್ಣ, ಪ್ರಧಾನಮಂತ್ರಿ ಮಾತೃ ವಂದನಾ, ಮುಖ್ಯಮಂತ್ರಿ ಮಾತೃಶ್ರೀ ಮತ್ತು ಜನನಿ ಸುರಕ್ಷಾ ಯೋಜನೆಯ ಬಗ್ಗೆ ತಿಳಿವಳಿಕೆ ನೀಡುವುದು ಮತ್ತಿತರ ಕಾರ್ಯಕ್ರಮಗಳನ್ನು ಈ ಸ್ಮಾರ್ಟ್‌ ಫೋನ್‌ನಲ್ಲಿ ಮಾಹಿತಿ ದಾಖಲೀಕರಿಸಬಹುದಾಗಿದೆ.

ಅಂಗನವಾಡಿ ಕಾರ್ಯಕರ್ತೆಯರ ಹಾಜರಾತಿಯೂ ಕೂಡ ಇದರಲ್ಲಿ ದಾಖಲಿಸಲು ಸಹಕಾರಿಯಾಗಿದೆ. ಸ್ಮಾರ್ಟ್‌ಫೋನ್‌ ಬಂದ ನಂತರ ಇದರ ಬಳಕೆಯ ಬಗ್ಗೆ ಜಿಲ್ಲೆಯ ಕಾರ್ಯಕರ್ತರಿಗೆ ತರಬೇತಿ ಕಾರ್ಯಕ್ರಮ ನಡೆಯಲಿದೆ.
ಈಗಾಗಲೇ ಸರ್ಕಾರ ರಾಜ್ಯದ ವಿವಿಧ ಜಿಲ್ಲೆಗಳ ಅಂಗನವಾಡಿ ಕಾರ್ಯಕರ್ತರಿಗೆ ಸ್ಮಾರ್ಟ್‌ಫೋನ್‌ ವಿತರಿಸಿದೆ. ಇದೀಗ ಮೊಬೈಲ್‌ ಖರೀದಿ ಪ್ರಕ್ರಿಯೆಯನ್ನು ಕೇಂದ್ರ ಕಚೇರಿ ಮಾಡುತ್ತಿದ್ದು, ಕೊಡಗು ಜಿಲ್ಲೆಯ 871 ಅಂಗನವಾಡಿ ಕಾರ್ಯಕರ್ತರಿಗೆ ಸ್ಮಾರ್ಟ್‌ ಫೋನ್‌ ಬರಲಿದೆ. ಮಹಿಳಾ ಮತ್ತು ಮಕ್ಕಳ ಅಪೌಷ್ಟಿಕತೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ದಿನ ನಿರ್ವಹಣೆ ಮಾಡಬಹುದು. ಇದರಿಂದ ಕಾರ್ಯಕರ್ತೆಯರಿಗೂ ಅನುಕೂಲವಾಗಲಿದೆ ಎಂದು ಹೇಳಿದರು. 

click me!