
ಗುಳೇದಗುಡ್ಡ(ನ.19): ರಾಜ್ಯದ ತುಂಬೆಲ್ಲ ಬರ ಆವರಿಸಿದೆ. ಇದರಿಂದ ರೈತ ಸಂಕಷ್ಟದಲ್ಲಿದ್ದಾನೆ. ತಕ್ಷಣ ಸರ್ಕಾರ ಸ್ಪಂದಿಸಿ ಬರ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತ ಮಾವಿನಮರದ ಆಗ್ರಹಿಸಿದ್ದಾರೆ.
ಶನಿವಾರ ತಾಲೂಕಿನ ಹಂಸನೂರ ಗ್ರಾಮದ ರೈತ ವಸಂತರಾವ್ ಕುಲಕರ್ಣಿ ಅವರ ಹೊಲಕ್ಕೆ ಭೇಟಿ ನೀಡಿದ ಅವರು, ಮಳೆ ಇಲ್ಲದೇ ಒಣಗಿದ ಗೋವಿನಜೋಳ ಪೈರು ಕಂಡು ಮಾತನಾಡಿದ ಅವರು, ರಾಜ್ಯ ಸರಕಾರ 236 ತಾಲೂಕುಗಳ ಪೈಕಿ 216 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿ 45 ದಿನಗಳಾದರೂ ಪರಿಹಾರ ನೀಡಿಲ್ಲ. ಬರ ಪರಿಹಾರ ಕಾಮಗಾರಿ ಕೂಡ ಆರಂಭಿಸಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರದ ತಾಂಡವ, ನೈತಿಕತೆ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬಿಜೆಪಿ
ತಾಲೂಕಿನಲ್ಲಿ ಬಿತ್ತಿದ ಹೆಸರು, ಗೋವಿನಜೋಳ, ಸೂರ್ಯಕಾಂತಿ, ಮೆಣಸು, ಸಜ್ಜೆ, ತೊಗರಿ ಸೇರಿದಂತೆ ಇತರೇ ದ್ವಿದಳ ಧಾನ್ಯಗಳ ಬೆಳೆಗಳು ಸಂಪೂರ್ಣ ನಾಶವಾಗಿವೆ. ಈಗಾಗಲೇ ಸರ್ಕಾರ ರಾಜ್ಯದ ಪ್ರತಿ ಜಿಲ್ಲೆಗಳಿಂದ ವರದಿ ತರಿಸಿಕೊಂಡಿದೆ. ಬಾಗಲಕೋಟೆ ಜಿಲ್ಲೆಯಲ್ಲಿಯೇ ಮುಂಗಾರು ಬೆಳೆಯ ಪ್ರತಿಶತ 90ರಷ್ಟು ಅಂದರೆ 2.36 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದ್ದು, ಅದರಲ್ಲಿ ಸರಿಸುಮಾರು 1.93 ಲಕ್ಷ ಹೆಕ್ಟೇರ್ ಬೆಳೆ ಸಂಪೂರ್ಣವಾಗಿ ನಾಶವಾಗಿದೆ ಎಂದು ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅಂದಾಜು ₹2 ಸಾವಿರ ಕೋಟಿಯಷ್ಟು ಬಾಗಲಕೋಟೆ ಜಿಲ್ಲೆಯಲ್ಲಿಯೇ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಡಳಿತ ವರದಿ ನೀಡಿದ್ದರೂ ತ್ವರಿತಔಆಗಿ ಬರ ಕಾಮಗಾರಿಗಳು ಆರಂಭವಾಗಿಲ್ಲ.
ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ. ಆರ್.ಎಫ್. ಪ್ರಕಾರ ತುರ್ತಾಗಿ ಬೆಳೆ ಹಾನಿ ಪರಿಹಾರ ₹264 ಕೋಟಿಯಷ್ಟು ಹಣ ತುರ್ತಾಗಿ ಕೊಡಬೇಕಾಗಿತ್ತು. ರಾಜ್ಯ ಸರ್ಕಾರ ನ.4ರಂದು ಹಣವನ್ನು ಬಿಡುಗಡೆ ಮಾಡಿದೆ. ಬಾಗಲಕೋಟೆ ಜಿಲ್ಲೆಗೆ ₹13.5 ಕೋಟಿ ಬರಗಾಲ ಕಾಮಗಾರಿ ತೆಗೆದುಕೊಳ್ಳಲು ಹಣ ಬಿಡುಗಡೆ ಮಾಡಿದೆ. ಆದರೂ ಬರ ಕಾಮಗಾರಿ ಆರಂಭವಾಗಿಲ್ಲ ಎಂದು ಹನಮಂತ ಮಾವಿನಮರದ ಆರೋಪಿಸಿದರು.
ರೈತ ಬಿತ್ತನೆ ಮಾಡಿ ಶ್ರಮವಹಿಸಿ ಅನ್ನವನ್ನು ಕೊಡದಿದ್ದರೆ ನಾವ್ಯಾರೂ ಬದುಕಲು ಸಾಧ್ಯವಿಲ್ಲ. ದೇಶದ ಜಿಡಿಪಿಯಲ್ಲಿ ಬಹುದೊಡ್ಡ ಪಾಲು ರೈತರದಿದೆ. ಆ ಕಾರಣ ಸರ್ಕಾರ ತುರ್ತಾಗಿ ಬೆಳೆ ಪರಿಹಾರ ಘೋಷಣೆ ಮಾಡಬೇಕು. ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್. ಪ್ರಕಾರ ಪರಿಹಾರ ಒಂದು ಹೆಕ್ಟೇರ್‌ಗೆ ₹17 ಸಾವಿರ ಕೊಡುವ ಬದಲು, ಪ್ರತಿ ಎಕರೆಗೆ ಕನಿಷ್ಟ ₹25 ಸಾವಿರ ಬೆಳೆಹಾನಿ ಪರಿಹಾರ ನೀಡಬೇಕು ಎಂಬುದು ಜೆಡಿಎಸ್ ಆಗ್ರಹವಾಗಿದೆ ಎಂದು ಹನಮಂತ ಮಾವಿನಮರದ ತಿಳಿಸಿದರು.
ಕಾರಜೋಳರು ತಮ್ಮ ಡ್ರೈವರ್ ಪಗಾರ ಎಲ್ಲಿಂದ ಕೊಟ್ಟಿದ್ದಾರೆ?: ಸಚಿವ ತಿಮ್ಮಾಪುರ
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಬಾಲು ಹುನಗುಂಡಿ, ಜೆಡಿಎಸ್ ಅಲ್ಪಸಂಖ್ಯಾತ ಮುಖಂಡ ಅನ್ವರಖಾನ್ ಪಠಾಣ, ಜೆಡಿಎಸ್ ನೇಕಾರ ಘಟಕದ ಅಧ್ಯಕ್ಷ ಚಂದ್ರಕಾಂತ ಶೇಖಾ, ಮುಖಂಡರಾದ ಲಕ್ಷ್ಮಣ ಹಾಲನ್ನವರ, ಶಿವು ವಾಲೀಕಾರ, ಪಿಂಟು ರಾಠೋಡ, ಶಿವು ಗೊರವರ, ಯುವರಾಜ ರಾಠೋಡ, ಹುಚ್ಚೇಶ ಹದ್ದನ್ನವರ, ಹನಮಂತ ನರಲಾರ್, ಉಮೇಶ ಮುಗಜೋಳ, ಇತರರು ಇದ್ದರು.
ಪ್ರತಿ ಎಕರೆ ಬೆಳೆ ಹಾನಿಗೆ ಕನಿಷ್ಠ ₹25 ಸಾವಿರ ಪರಿಹಾರ ನೀಡಿ
ಪ್ರತಿ ಎಕರೆ ಬೆಳೆ ಹಾನಿಗೆ ಕನಿಷ್ಠ ₹25 ಸಾವಿರ ಪರಿಹಾರ ಕೊಡಬೇಕು, ನರೇಗಾ ಯೋಜನೆಯಡಿ ಮಾನವದಿನ ಹೆಚ್ಚಳ, ಉದ್ಯೋಗ ಸೃಷ್ಠಿ, ಕುಡಿಯುವ ನೀರಿನ ಪೂರೈಕೆ, ಕಾರ್ಮಿಕರ ಹಣ ತಕ್ಷಣ ಅವರ ಅಕೌಂಟ್‌ಗೆ ಆದಷ್ಟು ಬೇಗ ಜಮೆ ಮಾಡಬೇಕು. ಬರ ಕಾಮಗಾರಿಗಳು ತಕ್ಷಣದಿಂದ ಆರಂಭವಾಗಬೇಕು. ಹೊಲಗಳಲ್ಲಿ ರೈತ ಕಾರ್ಮಿಕರ ಕಾಮಗಾರಿಗಳು ಆರಂಭವಾಗಬೇಕು. ಗುಳೇ ಹೋಗುವುದನ್ನು ತಪ್ಪಿಸಲು ಸರ್ಕಾರ ರೈತರಿಗೆ ತಕ್ಷಣ ಉದ್ಯೋಗ ಸೃಷ್ಟಿ ಮಾಡಬೇಕು. ಉದ್ಯೋಗ ಖಾತ್ರಿಯಲ್ಲಿ 100 ದಿನಗಳ ಬದಲಿಗೆ 200 ಹೆಚ್ಚಿನ ಮಾನವ ದಿನಗಳನ್ನು ನೀಡಬೇಕು. ದನ-ಕರುಗಳಿಗೆ ಮೇವು, ಗ್ರಾಮಗಳಿಗೆ ಕುಡಿಯುವ ನೀರು, ಬರಗಾಲ ಪರಿಹಾರ ಕಾಮಗಾರಿಗಳು ತುರ್ತಾಗಿ ರಾಜ್ಯ ಸರ್ಕಾರ ಕೈಗೆತ್ತಿಕೊಂಡು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಹನಮಂತ ಮಾವಿನಮರದ ತಿಳಿಸಿದರು.