ನವಲಿ ಸಮಾಂತರ ಜಲಾಶಯ: ಸಿಎಂ ಅಧ್ಯಕ್ಷತೆಯಲ್ಲಿ ಸಭೆ| ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಯ ಪ್ರತಿನಿಧಿಗಳು ಭಾಗಿ| ನವಲಿ ಸಮಾಂತರ ಜಲಾಶಯ ಡಿಪಿಆರ್ ರಚನೆಗೆ ಕಳೆದ ಸಾಲಿನ ಬಜೆಟ್‌ನಲ್ಲಿ 14 ಕೋಟಿ| ಜಲಾಶಯ ಜಾರಿ ಮಾಡುವುದಕ್ಕೆ ಪಕ್ಕದ ರಾಜ್ಯಗಳ ಸಮ್ಮತಿಯೂ ಅಗತ್ಯ| ಈ ಕುರಿತು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ ಸಿಎಂ|
ಕೊಪ್ಪಳ(ಮಾ.04): ತುಂಗಭದ್ರಾ ಜಲಾಶಯದಲ್ಲಿ ಹೂಳು ತೆಗೆಯುವುದು ಅಸಾಧ್ಯ ಎಂದು ಕೈಚೆಲ್ಲಿರುವ ಹಿನ್ನೆಲೆ ಪರ್ಯಾಯವಾಗಿ ನವಲಿ ಸಮಾಂತರ ಜಲಾಶಯ ನಿರ್ಮಾಣ ಯೋಜನೆಯನ್ನು ತ್ವರಿತಗೊಳಿಸಲು ಬೆಂಗಳೂರಿನ ವಿಧಾನಸೌಧದಲ್ಲಿ ಮಂಗಳವಾರ ಸಿಎಂ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಮೂರು ಜಿಲ್ಲೆಯ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ಸುಮಾರು 30 ಟಿಎಂಸಿ ಹೂಳು ತುಂಬಿರುವುದರಿಂದ ಪರ್ಯಾಯ ಯೋಜನೆಯ ಜಾರಿ ತುರ್ತು ಅಗತ್ಯವಾಗಿದೆ ಎನ್ನುವ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಅಲ್ಲದೆ ಈಗಾಗಲೇ ಕೈಗೆತ್ತಿಕೊಂಡಿರುವ ನವಲಿ ಸಮಾಂತರ ಜಲಾಶಯ ಡಿಪಿಆರ್ ರಚನೆಗೆ ಕಳೆದ ಸಾಲಿನ ಬಜೆಟ್‌ನಲ್ಲಿ 14 ಕೋಟಿ ನೀಡಲಾಗಿದೆ. ಆದರೆ, ಯೋಜನೆಯನ್ನು ತ್ವರಿತವಾಗಿ ಅನುಷ್ಠಾನ ಮಾಡಲು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ 5 ಸಾವಿರ ಕೋಟಿ ಘೋಷಣೆಯ ಅಗತ್ಯವನ್ನು ಮೂರು ಜಿಲ್ಲೆಯ ಪ್ರತಿನಿಧಿಗಳು ಒತ್ತಾಯಿಸಿದರು.
BPL ಕಾರ್ಡ್ ಹಿಂದಿರುಗಿಸಲು ಮಾ. 15 ಕೊನೆಯ ದಿನ
ಸಕಾರಾತ್ಮಕವಾಗಿಯೇ ಸ್ಪಂದಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಪರ್ಯಾಯ ಜಲಾಶಯ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ. ಈ ಕಾರಣಕ್ಕಾಗಿಯೇ ಕಳೆದ ಸಾಲಿನ ಬಜೆಟ್‌ನಲ್ಲಿ .14 ಕೋಟಿ ನೀಡಲಾಗಿದೆ. ಜಾರಿ ಮಾಡುವುದಕ್ಕೆ ಪಕ್ಕದ ರಾಜ್ಯಗಳ ಸಮ್ಮತಿಯೂ ಅಗತ್ಯವಿದೆ. ಈ ಕುರಿತು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಸಭೆಯಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ಲಕ್ಷ್ಮಣ ಸವದಿ, ಕಾಡಾ ಅಧ್ಯಕ್ಷ ತಿಪ್ರೇರುದ್ರಸ್ವಾಮಿ, ಸಂಸದರಾದ ಸಂಗಣ್ಣ ಕರಡಿ, ದೇವೇಂದ್ರಪ್ಪ, ಶಾಸಕರಾದ ಹಾಲಪ್ಪ ಆಚಾರ್, ಬಸವರಾಜ ದಢೇಸ್ಗೂರು, ಪರಣ್ಣ ಮುನವಳ್ಳಿ, ವೆಂಕರಾವ್ ನಾಡಗೌಡ, ಸೋಮಶೇಖರ ಸೇರಿದಂತೆ ನಾಲ್ಕು ಜಿಲ್ಲೆಗಳ ಜನಪ್ರತಿನಿಧಿಗಳು, ನೀರಾವರಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.